ಅಲ್ಪಸಂಖ್ಯಾತರ ಕಡೆಗಣನೆ ಆರೋಪ : ಮಡಿಕೇರಿಯಲ್ಲಿ ಜೆಡಿಎಸ್ ಅಲ್ಪಸಂಖ್ಯಾತರ ಘಟಕ ಪ್ರತಿಭಟನೆ

05/10/2020

ಮಡಿಕೇರಿ ಅ.5 : ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಲ್ಪಸಂಖ್ಯಾತರನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿ, ಜೆಡಿಎಸ್ ಅಲ್ಪಸಂಖ್ಯಾತರ ಘಟಕ ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಜೆಡಿಎಸ್ ಪ್ರಮುಖರು ಹಾಗೂ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್‍ಖಾನ್, ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಘೋಷಿಸಲಾಗಿದೆ. ಆದರೆ ಆ ಯೋಜನೆಗಳನ್ನು ಫಲಾನುಭವಿಗಳಿಗೆ ಸಮರ್ಪಕವಾಗಿ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಮಹಾಮಳೆಯಿಂದಾಗಿ ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಭೂ ಕುಸಿತ ಉಂಟಾಗಿದ್ದು, ಅಲ್ಪಸಂಖ್ಯಾತರು ಕೂಡ ಮನೆಗಳನ್ನು ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಆದರೆ ಸರ್ಕಾರ ಅಲ್ಪಸಂಖ್ಯಾತ ನಿರಾಶ್ರಿತರಿಗೆ ಮನೆ ಹಾಗೂ ಪರಿಹಾರದ ಹಣ ನೀಡದೆ ಸಂಕಷ್ಟಕ್ಕೆ ದೂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೊಂಡಂಗೇರಿ, ನೆಲ್ಲಿಹುದಿಕೇರಿ, ಸಿದ್ದಾಪುರ, ಬಲಮುರಿ, ಚೆರಿಯಪರಂಬು ವ್ಯಾಪ್ತಿಯಲ್ಲಿ ಮಹಾಮಳೆಯಿಂದ ಅನೇಕ ಸಮಸ್ಯೆಗಳು ಎದುರಾದವು. ಆದರೆ ಸ್ಥಳೀಯ ಶಾಸಕರು, ಸಂಸದರು ಈ ಪ್ರದೇಶಕ್ಕೆ ಭೇಟಿ ನೀಡದೆ ಸಂತ್ರಸ್ತರ ಸಮಸ್ಯೆಗಳ ಪರಿಹಾರಕ್ಕೆ ಯಾವುದೇ ಕ್ರಮ ಕೈಗೊಳ್ಳುದೆ ಮಲತಾಯಿ ಧೋರಣೆ ತೋರುತ್ತಿದ್ದಾರೆ ಎಂದು ಆರೋಪಿಸಿದ ಇಸಾಕ್‍ಖಾನ್, ನಿರಾಶ್ರಿತರಲ್ಲೂ ಮತದ ಲಾಭ ನೋಡುತ್ತಿದ್ದಾರೆ ಎಂದು ಟೀಕಿಸಿದರು.
ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಅಭಿವೃದ್ಧಿ ನಿಗಮಗಳಿದ್ದು, ಯಾವುದೇ ನಿಗಮಗಳಿಗೂ ಇಲ್ಲಿಯವರೆಗೆ ಅನುದಾನ ಬಂದಿಲ್ಲ, ವಿಕಲಚೇತನರು ವಿವಿಧ ಸೌಲಭ್ಯಗಳಿಗಾಗಿ ನೀಡಿರುವ ಅರ್ಜಿಗಳನ್ನು ವಿಲೇವಾರಿ ಮಾಡದೇ ಇರುವುದರಿಂದ ಬಡಪಾಯಿಗಳು ಪ್ರತಿದಿನ ಕಚೇರಿಯಿಂದ ಕಚೇರಿಗೆ ಅಲೆದಾಡುವಂತಾಗಿದೆ ಎಂದ ಅವರು, ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕೆಂದು ಒತ್ತಾಯಿಸಿದರು.
