ಸಾಂಪ್ರದಾಯಿಕ ಉಡುಗೆ ಬಗ್ಗೆ ಆಕ್ಷೇಪವಿರಲಿಲ್ಲ : ನಾಗರಿಕ ಸಮಿತಿ, ಗೌಡ ಸಮಾಜ ಸ್ಪಷ್ಟನೆ

06/10/2020

ಮಡಿಕೇರಿ ಅ.6 : ಕಾವೇರಿ ತುಲಾ ಸಂಕ್ರಮಣದ ಹಿನ್ನೆಲೆಯಲ್ಲಿ ಸೆ.27 ರಂದು ಭಾಗಮಂಡಲ ಗೌಡ ಸಮಾಜದ ವತಿಯಿಂದ ಸಭೆ ನಡೆಯಿತೇ ಹೊರತು, ಭಾಗಮಂಡಲ ನಾಗರಿಕ ಸಮಿತಿ ಸಭೆಯನ್ನು ಆಯೋಜಿಸಿರಲಿಲ್ಲವೆಂದು ಸಮಿತಿಯ ಸಂಚಾಲಕ ಹಾಗೂ ಭಾಗಮಂಡಲ ಗೌಡ ಸಮಾಜದ ನಿರ್ದೇಶಕ ಕುದುಕುಳಿ ಭರತ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ಮಾಧ್ಯಮಗಳ ಮೂಲಕ ನಾಗರಿಕ ಸಮಿತಿಯಿಂದ ಸಭೆ ನಡೆದಿದೆಯೆಂದು ತಪ್ಪು ಮಾಹಿತಿ ರವಾನೆಯಾಗಿದ್ದು, ಯಾರೂ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲವೆಂದು ಮನವಿ ಮಾಡಿದರು.
ಕಳೆದ 30 ವರ್ಷಗಳಿಂದ ನಾಗರಿಕ ಸಮಿತಿ ಎಲ್ಲಾ ಜಾತಿ, ಜನಾಂಗದವರೊಂದಿಗೆ ಸೌಹಾರ್ದತೆಯೊಂದಿಗೆ ಸಾಮಾಜಿಕ ಕಳಕಳಿಯ ಹೋರಾಟಗಳನ್ನು ನಡೆಸಿಕೊಂಡು ಬಂದಿದೆ. ಆದರೆ, ಭಾಗಮಂಡಲದಲ್ಲಿ ನಡೆದ ಸಭೆಯ ಕುರಿತು ನಾಗರಿಕ ಸಮಿತಿಯ ಮೇಲೆ ಕೆಲವರು ಬೇಸರ ಪಟ್ಟುಕೊಂಡಿದ್ದಾರೆ.
ಆ ಸಭೆಗೂ, ಸಮಿತಿಗೂ ಯಾವುದೇ ಸಂಬಂಧವಿರುವುದಿಲ್ಲ. ಅಲ್ಲದೆ, ಸಭೆಯಲ್ಲಿ ಕಾವೇರಿ ತುಲಾಸಂಕ್ರಮಣ ಜಾತ್ರೆಯನ್ನು ಪ್ರತಿ ವರ್ಷದಂತೆ ಸಂಪ್ರದಾಯ ಬದ್ಧವಾಗಿ ನಡೆಸಬೇಕೆಂದು ಚರ್ಚಿಸಲಾಗಿದೆ. ಪತ್ತಾಯಕ್ಕೆ ಅಕ್ಕಿ ಹಾಕುವ ದಿನದಿಂದ ಪ್ರಾರಂಭವಾಗಿ ಭಾಗಮಂಡಲದಲ್ಲಿ ಕ್ಷೇತ್ರಪಾಲ ಗುಳಿಗ ಮತ್ತು ವಿಷ್ಣುಮೂರ್ತಿ ತೆರೆ ಮುಗಿಯುವವರೆಗೆ ತಮ್ಮ ಕಾರ್ಯಗಳನ್ನು ವ್ಯವಸ್ಥಿತವಾಗಿ ನಡೆಸಬೇಕೆಂದು ಭಾಗಮಂಡಲ ತಕ್ಕರಿಗೆ ಸಲಹೆ ನೀಡಲಾಗಿದೆ.
ತಲಕಾವೇರಿಯ ತಕ್ಕರು ಭಾಗಮಂಡಲದಿಂದ ಆಭರಣಗಳನ್ನು ಅ.15 ರಂದು ತೆಗೆದುಕೊಂಡು ಹೋದ ನಂತರ ಕಿರು ಸಂಕ್ರಮಣದವರೆಗೆ ಎಲ್ಲಾ ದೈವಿಕ ಸಂಪ್ರದಾಯಗಳನ್ನು ಕ್ರಮಬದ್ಧವಾಗಿ ನಡೆಸಬೇಕೆಂದು ಮನವಿ ಮಾಡಲಾಗಿದೆಯೇ ಹೊರತು ಅಂದಿನ ಸಭೆಯಲ್ಲಿ ಯಾವುದೇ ಸಾಂಪ್ರದಾಯಿಕ ಉಡುಪಿನ ಬಗ್ಗೆ ಚರ್ಚೆ ನಡೆದಿಲ್ಲವೆಂದು ಭರತ್ ಸ್ಪಷ್ಟಪಡಿಸಿದರು.
