ವಸತಿಗಾಗಿ ಒತ್ತಾಯಿಸಿ ಮಡಿಕೇರಿಯಲ್ಲಿ ಪ್ರತಿಭಟನೆ : ಅಹೋರಾತ್ರಿ ಧರಣಿ ಸತ್ಯಾಗ್ರಹದ ಎಚ್ಚರಿಕೆ

05/10/2020

ಮಡಿಕೇರಿ ಅ.5 : ಕಡುಬಡವರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಮನೆಗಳನ್ನು ನಿರ್ಮಿಸಿಕೊಡುವಂತೆ ಒತ್ತಾಯಿಸಿ ಎಐಟಿಯುಸಿ ಸಂಘಟನೆಯ ನೇತೃತ್ವದಲ್ಲಿ ವಸತಿ ರಹಿತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬಡವರ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷ ಹೆಚ್.ಎಂ.ಸೋಮಪ್ಪ ಅವರು ಕಳೆದು 20 ವರ್ಷಗಳಿಂದ ಜಿಲ್ಲೆಯಲ್ಲಿ ಸೂರಿಗಾಗಿ ಹೋರಾಟ ನಡೆಸುತ್ತಾ ಬಂದಿದ್ದರೂ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲವೆಂದು ಆರೋಪಿಸಿದರು.
ನಿವೇಶನ ಮತ್ತು ವಸತಿ ಇಲ್ಲ ಕೊಡಗಿನ ಸಾವಿರಾರು ಬಡವರು ತೋಟದ ಲೈನ್ ಮನೆಗಳಲ್ಲಿ, ನದಿ ತೀರಗಳಲ್ಲಿ, ಬಾಡಿಗೆ ಮನೆÉಗಳಲ್ಲಿ, ಪೈಸಾರಿ ಜಾಗಗಳಲ್ಲಿ ವಾಸ ಮಾಡುತ್ತಿದ್ದಾರೆ. ಈ ಪೈಕಿ ಆದಿವಾಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸರ್ಕಾರ ತಕ್ಷಣ ಎಲ್ಲರಿಗೂ ಮನೆ ನಿರ್ಮಿಸಿಕೊಡಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಅ.2 ರಿಂದ ಜಿಲ್ಲೆಯ ವಿವಿಧ ಗ್ರಾ.ಪಂ ಎದುರು ಸರಣಿ ಪ್ರತಿಭಟನೆ ನಡೆಸಿ ಬೇಡಿಕೆಗಳ ಈಡಗೇರಿಕೆಗಾಗಿ ಒತ್ತಾಯಿಸಲಾಗಿದೆ. ಈ ಬಗ್ಗೆ ಸೂಕ್ತ ಸ್ಪಂದನೆ ದೊರೆಯದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದೆಂದು ಸೋಮಪ್ಪ ಎಚ್ಚರಿಕೆ ನೀಡಿದರು.
::: ಬೇಡಿಕೆಗಳು :::

ಜಿಲ್ಲೆಯಲ್ಲಿರುವ ವಸತಿ ಹೀನರ ಮರು ಸಮೀಕ್ಷೆ ನಡೆಸಬೇಕು, ಖಾಲಿ ಜಮೀನನ್ನು ಗುರುತಿಸಿ ಅದನ್ನು ವಸತಿ ಯೋಜನೆಗೆಂದೇ ಕಾಯ್ದಿರಿಸಬೇಕು, ಪ್ರತಿ ವರ್ಷ ಪ್ರವಾಹಕ್ಕೆ ತುತ್ತಾಗುವ ಕುಟುಂಬಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿ ಪುನರ್‍ವಸತಿ ಕಲ್ಪಿಸಬೇಕು, ವಿವಿಧ ವಸತಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳ ಬಾಕಿ ಬಿಲ್ಲುಗಳನ್ನು ತಕ್ಷಣ ಬಿಡುಗಡೆ ಮಾಡಬೇಕು, ಎಲ್ಲಾ ಸ್ಥಳೀಯ ಸಂಸ್ಥೆಗಳ ವಸತಿ ಯೋಜನೆಗೆ ಹೊಸದಾಗಿ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ನೀಡಬೇಕು, ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಗಳ ವಾಸಕ್ಕೆ ಯೋಗ್ಯವಲ್ಲದ ಮನೆಗಳನ್ನು ದುರಸ್ತಿ ಪಡಿಸಲು ತಕ್ಷಣ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಬೇಡಿಕೆಗಳ ಮನವಿ ಪತ್ರವನ್ನು ಪ್ರಭಾರ ಜಿಲ್ಲಾಧಿಕಾರಿ ಡಾ.ಸ್ನೇಹ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು.
ಸಂಘಟನೆಯ ರಾಜ್ಯ ಮಂಡಳಿ ಕಾರ್ಯದರ್ಶಿ ಸಾತಿ ಸುಂದರೇಶ್, ಜಿಲ್ಲಾ ಕಾರ್ಯದರ್ಶಿ ಕೆ.ವಿ.ಸುನಿಲ್, ಉಪಾಧ್ಯಕ್ಷರುಗಳಾದ ಎನ್.ಮಣಿ ಮಾರ್ಗೊಲ್ಲಿ, ಆರ್. ಕುಮಾರ್, ಪಿ.ಟಿ.ಸುಂದರ, ಶಬಾನಾ, ಜಯ, ಭವ್ಯ, ಸರೋಜಾ, ಮಾನಸ, ರಮಣಿ, ಎಐವೈಎಫ್ ಜಿಲ್ಲಾಧ್ಯಕ್ಷ ರಫಿಕ್ ನವಲಗುಂದ, ವಿರಾಜಪೇಟೆ ಪ.ಪಂ ಸದಸ್ಯ ವಿ.ಆರ್. ರಜನಿಕಾಂತ್, ವಿರಾಜಪೇಟೆ ಕಟ್ಟಡ ಕಾರ್ಮಿಕ ನಾಯಕರಾದ ಗೋಪಾಲ, ಕೃಷ್ಣ, ರಮೇಶ್ ಮಾರ್ಗೋಲ್ಲಿ, ಹರಿಶ್ಚಂದ್ರ, ಲತಾ ಜಂಬಬೂರು, ಚೆಲುವಿ, ಜಯರಾಮ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.