ಮಡಿಕೇರಿಯಲ್ಲಿ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ : ಡ್ರಗ್ಸ್ ದಂಧೆ ವಿರುದ್ಧ ಕಠಿಣ ಕ್ರಮದ ಭರವಸೆ

ಮಡಿಕೇರಿ ಅ.3 : ರಾಜ್ಯದಲ್ಲಿ ಮಾದಕ ಡ್ರಗ್ಸ್ ಮಾರಾಟ ಮತ್ತು ಸೇವನೆಗೆ ಸಂಬಂಧಿಸಿದಂತೆ ಪೊಲೀಸರ ತನಿಖೆ ಚುರುಕಿನಿಂದ ಸಾಗಿದ್ದು ಚಿತ್ರಕಲಾವಿದರೂ ಸೇರಿದಂತೆ ಡ್ರಗ್ ಜಾಲದಲ್ಲಿ ತೊಡಗಿಸಿಕೊಂಡಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ.
ಪೊಲೀಸ್ ಮಹಾ ನಿರ್ದೇಶಕ ಸ್ಥಾನ ಅಲಂಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಕೊಡಗು ಜಿಲ್ಲೆಗೆ ಆಗಮಿಸಿದ ಪ್ರವೀಣ್ ಸೂದ್, ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು. ಕೊಡಗು ಪೊಲೀಸ್ ಇಲಾಖೆ ಕೊರೊನಾ ಸಂದರ್ಭ ಕೈಗೊಂಡ ಕಾರ್ಯಗಳು, ಪ್ರಾಕೃತಿಕ ವಿಕೋಪ ಎದುರಾದಾಗ ನಡೆಸಿದ ರಕ್ಷಣಾ ಕಾರ್ಯಾಚರಣೆ ಮತ್ತು ಕಾನೂನು ಸುವ್ಯವಸ್ಥೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಜಿಲ್ಲೆಯಲ್ಲಿ ಮಾದಕ ವಸ್ತುಗಳ ಕಾರ್ಯಾಚರಣೆ ಮತ್ತು ಹತ್ತಿಕ್ಕುವ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರಲ್ಲದೇ, ಜಿಲ್ಲಾ ಪೊಲೀಸ್ ಇಲಾಖೆ ಮೂಲಭೂತವಾಗಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸೂದ್, ರಾಜ್ಯದಲ್ಲಿ ಡ್ರಗ್ಸ್ ದಂಧೆಯನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಕಳೆದ 10 ವರ್ಷಗಳ ಮಾದಕ ವಸ್ತು ಪತ್ತೆ ಪ್ರಕರಣಗಳನ್ನು ಪಟ್ಟಿ ಮಾಡಿದರೆ, ಬೆಂಗಳೂರು ಹೊರತುಪಡಿಸಿದಂತೆ ಕೋಲಾರ, ಗುಲ್ಬರ್ಗ, ಮೈಸೂರು, ರಾಯಚೂರುಗಳಲ್ಲಿಯೂ ಹೆಚ್ಚಿನ ಪ್ರಕರಣಗಳು ಕಂಡು ಬಂದಿದೆ.
ಡ್ರಗ್ಸ್ ದಂಧೆ ವಿಚಾರದಲ್ಲಿ ಪೊಲೀಸ್ ಗುಪ್ತಚರ ಇಲಾಖೆ ವಿಫಲವಾಗಿಲ್ಲ ಎಂದು ಸಮರ್ಥಿಸಿಕೊಂಡ ಪ್ರವೀಣ್ ಸೂದ್, ಕ್ರಿಮಿನಲ್‍ಗಳನ್ನು ಹತ್ತಿಕ್ಕುವುದು ಮತ್ತು ಅನ್ಯಾಯದ ವಿರುದ್ಧ ಪೊಲೀಸ್ ಕಾರ್ಯಾಚರಣೆ ಒಂದು ನಿರಂತರ ಪ್ರಕ್ರಿಯೆಯಾಗಿದ್ದು, ಒಂದೇ ದಿನದಲ್ಲಿ ಇದು ಕೊನೆಯಾಗುವುದಿಲ್ಲ. ತಪ್ಪು ಮಾಡಿದ ಪೊಲೀಸರ ವಿರುದ್ಧವೂ ಕೂಡ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮಾತನಾಡುವ ಹಕ್ಕಿದೆ, ಹೀಗಾಗಿ ಕೆಲವರು ಡ್ರಗ್ಸ್ ವಿಚಾರದಲ್ಲಿ ಪೊಲೀಸ್ ಇಲಾಖೆ ವಿರುದ್ದ ಆರೋಪ ಮಾಡಿರಬಹುದು ಎಂದು ಹೇಳಿದ ಪ್ರವೀಣ್ ಸೂದ್, ಯಾವ ಇಲಾಖೆ ಬಗ್ಗೆ ಆರೋಪ ಮಾಡಲಾಗಿತ್ತೋ ಇಂದು ಅದೇ ಇಲಾಖೆ ಡ್ರಗ್ ದಂಧೆಯನ್ನು ಮಟ್ಟ ಹಾಕುತ್ತಿದೆ ಎಂದು ಸಮರ್ಥಿಸಿಕೊಂಡರು. ಚಲನಚಿತ್ರ ನಟ ನಟಿಯರನ್ನು ಮಾತ್ರವೇ ಡ್ರಗ್ ದಂಧೆಯಲ್ಲಿ ಗುರಿ ಮಾಡಲಾಗುತ್ತಿಲ್ಲ. ಎಲ್ಲಾ ಡ್ರಗ್ ಪೂರೈಕೆದಾರರು, ಬಳಕೆದಾರರು ಸೇರಿದಂತೆ ಒಂದು ಅಕ್ರಮ ವ್ಯವಸ್ಥೆಯ ವಿರುದ್ದವೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಕೊಡಗು ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಪ್ರಮಾಣ ಇತರ ಜಿಲ್ಲೆಗಳಿಗೆ ಹೋಲಿಸಿದರೆ ತೀರಾ ಕಡಿಮೆ ಇದ್ದು, ಜಿಲ್ಲೆಯ ಬಗ್ಗೆ ಹೆಚ್ಚಿನ ಚಿಂತೆ ತಮಗಿಲ್ಲ. ಆದರೆ ಹೋಂಸ್ಟೇ, ರೆಸಾರ್ಟ್‍ಗಳಲ್ಲಿ ಮಾದಕ ದ್ರವ್ಯ ಬಳಸಲಾದ ಪಾರ್ಟಿಗಳು ನಡೆದಿದೆಯೇ ಎಂಬ ಬಗ್ಗೆಯೂ ಚರ್ಚೆ ನಡೆಸಿದ್ದೇನೆ. ಪ್ರವಾಸಿ ತಾಣವಾಗಿರುವ ಜಿಲ್ಲೆಯಲ್ಲಿ ಡ್ರಗ್ ಪ್ರಕರಣಗಳ ಬಗ್ಗೆ ಪರಿಶೀಲನೆ ಮತ್ತು ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಎಲ್ಲಾ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಪ್ರವೀಣ್ ಸೂದ್ ಹೇಳಿದರು.