ರಸ್ತೆಗಳ ದುರಸ್ತಿ ಮತ್ತು ಸ್ವಚ್ಛತಾ ಕಾರ್ಯಕ್ಕೆ ಪ್ರಕಾಶ್ ಆಚಾರ್ಯ ಒತ್ತಾಯ

04/10/2020

ಮಡಿಕೇರಿ ಅ.4 : ಮಡಿಕೇರಿ ನಗರದಲ್ಲಿ ಮಳೆಯ ವಾತಾವರಣ ಕಡಿಮೆಯಾಗಿದ್ದು, ಸಾಂಪ್ರದಾಯಿಕ ದಸರಾ ಹಬ್ಬ ಸಮೀಪಿಸುತ್ತಿದೆ. ತಕ್ಷಣ ನಗರಸಭೆ ರಸ್ತೆಗಳ ದುರಸ್ತಿ ಮತ್ತು ಸ್ವಚ್ಛತಾ ಕಾರ್ಯವನ್ನು ಆರಂಭಿಸಬೇಕೆಂದು ನಗರಸಭೆಯ ಮಾಜಿ ಸದಸ್ಯ ಪ್ರಕಾಶ್ ಆಚಾರ್ಯ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಳೆದ ಎರಡು ವರ್ಷಗಳಿಂದ ನಗರದಲ್ಲಿ ಯಾವುದೇ ರಸ್ತೆಗಳ ದುರಸ್ತಿ ಕಾರ್ಯ ನಡೆಯದೇ ಇರುವುದರಿಂದ ವಾಹನ ಚಾಲಕರು ಮಾತ್ರವಲ್ಲದೆ ಪಾದಾಚಾರಿಗಳು ಕೂಡ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರಸಭೆಯ ನೂತನ ಪೌರಾಯುಕ್ತ ರಾಮದಾಸ್ ಅವರು ಯುವ ಅಧಿಕಾರಿಯಾಗಿರುವುದರಿಂದ ಅಭಿವೃದ್ಧಿ ಕಾರ್ಯಗಳು ಚುರುಕುಗೊಳ್ಳುವ ವಿಶ್ವಾಸವಿದೆ. ಜನಪ್ರತಿನಿಧಿಗಳಿಲ್ಲದ ನಗರಸಭೆಯಲ್ಲಿ ಜಿಲ್ಲಾಧಿಕಾರಿಗಳೇ ಅಧ್ಯಕ್ಷರಾಗಿರುವುದರಿಂದ ತಕ್ಷಣ ರಸ್ತೆಗಳ ದುರಸ್ತಿ ಮತ್ತು ಸ್ವಚ್ಛತಾ ಕಾರ್ಯಕ್ಕೆ ಕ್ರಮ ಕೈಗೊಳ್ಳಬೇಕು. ಮಳೆಗಾಲ ಮುಗಿದು ಬಿಸಿಲಿನ ವಾತಾವರಣ ಮೂಡಿದೆ, ಅಲ್ಲದೆ ಕಾವೇರಿ ತುಲಾ ಸಂಕ್ರಮಣ ಮತ್ತು ದಸರಾ ಹಬ್ಬವೂ ಬರುತ್ತಿರುವುದರಿಂದ ಈ ಎರಡೂ ಕಾರ್ಯಗಳು ತ್ವರಿತವಾಗಿ ನಡೆಯಬೇಕಾಗಿದೆ ಎಂದು ಪ್ರಕಾಶ್ ಆಚಾರ್ಯ ತಿಳಿಸಿದ್ದಾರೆ.
ಮಳೆಹಾನಿ ಪರಿಹಾರ ಕಾಮಗಾರಿಯಡಿ 2019-20ರಲ್ಲಿ ರೂ.6.46 ಕೋಟಿ, ನಗರೋತ್ತಾನದ 3ನೇ ಹಂತದ ಕಾಮಗಾರಿಗೆ 2017-18ರಲ್ಲಿ 29.75 ಕೋಟಿ, 14ನೇ ಹಣಕಾಸಿನಡಿ 2019-20ನೇ ಸಾಲಿನಲ್ಲಿ 3.27 ಕೋಟಿ ರೂಪಾಯಿ ಈಗಾಗಲೇ ನಗರಸಭೆಗೆ ಬಿಡುಗಡೆಯಾಗಿದೆ. ಈ ಬಗ್ಗೆ ಪೌರಯುಕ್ತರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ತುರ್ತು ಕಾಮಗಾರಿಗೆ ಕ್ರಮ ಕೈಗೊಳ್ಳಬೇಕು.
ವಿವಿಧ ಯೋಜನೆಗಳಡಿ ಬಿಡುಗಡೆಯಾಗಿ ಖರ್ಚಾಗದೇ ಉಳಿದಿರುವ ಅನುದಾನವÀನ್ನು ಸದುಪಯೋಗಪಡಿಸಿಕೊಳ್ಳಬೇಕು ಮತ್ತು ಬಾಕಿ ಉಳಿದಿರುವ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಕಸ ವಿಲೇವಾರಿ ಕಾರ್ಯವನ್ನು ಸಮರ್ಪಕವಾಗಿ ವೈಜ್ಞಾನಿಕ ರೂಪದಲ್ಲಿ ಮಾಡಬೇಕು. ನಗರದ ಜನತೆಯ ಖಾತೆ ವರ್ಗಾವಣೆ, ಪರವಾನಗಿ, ನಿರಾಪೇಕ್ಷಣಾ ಪತ್ರ ಸೇರಿದಂತೆ ಬಾಕಿ ಉಳಿದಿರುವ ಎಲ್ಲಾ ಕಡತಗಳನ್ನು ಶೀಘ್ರ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು. ಬೀದಿ ದೀಪಗಳು ಮತ್ತು ಚರಂಡಿಗಳ ದುರಸ್ತಿ ಕಾರ್ಯಕ್ಕೂ ಮುಂದಾಗಬೇಕೆಂದು ಪ್ರಕಾಶ್ ಆಚಾರ್ಯ ಒತ್ತಾಯಿಸಿದ್ದಾರೆ.