ಮಡಿಕೇರಿ, ಗೋಣಿಕೊಪ್ಪ ದಸರಾ ಸರಳ : ಸಚಿವ ಸೋಮಣ್ಣ ಸಲಹೆ

October 3, 2020

ಮಡಿಕೇರಿ ಅ.3 : ಕೋವಿಡ್-19 ಹಿನ್ನೆಲೆ ಸರಳ ಹಾಗೂ ಸಾಂಪ್ರದಾಯಿಕವಾಗಿ ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ ಆಚರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮನವಿ ಮಾಡಿದ್ದಾರೆ.
ಮಡಿಕೇರಿಯಲ್ಲಿ ದಸರಾ ಸಮಿತಿ ಪದಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸಿದ ಅವರು ಪ್ರಸ್ತುತ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು, ಸೂಕ್ಷ್ಮತೆಯಿಂದ ಪ್ರತಿಯೊಬ್ಬರೂ ಕಾರ್ಯನಿರ್ವಹಿಸಬೇಕಿದೆ. ಸಂಪ್ರದಾಯ ಸಂಬಂಧಿಸಿದಂತೆ ಯಾವುದೇ ರೀತಿಯ ಅಪಚಾರ ಅಥವಾ ಲೋಪ ಉಂಟಾಗದಂತೆ ದಸರಾ ಆಚರಿಸಬೇಕು ಎಂದರು.
ಸಭೆಯಲ್ಲಿ ಮಾತನಾಡಿದ ಶಾಸಕ ಕೆ.ಜಿ. ಬೋಪಯ್ಯ ಅವರು ಮಡಿಕೇರಿ ದಸರಾ, ಮೈಸೂರು ದಸರಾದಂತೆ ವಿಜೃಂಭಣೆಯಿಂದ ನಡೆಯುತ್ತದೆ. ನಾಡಹಬ್ಬವಾಗಿ ಜಿಲ್ಲೆಯಲ್ಲಿ ಆಚರಿಸುತ್ತಿದ್ದೆವು. ಆದರೆ ಈ ಬಾರಿ ಕೋವಿಡ್-19 ಹಿನ್ನೆಲೆಯಲ್ಲಿ ದಸರಾ ಆಚರಣೆಯನ್ನು ಸಾಂಪ್ರದಾಯಿಕವಾಗಿ ಆಚರಿಸುವಂತಾಗಲಿ ಎಂದು ಹೇಳಿದರು.
ಆದರೆ ಕರಗ ಉತ್ಸವಕ್ಕೆ ಧಕ್ಕೆ ಆಗದಂತೆ ಶಾಸ್ತ್ರೋಕ್ತವಾಗಿ ನಡೆಯಬೇಕು. ದಸರಾದಂದು ಪಿಕ್‍ಅಪ್ ಜೀಪ್ ಬಳಸಿ ಕಳಶ ತೆಗೆದುಕೊಂಡು ಹೋಗುವಂತಾಗಲಿ ಎಂದು ಅವರು ಸಲಹೆ ಮಾಡಿದರು.
ಶಾಸಕ ಅಪ್ಪಚ್ಚು ರಂಜನ್ ಅವರು ಮಾತನಾಡಿ, ಕೋವಿಡ್-19 ಹಿನ್ನೆಯಲ್ಲಿ ದಸರಾ ಆಚರಣೆ ಸಂಬಂಧ ಹೆಚ್ಚು ಜನ ಸೇರುವುದು ಬೇಡ. ಈಗಾಗಲೆ ದಸರಾ ಸಮಿತಿ ಅಧ್ಯಕ್ಷರಾದ ರಾಬಿನ್ ದೇವಯ್ಯ ಅವರೂ ಸಹ ಸರಳ ಮತ್ತು ಸಾಂಪ್ರದಾಯಿಕ ದಸರಾ ಆಚರಣೆ ಮಾಡುವ ವಿಚಾರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಸಾಂಪ್ರದಾಯಿಕ ಆಚರಣೆಗೆ ಮಾತ್ರವೇ ಸೀಮಿತವಾಗಲಿ ಎಂದರು.
ಅಲ್ಲದೆ ಈ ಸಂದರ್ಭ 144 ಸೆಕ್ಷನ್ ಜಾರಿ ಮಾಡಿದರೆ ಒಳಿತು. ಹೆಚ್ಚು ಜನ ಸೇರಿದರೆ ಕೋವಿಡ್-19 ಹರಡುವ ಭೀತಿ ಇದೆ. ಆದ್ದರಿಂದ ದಸರಾ ಆಚರಣೆ ಸರಳವಾಗಿರಲಿ ಎಂದು ಅವರು ಹೇಳಿದರು.
ಈ ಸಂದರ್ಭ ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿ.ಪಂ. ಅಧ್ಯಕ್ಷ ಬಿ.ಎ.ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸಂಸದ ಪ್ರತಾಪ್‍ಸಿಂಹ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭನ್ವರ್‍ಸಿಂಗ್ ಮೀನಾ ಮತ್ತಿತರರು ಹಾಜರಿದ್ದರು.