10 ಹೆಚ್.ಪಿ ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ಕಲ್ಪಿಸಲು ಮನವಿ : ಇನ್ನೂ ಪಾಲನೆಯಾಗದ ಸಿಎಂ ಆದೇಶ

October 3, 2020

ಮಡಿಕೇರಿ ಅ.3 : ಕೊಡಗು ಜಿಲ್ಲೆಯಲ್ಲಿ ಸುರಿದ ಮಹಾಮಳೆಯಿಂದಾಗಿ ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆಗಾರರು ಬಳಸುವ 10 ಹೆಚ್.ಪಿ ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ಕಲ್ಪಿಸಿಕೊಡಬೇಕು ಮತ್ತು ಹಳೇ ಬಾಕಿ ಇರುವ ಬಿಲ್ಲನ್ನು ಮನ್ನಾ ಮಾಡಬೇಕೆಂದು ಕೊಡಗು ಕಾಫಿ ಬೆಳೆಗಾರರು ಒತ್ತಾಯಿಸಿದ್ದಾರೆ.
ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಶಾಸಕ ಅಪ್ಪಚ್ಚು ರಂಜನ್ ಅವರ ಮೂಲಕ ಮನವಿ ಪತ್ರ ಸಲ್ಲಿಸಿದ ಕಾಫಿ ಬೆಳೆಗಾರರು, ಧಾರಾಕಾರ ಮಳೆಯಿಂದಾಗಿ ಕಾಫಿ ಫಸಲಿಗೆ ಹಾನಿಯಾಗಿರುವುದಲ್ಲದೆ ರೋಗಗಳಿಗೂ ತುತ್ತಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು. ಸರಿಯಾದ ಸಮಯದಲ್ಲಿ ಮಳೆಯಾಗದೇ ಇರುವುದರಿಂದ ನೀರಿಕ್ಷೆಗೆ ತಕ್ಕಂತೆ ಫಸಲು ಸಿಗದೆ ಬೆಳೆಗಾರರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಬೆಳೆಗಾರರ 10 ಹೆಚ್.ಪಿ. ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ಕಲ್ಪಿಸಿಕೊಡುವ ಮೂಲಕ ನೆರವಿಗೆ ಬರಬೇಕೆಂದು ಮನವಿ ಮಾಡಿದರು. ಇದರೊಂದಿಗೆ ಹಳೇ ಬಾಕಿ ಇರುವ ಬಿಲ್ಲನ್ನು ಕೂಡ ಮನ್ನಾ ಮಾಡಬೇಕು ಎಂದರು.
ರಾಜ್ಯದಲ್ಲಿ ಐ.ಪಿ ಸೆಟ್ ಬಳಕೆದಾರರಿಗೆ 10 ಹೆಚ್.ಪಿ ವರೆಗಿನ ಮೋಟಾರುಗಳಿಗೆ ಉಚಿತವಾಗಿ ವಿದ್ಯುತ್‍ನ್ನು ಉಪಯೋಗಿಸಲು ಸರ್ಕಾರ ಅನುಮತಿ ನೀಡಿದೆ. ಆದರೆ ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರು ಪ್ರತಿ ಬಿಲ್ಲನ್ನು ಪಾವತಿ ಮಾಡಬೇಕಾಗಿದೆ. ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮಕ್ಕೆ ತಂದ ನಂತರ ಬೇರೆ ಜಿಲ್ಲೆಗೆ ಯಾವ ರೀತಿ ಉಚಿತವಾಗಿ ನೀಡಲಾಗುತ್ತಿದೆಯೋ ಅದೇ ಮಾದರಿಯಲ್ಲಿ ಕೊಡಗಿಗೂ ನೀಡುವಂತೆ ಆದೇಶ ಮಾಡಿದ್ದಾರೆ. ಆದರೆ ಈ ಆದೇಶ ಇಲ್ಲಿಯವರೆಗೆ ಪಾಲನೆಯಾಗಿಲ್ಲವೆಂದು ಬೆಳೆಗಾರರು ಆರೋಪಿಸಿದರು.
ಮನವಿ ನೀಡುವ ಸಂದರ್ಭ ಕಾಫಿ ಬೆಳಗಾರರಾದ ಚಂದ್ರಶೇಖರ್ ಹೇರೂರು, ಮಂದೋಡಿ ಜಗನ್ನಾಥ್, ಪ್ರತಾಪ್ ಕಲ್ಲೂರು, ದಾಸಂಡ ರಮೇಶ್ ಚೆಂಗಪ್ಪ, ಗೌತಮ್ ಕಲ್ಲೂರು ಮತ್ತಿತರರು ಹಾಜರಿದ್ದರು.

error: Content is protected !!