ಯುಪಿ ಪ್ರಕರಣ ಖಂಡಿಸಿ ಮಡಿಕೇರಿಯಲ್ಲಿ ಡಿವೈಎಫ್‍ಐ ಪ್ರತಿಭಟನೆ

03/10/2020

ಮಡಿಕೇರಿ ಅ.3 : ಉತ್ತರ ಪ್ರದೇಶದಲ್ಲಿ ದಲಿತ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಖಂಡಿಸಿ, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್‍ಐ) ಕೊಡಗು ಜಿಲ್ಲಾ ಘಟಕ ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಹಾತ್ಮ ಗಾಂಧೀಜಿ ಮುಖವಾಡ ಧರಿಸಿ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಅತ್ಯಾಚಾರಿಗಳ ವಿರುದ್ಧ ಕಾನೂನು ಕ್ರಮಕ್ಕಾಗಿ ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ಡಿವೈಎಫ್‍ಐ ಸಂಚಾಲನಾ ಸಮಿತಿಯ ಜಿಲ್ಲಾಧ್ಯಕ್ಷ ಎಚ್.ಆರ್.ರಾಚಪ್ಪಾಜಿ, ಉತ್ತರ ಪ್ರದೇಶದ ಹತ್ರಾಸ್ ಎಂಬಲ್ಲಿ ದಲಿತ ಯುವತಿ ಅಮಾನವೀಯ ರೀತಿಯಲ್ಲಿ ಅತ್ಯಾಚಾರಕ್ಕೀಡಾಗಿ ಸಾವನ್ನಪ್ಪಿದ್ದಾಳೆ. ಅದೇ ದಿನ ಮತ್ತೊಬ್ಬ ದಲಿತ ಯುವತಿಯ ಮೇಲೂ ಅತ್ಯಾಚಾರ ನಡೆದು ಆಕೆಯನ್ನು ಕೂಡ ಕೊಲೆ ಮಾಡಲಾಗಿದೆ. ಈ ಕೃತ್ಯ ಎಸಗಿದವರನ್ನು ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು. ಪ್ರತಿಭಟನೆ ಸಂದರ್ಭ ದೌರ್ಜನ್ಯ ನಡೆಸಿದ ಪೆÇಲೀಸರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅತ್ಯಾಚಾರ ಪ್ರಕರಣಗಳು ದೇಶದಲ್ಲಿ ಪುನರಾವರ್ತಗೊಳ್ಳದಂತೆ ಕಟ್ಟುನಿಟ್ಟಿನ ಕಾನೂನು ಜಾರಿಗೆ ತರಬೇಕೆಂದು ಆಗ್ರಹಿಸಿದರು.
ದಲಿತರನ್ನು ಹೆಚ್ಚಾಗಿ ಶೋಷಣೆ ಮಾಡುತ್ತಿರುವ ರಾಜ್ಯ ಉತ್ತರ ಪ್ರದೇಶ. ಭಾರತಕ್ಕೆ ಸ್ವಾತಂತ್ರ್ಯ ದೊರಕಿದ್ದರೂ ಮಹಿಳೆಯರು ಒಂಟಿಯಾಗಿ ತಿರುಗಾಡಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದ ರಾಚಪ್ಪಾಜಿ, ಘಟನೆ ಕುರಿತು ಪ್ರಧಾನಿ ನರೇಂದ್ರಮೋದಿ ಅವರು ಪ್ರತಿಕ್ರಿಯೆ ನೀಡದೇ ಇರುವುದು ಸರಿಯಾದ ಕ್ರಮವಲ್ಲವೆಂದರು.
ನಂತರ ಪ್ರಭಾರ ಜಿಲ್ಲಾಧಿಕಾರಿ ಡಾ.ಸ್ನೇಹ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಸಮಿತಿಯ ಜಿಲ್ಲಾ ಸಂಚಾಲಕ ಶಾಹಿರ್, ಇರ್ಷಾದ್ ಪಾಡಿಯಾನಿ, ಅಬುದಾಹಿರ್ ಪಾಡಿಯಾನಿ, ಶಾಹಿದ್ ಕುಂಜಿಲ, ವಿರಾಜಪೇಟೆ ಘಟಕದ ಸದಸ್ಯ ನೌಶಿರ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.