ಕೋವಿಡ್ ಹರಡುವುದನ್ನು ತಡೆಯಲು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಿ : ಕೊಡಗು ಆರೋಗ್ಯಾಧಿಕಾರಿಗಳ ಸಲಹೆ

05/10/2020

ಮಡಿಕೇರಿ ಅ.5 : ಕೋವಿಡ್ ವ್ಯಾಪಿಸುವುದನ್ನು ತಡೆಯಲು ಸಮರ್ಪಕವಾಗಿ ಮಾಸ್ಕ್ ಧರಿಸುವುದರೊಂದಿಗೆ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಕೆ.ಮೋಹನ್ ಹಾಗೂ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಕಾರ್ಯಪ್ಪ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ಕೋವಿಡ್-19 ನಿಯಂತ್ರಣ ಸಂಬಂಧ ಸೋಮವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಸದ್ಯದ ಪರಿಸ್ಥಿತಿಯಲ್ಲಿ ಮಾಸ್ಕ್ ಬಳಸುವುದೇ ಲಸಿಕೆಯಾಗಿದೆ. ಮಾಸ್ಕ್‍ನ್ನು ಸರಿಯಾಗಿ ಬಳಸುವುದು ಮತ್ತು ಸಾಬೂನಿನಿಂದ ಕೈತೊಳೆಯುವುದರಿಂದ ಕೋವಿಡ್-19 ನಿಯಂತ್ರಿಸಬಹುದಾಗಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಡಾ.ಕಾರ್ಯಪ್ಪ ಅವರು ಕೋರಿದರು.
ಕೋವಿಡ್-19 ನಿಂದ ಮೃತಪಟ್ಟವರ ಅಂತ್ಯಕ್ರಿಯೆಯನ್ನು ಸರ್ಕಾರದ ಮಾರ್ಗಸೂಚಿಯಂತೆ ಮಾಡಲಾಗುತ್ತಿದೆ. ಇತ್ತೀಚೆಗಿನ ಮಾರ್ಗ ಸೂಚಿಯಂತೆ ಕೋವಿಡ್-19 ನಿಂದ ಮೃತಪಟ್ಟವರ ಅಂತ್ಯಕ್ರಿಯೆಯನ್ನು ಕುಟುಂಬದವರೇ ಅವರವರ ಜಮೀನು ಅಥವಾ ಸ್ಮಶಾನದಲ್ಲಿ ಮಾಡಬಹುದಾಗಿದೆ. ಈ ಸಂಬಂಧ ತಹಶೀಲ್ದಾರರು ಮತ್ತು ತಾ.ಪಂ.ಇ.ಒಗಳ ನೇತೃತ್ವದ ತಂಡವು ಅಂತ್ಯಕ್ರಿಯೆ ಮೇಲುಸ್ತುವಾರಿ ನೋಡಿಕೊಳ್ಳಲಿದೆ ಎಂದು ಡಾ.ಕೆ.ಮೋಹನ್ ಅವರು ಹೇಳಿದರು.
ಅಂತ್ಯಕ್ರಿಯೆಗಾಗಿ ಸರ್ಕಾರದಿಂದ ಯಾವುದೇ ರೀತಿಯ ಹಣ ಬಿಡುಗಡೆಯಾಗುವುದಿಲ್ಲ. ಕೋವಿಡ್-19 ನಿಂದ ಮೃತಪಟ್ಟವರನ್ನು ಸಂಬಂಧಪಟ್ಟ ಸ್ಥಳಕ್ಕೆ ಶ್ರದ್ಧಾಂಜಲಿ ವಾಹನದ ಮೂಲಕ ತೆಗೆದುಕೊಂಡು ಹೋಗಲಾಗುತ್ತದೆ. ಸರ್ಕಾರದ ಆಂಬುಲೆನ್ಸ್ ಬಳಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ತಾಲೂಕಿಗೆ ಒಂದರಂತೆ ಬಾಡಿಗೆ ವಾಹನ ಪಡೆಯಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು ವಿವರಿಸಿದರು.
ಕೋವಿಡ್ ಆಸ್ಪತ್ರೆಯಲ್ಲಿ ಬಿಸ್ಕೆಟ್ ಮತ್ತಿತರ ಲಘು ಆಹಾರದಲ್ಲಿ ಯಾವುದೇ ರೀತಿಯಲ್ಲಿ ದುರುಪಯೋಗವಾಗಿಲ್ಲ. ಸರ್ಕಾರದ ಮಾರ್ಗಸೂಚಿಯಂತೆ ಸುವ್ಯವಸ್ಥಿತ ರೀತಿಯಲ್ಲಿ ಕೋವಿಡ್ ಆಸ್ಪತ್ರೆಯನ್ನು ನಿರ್ವಹಣೆ ಮಾಡಲಾಗುತ್ತಿದೆ ಎಂದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಧೀಕ್ಷಕರಾದ ಡಾ.ಲೋಕೇಶ್ ಅವರು ಮಾತನಾಡಿ ಕೋವಿಡ್ ಆಸ್ಪತ್ರೆಯಲ್ಲಿ ಕುಡಿಯಲು ಬಿಸಿ ನೀರು ಸ್ನಾನಕ್ಕೆ ಗೀಸರ್ ವ್ಯವಸ್ಥೆ ಮಾಡಲಾಗಿದೆ. ಈ ಸಂಬಂಧ ಯಾವುದೇ ಕೊರತೆಯಿಲ್ಲ. ಆಸ್ಪತ್ರೆಗೆ ಬರುವ ಮತ್ತು ಹೋಗುವ ಯಾವುದೇ ವಸ್ತುಗಳಿಗೆ ಸಂಬಂಧಿಸಿದಂತೆ ಸಿ.ಸಿ.ಟಿ.ವಿ ಅಳವಡಿಸಿದ್ದು, ಯಾವುದೇ ಲೋಪ ಉಂಟಾಗಿಲ್ಲ ಎಂದು ಅವರು ತಿಳಿಸಿದರು.

   ಜಿಲ್ಲೆಯಲ್ಲಿ 8  "108 ತುರ್ತು ಆಂಬುಲೆನ್ಸ್" ವಾಹನ, 18 ಆಂಬುಲೆನ್ಸ್ ವಾಹನಗಳು ಹಾಗೂ ಮೆಡಿಕಲ್ ಕಾಲೇಜು ವ್ಯಾಪ್ತಿಯಲ್ಲಿ 3 ಆಂಬುಲೆನ್ಸ್ ವಾಹಗಳಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಹಾಗೂ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಕಾರ್ಯಪ್ಪ ಹೇಳಿದರು. 

ಕೋವಿಡ್ ಆಸ್ಪತ್ರೆಯಲ್ಲಿ 1 ಟಿ.ವಿ ಇದೆ. ಮಾಸ್ಕ್ ಧರಿಸದಿರುವ ಸಂಬಂಧ 1800 ಪ್ರಕರಣಗಳು ದಾಖಲಾಗಿದೆ ಎಂದು ಡಾ.ಕೆ.ಮೋಹನ್ ಅವರು ತಿಳಿಸಿದರು.