ಸೋಮವಾರಪೇಟೆ ತಾ.ಪಂ ಸಭೆ : ಗ್ರಾಮೀಣ ಭಾಗದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಪ್ರವಾಸಿಗರ ನಿರ್ಬಂಧಕ್ಕೆ ತೀರ್ಮಾನ

October 6, 2020

ಸೋಮವಾರಪೇಟೆ ಅ. 6 : ಗ್ರಾಮೀಣ ಭಾಗದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದರಿಂದ ತಾಲೂಕಿನ ಗ್ರಾಮೀಣ ಭಾಗದಲ್ಲಿರುವ ಪ್ರವಾಸಿ ಸ್ಥಳಗಳಿಗೆ ಪ್ರವಾಸಿಗರು ಬರುವುದಕ್ಕೆ ನಿರ್ಬಂಧ ವಿಧಿಸಬೇಕೆಂದು ಮಂಗಳವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡುವಂತೆ ತೀರ್ಮಾನಿಸಲಾಯಿತು.
ವೈದ್ಯಾಧಿಕಾರಿ ಸುಪರ್ಣಾ ಅವರು, ಕೋವಿಡ್-19 ಸೋಂಕು ಸಮುದಾಯಕ್ಕೆ ಹರಡಿದೆ. ನಮ್ಮನ್ನು ನಾವೇ ರಕ್ಷಣೆ ಮಾಡಿಕೊಳ್ಳಬೇಕಾಗಿದೆ. ಗ್ರಾಮೀಣ ಭಾಗದಲ್ಲಿ ಜನರು ಸೋಂಕು ಪತ್ತೆ ಪರೀಕ್ಷೆಗೆ ಒಳಪಡಲು ಹಿಂದೇಟು ಹಾಕುತ್ತಿದ್ದಾರೆ. ಅದರಲ್ಲೂ ಸರ್ಕಾರಿ ಇಲಾಖೆಯ ಸಿಬ್ಬಂದಿಗಳು ಪ್ರತಿಯೋರ್ವರು ಸ್ವಯಂಪ್ರೇರಿತವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಗ್ರಾಮೀಣ ಭಾಗದಲ್ಲಿ ಸೋಂಕು ಹೆಚ್ಚುತ್ತಿರುವ ಬಗ್ಗೆ ಸಭೆಯಲ್ಲಿ ಸದಸ್ಯರು ಸುದೀರ್ಘವಾಗಿ ಚರ್ಚಿಸಿದರು. ದುಬಾರೆಯಲ್ಲಿ ಭಾನುವಾರ ಸಾವಿರಷ್ಟು ಪ್ರವಾಸಿಗರು ಸೇರಿದ್ದು, ಸೋಂಕು ಹರಡುವ ಕೇಂದ್ರವಾಗಿದೆ ಎಂದು ಸದಸ್ಯ ವಿಜು ಚಂಗಪ್ಪ ಹೇಳಿದರು.
ಸದ್ಯಕ್ಕೆ ಪ್ರವಾಸಿ ಕೆಂದ್ರಗಳಿಗೆ ನಿಷೇಧ ಹೇರುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲು ತೀರ್ಮಾನಿಸಲಾಗಿದೆ ಎಂದು ಅಧ್ಯಕ್ಷೆ ಪುಷ್ಪರಾಜೇಶ್ ಹೇಳಿದರು.
ಜನ ಗುಂಪು ಸೇರುವುದನ್ನು ತಡೆಯಲ್ಲಿ ತಾಲೂಕಿನಲ್ಲಿ ಸೆಕ್ಷನ್ 144 ಜಾರಿಗೆ ತರುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲು ಸಭೆ ತೀರ್ಮಾನಿಸಿತು.
