ಬೆಂಗಳೂರು ಮಹಾನಗರ ಪಾಲಿಕೆಯಿಂದ ತಲಕಾವೇರಿಗೆ 1 ಕೋಟಿ ರೂ. ನೆರವು

ಮಡಿಕೇರಿ ಅ.3 : ದಕ್ಷಿಣದ ಗಂಗೆ ಎಂದೇ ಪ್ರಸಿದ್ಧಿಯಾಗಿರುವ ಕೊಡಗಿನ ಪವಿತ್ರ ತೀರ್ಥಕ್ಷೇತ್ರವಾದ ತಲಕಾವೇರಿ ಹಾಗೂ ಭಾಗಮಂಡಲ ಕ್ಷೇತ್ರಗಳ ಅಭಿವೃದ್ಧಿಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಒಂದು ಕೋಟಿ ರೂ.ಗಳ ನೆರವು ಒದಗಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ವಸತಿ ಸಚಿವ ವಿ.ಸೋಮಣ್ಣ ಅವರು ಶನಿವಾರ ಚೆಕ್ ಹಸ್ತಾಂತರಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಮಡಿಕೇರಿ- ಗೋಣಿಕೊಪ್ಪ ದಸರಾ ಮತ್ತು ಕಾವೇರಿ ತೀರ್ಥೋದ್ಭವ ಪೂರ್ವ ಭಾವಿ ಸಭೆಯ ಸಂದರ್ಭ ಒಂದು ಕೋಟಿ ರೂ. ಮೊತ್ತದ ಚೆಕ್‍ನ್ನು ಅವರು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಗೆ ಹಸ್ತಾಂತರಿಸಿ ಈ ಹಣವನ್ನು ಕಾವೇರಿ ಕ್ಷೇತ್ರದ ಅಭಿವೃದ್ಧಿಗೆ ಇದನ್ನು ವಿನಿಯೋಗಿಸುವಂತೆ ತಿಳಿಸಿದರು.
ಕಳೆದ ಬಾರಿಗಿಂತ ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ. ರಾಷ್ಟ್ರ ವ್ಯಾಪಿ ಕೋವಿಡ್-19 ವೈರಾಣುವಿನ ಸಮಸ್ಯೆಯುಂಟಾಗಿದೆ. ಕೊಡಗಿನ ಕಾವೇರಿ ನೀರನ್ನು ಬೆಂಗಳೂರಿನ ಜನ ಕುಡಿಯುತ್ತಾರೆ. ಈ ನಿಟ್ಟಿನಲ್ಲಿ ಯಾವುದೇ ಲೋಪವಿಲ್ಲದಂತೆ ಕಾವೇರಿ ತೀರ್ಥೋದ್ಭವವನ್ನು ನಡೆಸಬೇಕಿದೆ ಎಂದರು.
ತಲಕಾವೇರಿ ಭಾಗಮಂಡಲ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಅವರು ಮಾತನಾಡಿ, ಮಹಾನಗರ ಪಾಲಿಕೆ ವತಿಯಿಂದ ದೇವಾಲಯ ಅಭಿವೃದ್ಧಿಗಾಗಿ 1 ಕೋಟಿ ಹಣ ನೀಡಿದೆ. ಈ ನಿಟ್ಟಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್, ಕಂದಾಯ ಸಚಿವ ಆರ್.ಅಶೋಕ್, ಉಸ್ತುವಾರಿ ಸಚಿವ ವಿ.ಸೋಮಣ್ಣ, ಶಾಸಕರಾದ ಬೋಪಯ್ಯ, ಅಪ್ಪಚ್ಚು ರಂಜನ್, ಪ್ರತಾಪ್ ಸಿಂಹ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ದೇವಾಲಯ ಸಮಿತಿ ಸಭೆಯಲ್ಲಿ ತೀರ್ಮಾನಿಸಿದಂತೆ ಸರಳವಾಗಿ ಮತ್ತು ಸಾಂಪ್ರದಾಯಿಕವಾಗಿ ಈ ಬಾರಿ ಕಾವೇರಿ ತೀರ್ಥೋದ್ಭವವನ್ನು ಆಚರಿಸಲಾಗುತ್ತದೆ ಎಂದು ಅವರು ಸಭೆಗೆ ತಿಳಿಸಿದರು.
ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪಿಂಡ ಪ್ರದಾನಕ್ಕೆ ಸಂಬಂಧಿಸಿದಂತೆ ಕೋವಿಡ್-19 ಮಾರ್ಗಸೂಚಿ ಅನ್ವಯ ಕ್ರಮ ವಹಿಸಲಾಗುವುದು. ತೀರ್ಥೋದ್ಭವದ ನಂತರ ಪುಣ್ಯ ಸ್ನಾನ ಮಾಡುವ ಪದ್ಧತಿ ಇದೆ. ಆದರೆ ಈ ಬಾರಿ ತೀರ್ಥ ಸ್ನಾನದ ಬದಲು ತೀರ್ಥ ಪ್ರೋಕ್ಷಣೆ ಮಾತ್ರವೇ ಮಾಡುವ ನಿರ್ಧಾರ ಮಾಡಲಾಗಿದೆ ಎಂದು ಅವರು ಹೇಳಿದರು.
ಸರಳ ದಸರಾ: ಸಭೆಯಲ್ಲಿ ಮಾತನಾಡಿದ ಶಾಸಕ ಕೆ.ಜಿ. ಬೋಪಯ್ಯ ಅವರು ಮಡಿಕೇರಿ ದಸರಾ, ಮೈಸೂರು ದಸರಾದಂತೆ ವಿಜೃಂಭಣೆಯಿಂದ ನಡೆಯುತ್ತದೆ. ನಾಡಹಬ್ಬವಾಗಿ ಜಿಲ್ಲೆಯಲ್ಲಿ ಆಚರಿಸುತ್ತಿದ್ದೆವು. ಆದರೆ ಈ ಬಾರಿ ಕೋವಿಡ್-19 ಹಿನ್ನೆಲೆಯಲ್ಲಿ ದಸರಾ ಆಚರಣೆಯನ್ನು ಸಾಂಪ್ರದಾಯಿಕವಾಗಿ ಆಚರಿಸುವಂತಾಗಲಿ ಎಂದು ಹೇಳಿದರು.
ಆದರೆ ಕರಗ ಉತ್ಸವಕ್ಕೆ ಧಕ್ಕೆ ಆಗದಂತೆ ಶಾಸ್ತ್ರೋಕ್ತವಾಗಿ ನಡೆಯಬೇಕು. ದಸರಾದಂದು ಪಿಕ್‍ಅಪ್ ಜೀಪ್ ಬಳಸಿ ಕಳಶ ತೆಗೆದುಕೊಂಡು ಹೋಗುವಂತಾಗಲಿ ಎಂದು ಅವರು ಸಲಹೆ ಮಾಡಿದರು.
ಶಾಸಕ ಅಪ್ಪಚ್ಚು ರಂಜನ್ ಅವರು ಮಾತನಾಡಿ, ಕೋವಿಡ್-19 ಹಿನ್ನೆಯಲ್ಲಿ ದಸರಾ ಆಚರಣೆ ಸಂಬಂಧ ಹೆಚ್ಚು ಜನ ಸೇರುವುದು ಬೇಡ. ಈಗಾಗಲೆ ದಸರಾ ಸಮಿತಿ ಅಧ್ಯಕ್ಷರಾದ ರಾಬಿನ್ ದೇವಯ್ಯ ಅವರೂ ಸಹ ಸರಳ ಮತ್ತು ಸಾಂಪ್ರದಾಯಿಕ ದಸರಾ ಆಚರಣೆ ಮಾಡುವ ವಿಚಾರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಸಾಂಪ್ರದಾಯಿಕ ಆಚರಣೆಗೆ ಮಾತ್ರವೇ ಸೀಮಿತವಾಗಲಿ ಎಂದರು.
ಅಲ್ಲದೆ ಈ ಸಂದರ್ಭ 144 ಸೆಕ್ಷನ್ ಜಾರಿ ಮಾಡಿದರೆ ಒಳಿತು. ಹೆಚ್ಚು ಜನ ಸೇರಿದರೆ ಕೋವಿಡ್-19 ಹರಡುವ ಭೀತಿ ಇದೆ. ಆದ್ದರಿಂದ ದಸರಾ ಆಚರಣೆ ಸರಳವಾಗಿರಲಿ ಎಂದು ಅವರು ಹೇಳಿದರು.
ಈ ಸಂದರ್ಭ ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿ.ಪಂ. ಅಧ್ಯಕ್ಷ ಬಿ.ಎ.ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸಂಸದ ಪ್ರತಾಪ್‍ಸಿಂಹ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭನ್ವರ್‍ಸಿಂಗ್ ಮೀನಾ ಮತ್ತಿತರರು ಹಾಜರಿದ್ದರು.

