ಗದ್ದುಗೆ ಒತ್ತುವರಿ ಜಾಗ ತೆರವಿಗೆ ಆಗ್ರಹ : ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆಯ ಎಚ್ಚರಿಕೆ

05/10/2020

ಮಡಿಕೇರಿ ಅ.5 : ಮಡಿಕೇರಿಯಲ್ಲಿರುವ ರಾಜರ ಗದ್ದುಗೆಯ ಜಾಗದ ಅತಿಕ್ರಮಣವನ್ನು ನ್ಯಾಯಾಲಯದ ಆದೇಶದಂತೆ ಮುಂದಿನ 15 ದಿನಗಳ ಒಳಗಾಗಿ ತೆರವುಗೊಳಿಸದಿದ್ದಲ್ಲಿ ಜಿಲ್ಲಾಡಳಿತದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವುದಾಗಿ ಗದ್ದುಗೆ ಹಿತರಕ್ಷಣಾ ವೇದಿಕೆ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಎಚ್ಚರಿಕೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎರಡೂ ಸಂಘಟನೆಗಳ ಪ್ರಮುಖರು, ರಾಜರ ಗದ್ದುಗೆಯು ಸುಮಾರು 19.88 ಎಕರೆ ಜಾಗವನ್ನು ಹೊಂದಿದ್ದು, ಈ ಪೈಕಿ ಸುಮಾರು 1.25 ಎಕರೆ ಜಾಗವನ್ನು ಸುಮಾರು 31 ಕುಟುಂಬಗಳು ಅತಿಕ್ರಮಿಸಿಕೊಂಡಿರುವ ಬಗ್ಗೆ 2008ರಲ್ಲೇ ಮಾಹಿತಿ ಲಭ್ಯವಾಗಿತ್ತು. ಅತಿಕ್ರಮ ಜಾಗವನ್ನು ತೆರವುಗೊಳಿಸಲು ಸಂಬಂಧಿಸಿದವರಿಗೆ ನಿರ್ದೇಶನ ನೀಡುವಂತೆ ರಾಜ್ಯ ಉಚ್ಛ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ 2010ರಲ್ಲೇ ಆದೇಶ ನೀಡಿ ಒತ್ತುವರಿ ಜಾಗವನ್ನು ತೆರವುಗೊಳಿಸುವಂತೆ ಸೂಚಿಸಿತ್ತು ಎಂದು ವಿವರಿಸಿದರು.
ಈ ಆದೇಶವನ್ನು ಕಳೆದ 10 ವರ್ಷಗಳಿಂದಲೂ ಸರ್ಕಾರ ಮತ್ತು ಜಿಲ್ಲಾಡಳಿತ ನಿರ್ಲಕ್ಷಿಸುತ್ತಲೇ ಬಂದಿದೆ. ಒಂದು ತಿಂಗಳ ಹಿಂದೆ ಎರಡೂ ಸಂಘಟನೆಗಳು ಜಿಲ್ಲಾಧಿಕಾರಿಗಳ ಗಮನ ಸೆಳೆದ ಹಿನ್ನೆಲೆಯಲ್ಲಿ ಒತ್ತುವರಿ ಜಾಗವನ್ನು ತೆರವುಗೊಳಿಸುವಂತೆ ಮಡಿಕೇರಿ ತಹಶೀಲ್ದಾರರಿಗೆ ನಿರ್ದೇಶನ ನೀಡಿದ್ದರು. ಇತ್ತೀಚೆಗೆ ಕಂದಾಯ ಅಧಿಕಾರಿಗಳು ಜಾಗದ ಸರ್ವೆ ಕಾರ್ಯ ನಡೆಸಲು ಮುಂದಾದರೂ ಪ್ರತಿವಾದಿಗಳ ಆಕ್ಷೇಪದಿಂದ ಅದು ಸಾಧ್ಯವಾಗಿಲ್ಲ. ನ್ಯಾಯಾಲಯ ಒತ್ತುವರಿದಾರರನ್ನು ತೆರವುಗೊಳಿಸುವಂತೆ ತಿಳಿಸಿದೆಯೇ ಹೊರತು ಮರು ಸರ್ವೆಗೆ ಎಲ್ಲೂ ಸೂಚಿಸಿಲ್ಲ. ಆದರೂ ಜಿಲ್ಲಾಡಳಿತ ಸರ್ವೆ ಕಾರ್ಯಕ್ಕೆ ಅಧಿಕಾರಿಗಳನ್ನು ಕಳುಹಿಸಿದ್ದು, ಇದು ಸರಿಯಾದ ಕ್ರಮವಲ್ಲ ಎಂದು ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದರು.
ರಾಜರ ಗದ್ದುಗೆ ಜಾಗವು ರಾಜ್ಯ ಪ್ರಾಚ್ಯವಸ್ತು ಇಲಾಖೆಗೆ ಸೇರಿದ್ದಾಗಿದ್ದು, ಒತ್ತುವರಿ ಜಾಗವನ್ನು ತೆರವುಗೊಳಿಸಿ ಅದನ್ನು ಕೂಡಾ ಇಲಾಖೆಯ ಸುಪರ್ದಿಗೆ ನೀಡಬೇಕು. ಅಲ್ಲದೆ ಇಡೀ ಪ್ರದೇಶವನ್ನು ಕೇಂದ್ರ ಪ್ರಾಚ್ಯವಸ್ತು ಇಲಾಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದ ಅವರುಗಳು, ಮುಂದಿನ 15 ದಿನಗಳ ಒಳಗಾಗಿ ಒತ್ತುವರಿದಾರರನ್ನು ತೆರವುಗೊಳಿಸಲು ಮುಂದಾಗದಿದ್ದಲ್ಲಿ ಜಿಲ್ಲಾಡಳಿತದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಎಲ್ಲಾ ಜಾತಿ, ಜನಾಂಗದ ಮಂದಿ ಒತ್ತುವರಿದಾರರಲ್ಲಿ ಸೇರಿದ್ದು, ಈ ಪ್ರಕರಣದಲ್ಲಿ ಯಾವುದೇ ಜಾತಿ, ಧರ್ಮ ಆಧಾರಿತ ನಿಲುವುಗಳಿಲ್ಲವೆಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಕೊಡ್ಲಿಪೇಟೆ ಕಲ್ಲುಮಠದ ಶ್ರೀಮಹಾಂತ ಸ್ವಾಮೀಜಿ, ಗದ್ದುಗೆ ಹಿತರಕ್ಷಣಾ ವೇದಿಕೆಯ ಮುಖಂಡ ಶಾಂತೆಯಂಡ ರವಿಕುಶಾಲಪ್ಪ, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಹೆಚ್.ವಿ.ಶಿವಪ್ಪ, ಗೌರವಾಧ್ಯಕ್ಷ ಡಿ.ಬಿ.ಧರ್ಮಪ್ಪ, ಉಪಾಧ್ಯಕ್ಷ ಜಿ.ಎಂ.ಕಾಂತರಾಜು, ಪ್ರಧಾನ ಕಾರ್ಯದರ್ಶಿ ಶಾಂಭಶಿವಮೂರ್ತಿ ಉಪಸ್ಥಿತರಿದ್ದರು.