ಹೃದ್ರೋಗ ತಜ್ಞ ಡಾ.ಆನಂದ್ ನಿಧನ

05/10/2020

ಮಂಗಳೂರು ಅ.5 : ಖ್ಯಾತ ಹೃದ್ರೋಗ ತಜ್ಞ ಡಾ.ಆನಂದ್ ವೀರಣ್ಣ ಶೆಟ್ಟಿ ಅವರು ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.
ಅವರಿಗೆ 85 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಚಂದ್ರ ಮತ್ತು ಇಬ್ಬರು ಪುತ್ರಿಯರು, ಒಬ್ಬ ಪುತ್ರನನ್ನು ಅಗಲಿದ್ದಾರೆ.
ಕುಂದಾಪುರ ಮೂಲದ ಡಾ.ಎ.ವಿ.ಶೆಟ್ಟಿ ದಕ್ಷಿಣ ಕನ್ನಡ ಜಿಲ್ಲೆಯ ಖ್ಯಾತ ವೈದ್ಯರಾಗಿ ಮತ್ತು ಜಿಲ್ಲೆಯ ಮೊದಲ ಹೃದ್ರೋಗ ತಜ್ಞರಾಗಿ ಗುರುತಿಸಿಕೊಂಡು ಹೆಸರುವಾಸಿಯಾಗಿದ್ದರು. ಮುಂಬೈ ವಿಶ್ವವಿದ್ಯಾಲಯದಿಂದ `ಪ್ರಿನ್ಸ್ ಆಫ್ ವೇಲ್ಸ್’ ಚಿನ್ನದ ಪದಕ ಪಡೆದಿದ್ದರು. ಮಂಗಳೂರಿನ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆದ ರಾಜ್ಯದ ಮೊದಲ ತೆರೆದ ಹೃದಯ ಶಸ್ತ್ರಚಿಕಿತ್ಸೆ ಶೆಟ್ಟಿ ಅವರ ನೇತೃತ್ವದಲ್ಲಿ ನಡೆದಿತ್ತು.
1962 ರಲ್ಲಿ ಎಡಿನ್‍ಬರ್ಗ್‍ನ ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್‍ನಲ್ಲಿ ಅಧ್ಯಯನ ಮಾಡಿದ್ದ ಶೆಟ್ಟಿ 1963 ರಲ್ಲಿ ಎಂಆರ್‍ಸಿಪಿ ಪದವಿಯನ್ನು ಪೂರ್ಣಗೊಳಿಸಿದರು ಮತ್ತು 1974 ರಲ್ಲಿ ಎಫ್‍ಆರ್‍ಸಿಪಿ ಪದವಿಯನ್ನು ಪಡೆದರು. ಅವರು ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಹೃದ್ರೋಗ ವಿಭಾಗದ ಪ್ರಾಧ್ಯಾಪಕರಾಗಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ನಂತರ . ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಹೃದ್ರೋಗ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು.ಅಲ್ಲದೆ ಕಾರ್ ಸ್ಟ್ರೀಟ್‍ನ ಟೆಂಪಲ್ ಸ್ಕ್ವೇರ್‍ನಲ್ಲಿ ಕಾರ್ಯನಿರತ ಸಮಾಲೋಚಕರಾಗಿ ಸಹ ಅವರು ಕೆಲಸ ಮಾಡಿದ್ದರು.