ಕೋವಿಡ್-19 ಸೋಂಕು ಪತ್ತೆಹಚ್ಚುವ ಸಂಬಂಧ ಆರೋಗ್ಯ ಇಲಾಖೆಯೊಂದಿಗೆ ಪಿಡಿಒಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ ಎಂದು ಉಪಾಧ್ಯಕ್ಷ ಅಭಿಮನ್ಯುಕುಮಾರ್, ತಾಪಂ ಕಾರ್ಯನಿರ್ವಹಣಾಧಿಕಾರಿ ಜಯಣ್ಣ ಗಮನಕ್ಕೆ ತಂದರು. ಪಿಡಿಒ ಸಭೆಗಳಿಗೆ ತಾಲೂಕು ಆರೋಗ್ಯಾಧಿಕಾರಿಗಳಿಗೆ ಆಹ್ವಾನ ನೀಡಬೇಕೆಂದು ತಿಳಿಸಿದರು. ಪಿಡಿಒಗಳ ಸಹಕಾರಕ್ಕೆ ಸೂಚನೆ ನೀಡಲಾಗುವುದು ಎಂದು ಇಒ ಹೇಳಿದರು.
ಸರ್ವೆ ಇಲಾಖೆಯಲ್ಲಿ ಮದ್ಯವರ್ತಿಗಳ ಹಾವಳಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಾಗದ ಪೋಡಿ ಹಾಗೂ ದುರಿಸ್ತಿಗಾಗಿ ಮದ್ಯವರ್ತಿಗಳ ಮೂಲಕವೇ ಅಧಿಕಾರಿಗಳು ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಉಪಾಧ್ಯಕ್ಷ ಅಭಿಮನ್ಯು ಕುಮಾರ್ ಗಂಭೀರ ಆರೋಪ ಮಾಡಿದರು. ಈ ವಿಷಯ ಕಂದಾಯ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ತಹಸೀಲ್ದಾರ್ ಗೋವಿಂದರಾಜು ತಿಳಿಸಿದ್ದಾರೆ. ಎಡಿಎಲ್‍ಆರ್ ಸಭೆಗೆ ಗೈರಾಗುತ್ತಿರುವ ಬಗ್ಗೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಕೋಟಿ ವೆಚ್ಚದ ಸಿಂಥೆಟಿಕ್ ಟರ್ಪ್ ಕಾಮಗಾರಿ ನಡೆಯುತ್ತಿದ್ದು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳು ಮೇಲುಸ್ತುವಾರಿ ನೋಡಿಕೊಳ್ಳದೆ ಕಾಮಗಾರಿ ಕಳಪೆಯಾಗಿದೆ ಎಂದು ಅಭಿಮನ್ಯು ಕುಮಾರ್ ನೇರ ಆರೋಪ ಮಾಡಿದರು. ಅಧಿಕಾರಿಗಳು ತಾಪಂ ಸಾಮಾನ್ಯ ಸಭೆಗೆ ನಿರಂತರ ಗೈರು ಆಗುತ್ತಿದ್ದು, ಇವರ ವಿರುದ್ಧ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಮಾಡುವಂತೆ ಸಭೆ ತೀರ್ಮಾನಿಸಿತು.
ತಾಲೂಕಿನಲ್ಲಿ ವಿದ್ಯಾರ್ಥಿಗಳಿಲ್ಲದೆ ಮುಚ್ಚಿದ 4 ಶಾಲೆಗಳನ್ನು ಈ ವರ್ಷ ಆರಂಭಿಸಲಾಗುವುದು. ಖಾಸಗಿ ಶಾಲೆಗಳಿಂದ 222 ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ದಾಖಲಾಗಿದ್ದಾರೆ ಎಂದು ಬಿ.ಇ.ಒ. ಪಾಂಡು ತಿಳಿಸಿದರು. ಸರ್ಕಾರಿ ಶಾಲೆಯಲ್ಲೂ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಆನೇಕ ಯೋಜನೆಗಳನ್ನು ತಂದಿದ್ದು, ಮಕ್ಕಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.

error: Content is protected !!