ಅತ್ಯಾಚಾರ ಪ್ರಕರಣ : ಮಡಿಕೇರಿ ಜೆಡಿಎಸ್ ಎಸ್‍ಸಿ ಘಟಕ ಖಂಡನೆ

October 5, 2020

ಮಡಿಕೇರಿ ಅ.5 : ಉತ್ತರ ಪ್ರದೇಶದಲ್ಲಿ ನಡೆದ ದಲಿತ ಯುವತಿಯ ಮೇಲಿನ ಅತ್ಯಾಚಾರ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ಮಡಿಕೇರಿ ನಗರ ಜೆಡಿಎಸ್‍ನ ಎಸ್‍ಸಿ ಘಟಕ, ಅಮಾನವೀಯ ಕೃತ್ಯದ ಆರೋಪಿಗಳನ್ನು ಕಠಿಣ ಕಾನೂನು ಕ್ರಮಕ್ಕೆ ಒಳಪಡಿಸಿಬೇಕೆಂದು ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಡಿಕೇರಿ ನಗರ ಜೆಡಿಎಸ್ ಎಸ್‍ಸಿ ಘಟಕದ ಅಧ್ಯಕ್ಷ ರವಿಕುಮಾರ್ ಹೆಚ್.ಎ. ರಾಷ್ಟ್ರವ್ಯಾಪಿ ದಲಿತರ ಮೇಲಿನ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಕೇಂದ್ರದ ಬಿಜೆಪಿ ಸರ್ಕಾರ ಶೋಷಿತ ಸಮುದಾಯಕ್ಕೆ ಸಾಮಾಜಿಕ ನ್ಯಾಯ ದೊರಕಿಸಿಕೊಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು.
ಗೋ ಹತ್ಯೆಯಂತಹ ಪ್ರಕರಣಗಳ ಸಂದರ್ಭ ನಾಯಿ ಕೊಡೆಗಳಂತೆ ಹೊರಬರುವ ಬಿಜೆಪಿ, ವಿಹಿಂಪ, ಬಜರಂಗದಳ ಸಂಘಟನೆಗಳು, ದಲಿತ ಯುವತಿಯ ಅತ್ಯಾಚಾರ ಘಟನೆಯ ಸಂದರ್ಭ ಯಾಕೆ ಧ್ವನಿ ಎತ್ತುತ್ತಿಲ್ಲ, ದಲಿತರು ಮನುಷ್ಯರಲ್ಲವೇ ಎಂದು ಪ್ರಶ್ನಿಸಿದರು.
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎಸ್‍ಸಿ ವರ್ಗಕ್ಕೆ ಸೇರಿದ ಲೋಕಸಭಾ ಸದಸ್ಯರು ಅಮಾನವೀಯ ಕೃತ್ಯದ ಸಂದರ್ಭ ಮೌನಕ್ಕೆ ಶರಣಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ರವಿಕುಮಾರ್, ದಲಿತ ಸಮುದಾಯಕ್ಕೆ ಅನ್ಯಾಯವಾದರೆ ಅವರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಜೆಡಿಎಸ್ ಸದಾ ಮುಂದಿರುತ್ತದೆ ಎಂದು ಸ್ಪಷ್ಟಪಡಿಸಿದರು.
::: ಶಾಸಕರು ಹೊಣೆ :::
ಜಿಲ್ಲೆಯಲ್ಲಿ ಕೊರೊನಾ ಸಾಂಕ್ರಾಮಿಕ ವ್ಯಾಪಕವಾಗಿ ಹರಡುತ್ತಿದ್ದು, ಇದನ್ನು ತಡೆಗಟ್ಟುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಇದಕ್ಕೆ ಶಾಸಕರ ನಿರ್ಲಕ್ಷ್ಯ ಮನೋಭಾವನೆಯೇ ಪ್ರಮುಖ ಕಾರಣವೆಂದು ಟೀಕಿಸಿದರು. ಕೊರೋನಾ ಲಾಕ್‍ಡೌನ್ ನಿಂದಾಗಿ ಬಡ ವರ್ಗದ ಮಂದಿ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಈ ಪರಿಸ್ಥಿತಿಯ ನಡುವೆಯೇ ಶಾಸಕ ಅಪ್ಪಚ್ಚು ರಂಜನ್ ಅವರು, ಮತ್ತೆ ಹತ್ತು ದಿನಗಳ ಲಾಕ್ ಡೌನ್ ಅಗÀತ್ಯ ಎನ್ನುವ ಬಾಲಿಶ ಹೇಳಿಕೆ ನೀಡಿದ್ದಾರೆ ಎಂದು ರವಿಕುಮಾರ್ ಆರೋಪಿಸಿದರು.
ಶಾಸಕರು ನೊಂದ ಬಡಮಂದಿಯಲ್ಲಿ ಧೈರ್ಯ ತುಂಬುವ ಕೆಲಸ ಮಾಡಬೇಕೇ ಹೊರತು, ಮತ್ತೆ ಸಂಕಷ್ಟಕ್ಕೆ ದೂಡುವ ಪ್ರಯತ್ನಕ್ಕೆ ಮುಂದಾಗಬಾರದೆಂದು ಒತ್ತಾಯಿಸಿದರು.
ಪ್ರಸ್ತುತ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಸಾಕಷ್ಟು ಸೋಂಕಿತರಿಗೆ ಆಸ್ಪತ್ರೆಯಲ್ಲಿ ಒಂದಷ್ಟು ಗುಳಿಗೆಗಳನ್ನು ನೀಡಿ ಅವರ ಮನೆಗಳಿಗೆ ಕಳುಹಿಸುವ ಕೆಲಸ ನಡೆಯುತ್ತಿದೆ. ಪರಿಸ್ಥಿತಿ ಈ ರೀತಿ ಇರುವಾಗ ಕೊರೊನಾ ಸಾಂಕ್ರಾಮಿಕವನ್ನು ತಡೆಯುವುದಾದರು ಹೇಗೆ ಎಂದು ಪ್ರಶ್ನಿಸಿದ ಅವರು, ಯಾವುದೇ ಕಾರಣಕ್ಕು ಮತ್ತೆ ಲಾಕ್ ಡೌನ್‍ಗೆ ಶಾಸಕರು ಕರೆ ನೀಡಬಾರದು ಎಂದು ಆಗ್ರಹಿಸಿದರು.
ಜೆಡಿಎಸ್ ಮಹಿಳಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೀಲಾ ಶೇಷಮ್ಮ ಮಾತನಾಡಿ, ಉತ್ತರ ಪ್ರದೇಶದಲ್ಲಿ ದಲಿತ ಯುವತಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು. ಯಾವುದೇ ಜಾತಿ, ಧರ್ಮದವರ ಮೇಲೆ ಅತ್ಯಾಚಾರ ನಡೆದರೂ ಕಠಿಣ ಶಿಕ್ಷಯಾಗಲೇಬೇಕೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಇಎಎಸ್ ಮಹಿಳಾ ಘಟಕದ ನಗರಾಧ್ಯಕ್ಷೆ ಸುನಂದಾ, ಪ್ರಮುಖರಾದ ಹೆಚ್.ಆರ್.ಜಗದೀಶ್ ಹಾಗೂ ಹೆಚ್.ಎಸ್.ಚೇತನ್ ಉಪಸ್ಥಿತರಿದ್ದರು.

error: Content is protected !!