ಅ.11 ರಂದು ಮಾಯಮುಡಿಯಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ

October 6, 2020

ಪೊನ್ನಂಪೇಟೆ, ಅ.06 : ಮಾಯಮುಡಿಯ ಐರನ್ ಸೈಟ್ ಶೂಟರ್ಸ್ ತಂಡದ ವತಿಯಿಂದ ಕೈಲ್ ಪೊಳ್ದ್ ಹಬ್ಬದ ಅಂಗವಾಗಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಪ್ರಥಮ ವರ್ಷದ ಮುಕ್ತ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಸ್ಪರ್ಧೆಯ ಯೋಜನಾ ನಿರ್ದೇಶಕ, ಮಾಯಮುಡಿಯ ‘ಐರನ್ ಸೈಟ್ ಶೂಟರ್ಸ್’ ಮುಖ್ಯಸ್ಥ ಆಪಟ್ಟೀರ ಆರ್. ಅಯ್ಯಪ್ಪ ಅವರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ 11 ರಂದು ಭಾನುವಾರ ಆಯೋಜಿಸಲಾಗಿರುವ ಈ ಸ್ಪರ್ಧೆಯು ಗೋಣಿಕೊಪ್ಪಲು ಸಮೀಪದ ಮಾಯಮುಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ. ಈ ಶೂಟಿಂಗ್ ಸ್ಪರ್ಧೆಯಲ್ಲಿ 0.22 ರೈಫಲ್ ನಲ್ಲಿ ಮಾತ್ರ ತೆಂಗಿನಕಾಯಿಗೆ ಗುಂಡು ಹೊಡೆಯುವ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.

ಅಂದು ಬೆಳಿಗ್ಗೆ 10 ಗಂಟೆಗೆ ಆರಂಭಗೊಳ್ಳಲಿರುವ ಸ್ಪರ್ಧೆಯನ್ನು ದೇಶದ ಹೆಸರಾಂತ ಹಾಕಿಪಟು, ಭಾರತೀಯ ಕ್ರೀಡಾ ಪ್ರಾಧಿಕಾರದ ಮಾಜಿ ನಿರ್ದೇಶಕರಾದ ಪದ್ಮಶ್ರೀ ಪುರಸ್ಕೃತ ಎಂ.ಪಿ. ಗಣೇಶ್ ಅವರು ಉದ್ಘಾಟಿಸಲಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾಯಮುಡಿ ಕೋಲ್ ಬಾಣೆ ಕಾವೇರಿ ಅಸೋಸಿಯೇಷನ್ ಅಧ್ಯಕ್ಷರಾದ ಕಾಳಪಂಡ ಸಿ. ಸುಧೀರ್, ವಿರಾಜಪೇಟೆ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ಸಿ.ಟಿ. ಜಯಕುಮಾರ್, ಹಿರಿಯ ಕಾಫಿ ಬೆಳೆಗಾರರಾದ ಚೆಪ್ಪುಡಿರ ಕಿಟ್ಟು ಅಯ್ಯಪ್ಪ, ಮಹಿಳಾ ಸಾಧಕಿ ಚೆಪ್ಪುಡಿರ ರಾಧ ಅಚ್ಚಯ್ಯ ಅವರು ಪಾಲ್ಗೊಳ್ಳಲಿದ್ದಾರೆ. ಇತ್ತೀಚೆಗೆ ಭಾರತ ಸರಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಒಲಂಪಿಯನ್ ಎಂ.ಪಿ. ಗಣೇಶ್ ಅವರನ್ನು ಕಾರ್ಯಕ್ರಮದಲ್ಲಿ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಅದೇ ದಿನ ಮಧ್ಯಾಹ್ನ ನಡೆಯುವ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಗೋಣಿಕೊಪ್ಪಲು ಎಪಿಎಂಸಿ ಮಾಜಿ ಅಧ್ಯಕ್ಷರು ಮತ್ತು ಹಿರಿಯ ಕಾಫಿ ಬೆಳೆಗಾರರಾದ ಕಾಳಪಂಡ ಟಿ. ಟಿಪ್ಪು ಬಿದ್ದಪ್ಪ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಚಿರಿಯಪಂಡ ರಾಜ ನಂಜಪ್ಪ, ಕಾಫಿ ಬೆಳೆಗಾರರಾದ ಮನೆಯಪಂಡ ಎ. ಬೆಳ್ಳಿಯಪ್ಪ, ಮಾಯಮುಡಿ ವಿ.ಎಸ್.ಎಸ್.ಎನ್. ಅಧ್ಯಕ್ಷರಾದ ಚೆಪ್ಪುಡಿರ ಕಿರಣ್ ಅಪ್ಪಯ್ಯ, ಮಡಿಕೇರಿಯ ಉದ್ಯಮಿ ಪ್ರಶಾಂತ್ ಭಂಡಾರಿ, ಗುತ್ತಿಗೆದಾರರಾದ ಅಚ್ಚಿಯಂಡ ವೇಣುಗೋಪಾಲ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಅಯ್ಯಪ್ಪ ಅವರು ವಿವರಿಸಿದರು.