ತಕ್ಕರ ದಟ್ಟಿ ಕುಪ್ಪಸ ವ್ಯವಸ್ಥಿತವಾಗಿರಬೇಕೆಂದು ಹಿರಿಯರು ಸಲಹೆ ನೀಡಿದ್ದಾರೆ, ಬೇರೆ ಯಾರೂ ದಟ್ಟಿ ಕುಪ್ಪಸ ಧರಿಸಬಾರದೆಂಬ ಚರ್ಚೆಗಳು ನಡೆದಿಲ್ಲ. ಕೊಡಗಿನ 18 ಮೂಲ ನಿವಾಸಿಗಳಿಂದ ಹಾಲೇರಿ ವಂಶದ ರಾಜರು ದೇವಾಲಯ, ಅರಮನೆ ಹಾಗೂ ಹಬ್ಬ ಹರಿದಿನಗಳಲ್ಲಿ ಕುಪ್ಪಚಾಲೆ, ದಟ್ಟಿ ಕುಪ್ಪಸ ಧರಿಸಿ ಸಂಭ್ರಮಿಸಲು ಅವಕಾಶ ಮಾಡಿಕೊಟ್ಟಿದ್ದರು. ಈ ಸಂಪ್ರದಾಯ ಮುಂದುವರೆದುಕೊಂಡು ಬಂದಿರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಆದರೆ, ಮಾಧ್ಯಮಗಳಲ್ಲಿ ಬಂದಿರುವಂತೆ ಸಾಂಪ್ರದಾಯಿಕ ವಸ್ತ್ರಗಳನ್ನು ಧರಿಸಿ ತಲಕಾವೇರಿಗೆ ಬರಬಾರದೆನ್ನುವ ವಿಚಾರ ಪ್ರಸ್ತಾಪವಾಗಿಲ್ಲವೆಂದು ಭರತ್ ತಿಳಿಸಿದರು.
ಪತ್ತಾಯಕ್ಕೆ ಅಕ್ಕಿ ಹಾಕುವ ಸಂದರ್ಭದಲ್ಲಿ ನಡೆದ ಗೊಂದಲಗಳು ಮುಂದಿನ ದಿನಗಳಲ್ಲಿ ಆಗದಂತೆ ತಕ್ಕರು ಎಚ್ಚರಿಕೆ ವಹಿಸಬೇಕೆಂದು ಸಭೆಯಲ್ಲಿ ಹಿರಿಯರು ಸಲಹೆ ನೀಡಿರುವುದಾಗಿ ಅವರು ಹೇಳಿದರು.
ಭಾಗಮಂಡಲ ಗೌಡ ಸಮಾಜದ ಅಧ್ಯಕ್ಷ ಕುದುಪಜೆ ಪಿ.ಪಳಂಗಪ್ಪ ಮಾತನಾಡಿ, ಜಿಲ್ಲೆಯಲ್ಲಿರುವ ಎರಡು ಪ್ರಬಲ ಜನಾಂಗಗಳು ಒಗ್ಗಟ್ಟು ಮತ್ತು ಅನ್ಯೋನ್ಯತೆಯಿಂದ ತಲಕಾವೇರಿಯ ಸಂಪ್ರದಾಯವನ್ನು ಪಾಲಿಸಿಕೊಂಡು ಬರಬೇಕಾಗಿದೆ. ಅಶಾಂತಿಯನ್ನು ಮೂಡಿಸುವ ರೀತಿ ನಡೆದುಕೊಂಡರೆ ಕಾವೇರಿಯ ಶಾಪ ತಟ್ಟಬಹುದೆಂದು ಆತಂಕ ವ್ಯಕ್ತಪಡಿಸಿದರು.
ಭಾಗಮಂಡಲದಲ್ಲಿ ಭಕ್ತಾದಿಗಳಿಗೆ ಅತಿಥಿ ಗೃಹಗಳ ಮೂಲಕ ಆಶ್ರಯ ನೀಡಲಾಗುತ್ತಿದೆಯೇ ಹೊರತು ಯಾವುದೇ ಮೋಜು ಮಸ್ತಿ ನಡೆಯುತ್ತಿಲ್ಲ. ಆದ್ದರಿಂದ ವಸತಿ ಗೃಹ ಅಥವಾ ಹೋಂ ಸ್ಟೇಗಳು ಭಾಗಮಂಡಲದಲ್ಲಿ ನಡೆಯಬಾರದೆಂದು ಹೇಳುವುದು ಸರಿಯಾದ ಕ್ರಮವಲ್ಲ ಎಂದು ಪಳಂಗಪ್ಪ ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ಗೌಡ ಸಮಾಜದ ಕಾರ್ಯದರ್ಶಿ ನಿಡ್ಯಮಲೆ ರವಿ ಹಾಗೂ ನಿರ್ದೇಶಕದ ಕುಯ್ಯಮುಡಿ ಮನೋಜ್ ಕುಮಾರ್ ಉಪಸ್ಥಿತರಿದ್ದರು.