ಕೊಡಗು ಜಿಲ್ಲೆಯಲ್ಲಿ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸರ್ಕಾರ ನೀಡಿರುವ ಯೋಜನೆಯ ಗುರಿಯನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದ ಇಸಾಕ್ ಖಾನ್, ಸರ್ಕಾರ ಇದೇ ರೀತಿ ನಿರ್ಲಕ್ಷ್ಯ ಮನೋಭಾವವನ್ನು ಮುಂದುವರೆಸಿದರೆ ಅಲ್ಪಸಂಖ್ಯಾತರೆಲ್ಲರು ಬೀದಿಗಿಳಿದು ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
::: ವಿಕಲಚೇತನರಿಗೆ ಸಂಕಷ್ಟ :::
ವಿಶೇಷ ಚೇತನರ ಪರವಾಗಿ ಮಾತನಾಡಿದ ಪೋಷಕ ಆಲಿ ದೂರದ ಊರುಗಳಿಂದ ವಿಕಲಚೇತನರು ನಿಗಮದ ಕಚೇರಿಗೆ ಪ್ರತಿದಿನ ಆಗಮಿಸಿದರೂ ಯೋಜನೆಗಳು ಕೈಸೇರುತ್ತಿಲ್ಲ ಎಂದು ಟೀಕಿಸಿದರು. ವಿಕಲಚೇತನರಿಗಾಗಿ ನೀಡಲಾಗುವ ಮಾಸಾಶನವನ್ನೇ ಸ್ಥಗಿತಗೊಳಿಸಲಾಗಿದ್ದು, ಕಳೆದ ಹಲವು ತಿಂಗಳುಗಳಿಂದ ವೇತನ ನೀಡಿಲ್ಲ. ವಿಕಲಚೇತನರ ಸಂಕಷ್ಟದ ಬಗ್ಗೆಯೂ ಸರ್ಕಾರಕ್ಕೆ ಕರುಣೆ ಇಲ್ಲವೆಂದು ಆರೋಪಿಸಿದರು.
ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಯೂಸುಫ್, ಜಿಲ್ಲಾ ಖಜಾಂಚಿ ಡೆನ್ನಿ ಬರೋಸ್, ಮಡಿಕೇರಿ ತಾಲ್ಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಬಶೀರ್, ನಗರ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಖಲೀಲ್ ಬಾದ್‍ಶಾ, ವಿರಾಜಪೇಟೆ ಅಲ್ಪಸಂಖ್ಯಾತ ಅಧ್ಯಕ್ಷ ಮಜೀದ್, ಮಹಿಳಾಧ್ಯಕ್ಷೆ ರುಬೀನಾ ಬಾನು, ಕುಶಾಲನಗರ ತಾಲ್ಲೂಕು ಅಧ್ಯಕ್ಷ ಕರೀಂ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎಂ.ಎ. ರುಬೀನಾ, ಕುಶಾಲನಗರ ಪ. ಪಂ. ಸದಸ್ಯ ಸಬ್ಬಿರ್, ಮೂರ್ನಾಡು ಗ್ರಾ.ಪಂ. ಮಾಜಿ ಸದಸ್ಯ ಸಾದೀಕ್, ಮಡಿಕೇರಿ ಸಂಘಟನಾ ಕಾರ್ಯದರ್ಶಿ ಇಬ್ರಾಹಿಂ, ಮಹಿಳಾ ಘಟಕದ ನಗರಾಧ್ಯಕ್ಷೆ ಸುನಂದ, ಸಾಮಾಜಿಕ ಜಾಲತಾಣದ ಸಂಚಾಲಕ ಸೈಪುದ್ದೀನ್, ಸೋಮವಾರಪೇಟೆ ಸಂಘಟನಾ ಕಾರ್ಯದರ್ಶಿ ಆಸೀಪ್ ಮತ್ತಿತತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.