ಜನ್ಮದಿನದ ಪ್ರಯುಕ್ತ ಹಣ್ಣು ಹಂಪಲು ವಿತರಣೆ : ಸೋಂಕಿತರನ್ನು ನೋಡುವ ದೃಷ್ಟಿಕೋನ ಬದಲಾಗಲಿ : ಎಂಎಲ್‍ಸಿ ವೀಣಾಅಚ್ಚಯ್ಯ ಮನವಿ

06/10/2020

ಮಡಿಕೇರಿ ಅ.6 : ಕೊಡಗಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸೋಂಕಿತರು ಹಾಗೂ ಗುಣಮುಖರಾದವರನ್ನು ಸಾರ್ವಜನಿಕರು ನೋಡುವ ದೃಷ್ಟಿಕೋನ ಬದಲಾಗಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಶಾಂತೆಯಂಡ ವೀಣಾಅಚ್ಚಯ್ಯ ಅವರು ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ಜನ್ಮ ದಿನದ ಪ್ರಯುಕ್ತ ನಗರದ ಜಿಲ್ಲಾಸ್ಪತ್ರೆಯಲ್ಲಿರುವ ಕೋವಿಡ್ ಕೇಂದ್ರಕ್ಕೆ ಭೇಟಿ ನೀಡಿ ಸೋಂಕಿತರಿಗೆ ಹಾಗೂ ಆಸ್ಪತ್ರೆ ಸಿಬ್ಬಂದಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಿ ಮಾತನಾಡಿದರು.
ಕೋವಿಡ್ ಸೋಂಕಿತರು ಶೀಘ್ರ ಗುಣಮುಖರಾಗಿ ಎಲ್ಲರಂತೆ ಜೀವನ ಸಾಗಿಸುವಂತಾಗಲಿ ಎಂದು ಹಾರೈಸಿದರು. ಜಿಲ್ಲೆಯಲ್ಲಿ ಸೋಂಕು ವ್ಯಾಪಿಸುತ್ತಿದೆ, ಆದರೆ ಜನತೆ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ.
ಸರ್ಕಾರದ ಮಾರ್ಗಸೂಚಿಯಂತೆ ಕಡ್ಡಾಯವಾಗಿ ಪ್ರತಿಯೊಬ್ಬರೂ ಮನೆಯಿಂದ ಹೊರಡುವಾಗ ಸರಿಯಾಗಿ ಮಾಸ್ಕ್ ಧರಿಸಬೇಕು, ಆಗಾಗ ಸಾಬೂನಿನಿಂದ ಕೈತೊಳೆಯಬೇಕು, ಅನಾವಶ್ಯಕವಾಗಿ ಹೊರಗಡೆ ತಿರುಗಬಾರದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸಲಹೆ ನೀಡಿದರು.
60 ವರ್ಷ ಮೇಲ್ಪಟ್ಟ ವೃದ್ಧರು ಆದಷ್ಟು ಮನೆಯಿಂದ ಹೊರಬಾರದೆ ಎಚ್ಚರ ವಹಿಸುವಂತೆ ತಿಳಿಸದ ಅವರು, ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಜೀವದ ಹಂಗು ತೊರೆದು ಸೋಂಕಿತರನ್ನು ಗುಣಪಡಿಸಲು ಕಾರ್ಯ ನಿರ್ವಹಿಸುತ್ತಿದ್ದು, ಎಲ್ಲರ ಸಹಕಾರ ಅಗತ್ಯವೆಂದರು.
ಕೋವಿಡ್ ಸೋಂಕಿತರು ಗುಣಮುಖರಾದ ನಂತರ ಸಮಾಜದಲ್ಲಿ ಧೈರ್ಯದಿಂದ ಓಡಾಡುವಂತಾಗಬೇಕು, ಸಾರ್ವಜನಿಕರು ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಬೇಕು ಎಂದು ವೀಣಾಅಚ್ಚಯ್ಯ ಮನವಿ ಮಾಡಿದರು.

ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್, ಯುವ ಘಟಕದ ಜಿಲ್ಲಾ ಉಪಾಧ್ಯಕ್ಷ ಸಫ್ರುದ್ದೀನ್, ವಿರಾಜಪೇಟೆ ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಕೆ.ಸೋಮಣ್ಣ, ವೀಣಾ ಅವರ ಪುತ್ರರಾದ ಶಾಂತೆಯಂಡ ವಿಕಾಸ್ ಅಚ್ಚಯ್ಯ, ವಿಶಾಲ್ ಕಾರ್ಯಪ್ಪ, ಸೊಸೆ ಶ್ವೇತಾ ಕಾರ್ಯಪ್ಪ, ಆಪ್ತಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ, ಪ್ರಮುಖರಾದ ಯಮುನಾ ಅಯ್ಯಪ್ಪ ಮತ್ತಿತರರು ಈ ಸಂದರ್ಭ ಹಾಜರಿದ್ದರು.