ಸಿಬಿಐ ದಾಳಿ ಹಿಂದೆ ರಾಜಕೀಯ ಷಡ್ಯಂತ್ರ : ಕೊಡಗು ಕಾಂಗ್ರೆಸ್ ಟೀಕೆ

05/10/2020

ಮಡಿಕೇರಿ ಅ.5 : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮನೆ ಮೇಲೆ ನಡೆದಿರುವ ಸಿಬಿಐ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್, ಪಕ್ಷದ ವತಿಯಿಂದ ಅ.9 ರಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಾಂಗ್ರೆಸ್ ನ ಪ್ರಬಲ ನಾಯಕ ಶಿವಕುಮಾರ್ ಅವರ ವಿರುದ್ಧ ಸಿಬಿಐ ಬಲ ಪ್ರಯೋಗ ಮಾಡಿರುವ ಕೇಂದ್ರ ಸರ್ಕಾರ ರಾಜಕೀಯ ಷಡ್ಯಂತ್ರದಲ್ಲಿ ತೊಡಗಿದೆ ಎಂದು ಆರೋಪಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಬೆಳವಣಿಗೆಯನ್ನು ಸಹಿಸಲಾಗದ ಬಿಜೆಪಿ ಸೇಡಿನ ರಾಜಕಾರಣದಲ್ಲಿ ತೊಡಗಿದ್ದು, ಕೋವಿಡ್ ಭ್ರಷ್ಟಾಚಾರ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನವಾಗಿ ಈ ದಾಳಿಯನ್ನು ಮಾಡಿಸಿದೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವ ಡಿಕೆಶಿ ಅವರ ವಿರುದ್ಧ ಕಾರ್ಯಾಚರಣೆ ನಡೆಸಿದರೆ ಉಪ ಚುನಾವಣೆಗಳಲ್ಲಿ ಗೆಲುವು ಸಾಧಿಸಬಹುದೆನ್ನುವ ಭ್ರಮೆಯಲ್ಲಿ ಬಿಜೆಪಿ ನೇತೃತ್ವದ ಸರ್ಕಾರಗಳಿವೆ ಎಂದು ಮಂಜುನಾಥ್ ಕುಮಾರ್ ಟೀಕಿಸಿದ್ದಾರೆ.