ಸ್ಪರ್ಧೆಯ ಪ್ರಥಮ ಸ್ಥಾನ ವಿಜೇತರಿಗೆ ದಿ.ಎಂ. ಡಬ್ಲ್ಯೂ. ಅಯ್ಯಪ್ಪ ಅವರ ಸ್ಮರಣಾರ್ಥ ಅವರ ಪುತ್ರ ಪ್ರಾಯೋಜಿಸಿರುವ ರೂ.10000 ನಗದು ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ವಿಜೇತರಿಗೆ ದಿ.ಕಾಳಪಂಡ ಸ್ವರಾಜ್ ಚಂಗಪ್ಪ ಅವರ ಸ್ಮರಣಾರ್ಥವಾಗಿ ಅವರ ಸಹೋದರ ಮತ್ತು ಸಹೋದರಿಯರು ಪ್ರಾಯೋಜಿಸಿರುವ ರೂ.7000 ನಗದು ಬಹುಮಾನ ಮತ್ತು ಟ್ರೋಫಿ ಮತ್ತು ತೃತೀಯ ಸ್ಥಾನ ವಿಜೇತರಿಗೆ ಮಡಿಕೇರಿಯ ಬಿ. ಪ್ರಭಾಕರ ಭಂಡಾರಿ ಸಂಸ್ಥೆಯ ವತಿಯಿಂದ ಪ್ರಶಾಂತ್ ಭಂಡಾರಿ ಪ್ರಾಯೋಜಿಸಿರುವ ರೂ 5000 ನಗದು ಬಹುಮಾನ ಮತ್ತು ಟ್ರೋಫಿಯನ್ನು ನೀಡಲಾಗುವುದು ಎಂದು ಅವರು ಹೇಳಿದರು. ಆಸಕ್ತರು ಯಾವುದೇ ವಯೋಮಿತಿಯ ನಿರ್ಬಂಧವಿಲ್ಲದೆ ಮುಕ್ತವಾಗಿ ಭಾಗವಹಿಸಬಹುದಾದ ಈ ಸ್ಪರ್ಧೆಯಲ್ಲಿ ಅಂದು ಬೆಳಿಗ್ಗೆ 10 ಗಂಟೆಯೊಳಗಾಗಿ ಸ್ಪರ್ಧಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ಸ್ಪರ್ಧೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆಗಳಾದ 9611870813, 9902612333, 9972971405, 9448648605 ಅನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಸ್ಪರ್ಧೆಯ ಸಂಚಾಲಕರಾದ ಕಂಜಿತಂಡ ಡಬ್ಲ್ಯೂ. ಪೊನ್ನಪ್ಪ ಅವರು ಮಾತನಾಡಿ, ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯು ಕೊಡಗಿನ ಪುರಾತನ ಗ್ರಾಮೀಣ ಕ್ರೀಡೆಯಾಗಿದೆ. ಮಾಹಿತಿ ತಂತ್ರಜ್ಞಾನಗಳ ಆವಿಷ್ಕಾರದೊಂದಿಗೆ ಆಧುನಿಕ ಕ್ರೀಡೆಗಳು ಹೆಚ್ಚಾದ ಈ ಕಾಲಘಟ್ಟದಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚು ಪ್ರಾಶಸ್ತ್ಯ ಇಲ್ಲದಾಗಿದೆ. ಇದರಿಂದ ಬಹಳಷ್ಟು ಗ್ರಾಮೀಣ ಕ್ರೀಡೆಗಳು ಜನರಿಂದ ದೂರವಾಗುತ್ತಿದೆ. ಇದನ್ನು ಮನಗಂಡ ಮಾಯಮುಡಿಯ ಕ್ರಿಯಾಶೀಲ ಯುವಕರ ತಂಡವೊಂದು ‘ಐರನ್ ಸೈಟ್ ಶೂಟರ್ಸ್’ ಎಂಬ ಹೆಸರಿನ ಶೂಟರ್ಸ್ ತಂಡವನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ತಿಳಿಸಿದರು. ಈ ಸಂಸ್ಥೆ ವತಿಯಿಂದ ಮುಂದೆ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಮತ್ತು ತೋಕ್ ನಮ್ಮೆ (ಬಂದೂಕು ಉತ್ಸವ) ಗಳನ್ನು ನಿರಂತರವಾಗಿ ಆಯೋಜಿಸುವ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಆಪಟ್ಟೀರ ಟಾಟು ಮೊಣ್ಣಪ್ಪ ಅವರು ಉಪಸ್ಥಿತರಿದ್ದರು.

error: Content is protected !!