ಸಿಬಿಐ ದಾಳಿ : ಕೀಳುಮಟ್ಟದ ರಾಜಕಾರಣವೆಂದ ಕೊಡಗು ಕಾಂಗ್ರೆಸ್ : ಅ.8 ರಂದು ಪ್ರತಿಭಟನೆ

ಮಡಿಕೇರಿ ಅ.6 : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮನೆ ಮೇಲೆ ಸಿಬಿಐ ಅಧಿಕಾರಿಗಳನ್ನು ಚೂ ಬಿಟ್ಟು ನಿರಂತರ ದಾಳಿ ನಡೆಸುವ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೀಳು ಮಟ್ಟದ ರಾಜಕಾರಣವನ್ನು ಪ್ರದರ್ಶಿಸುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಗುಜರಾತ್ ರಾಜಕೀಯ ಹಿನ್ನೆಲೆಯಲ್ಲಿ ಅಲ್ಲಿನ ಶಾಸಕರು ರಾಜ್ಯಕ್ಕೆ ಬಂದಿದ್ದ ಸಂದರ್ಭ ಕೂಡ ಡಿ.ಕೆ.ಶಿವಕುಮಾರ್ ಅವರ ಮನೆಯ ಮೇಲೆ ಐಟಿ ದಾಳಿ ನಡೆದಿತ್ತು. ಪ್ರಸ್ತುತ ಉಪಚುನಾವಣೆ ಘೋಷಣೆಯಾಗಿರುವುದರಿಂದ ಮತ್ತೊಮ್ಮೆ ಹತಾಶ ಮನೋೀಭಾವನೆಯಿಂದ ಸಿಬಿಐ ಮೂಲಕ ದಾಳಿ ನಡೆಸಿ ಪ್ರಬಲ ನಾಯಕನ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ ಎಂದು ಟೀಕಿಸಿದರು.
ಸ್ವತಃ ರಾಜ್ಯ ಸರ್ಕಾರವೇ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಮಂತ್ರಿಗಳು ಸರ್ಕಾರಿ ಇಲಾಖೆಗಳನ್ನು ಭ್ರಷ್ಟ ಕೇಂದ್ರಗಳನ್ನಾಗಿ ಮಾರ್ಪಡಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಹೋರಾಟವನ್ನು ಸಹಿಸಲಾಗದ ಬಿಜೆಪಿ ಜನರ ದಿಕ್ಕನ್ನು ಬೇರೆಡೆಗೆ ಸೆಳೆÉಯುವ ಉದ್ದೇಶದಿಂದ ಡಿ.ಕೆ.ಶಿವಕುಮಾರ್ ಅಂತಹ ಸಮರ್ಥ ನಾಯಕನ ವಿರುದ್ಧ ಕಾರ್ಯಾಚರಣೆಗೆ ಇಳಿದಿದೆ. ಇದನ್ನು ಖಂಡಿಸಿ ಅ.8 ರಂದು ಮಡಿಕೇರಿಯಲ್ಲಿ ಪ್ರತಿಭಟನಾ ಮೆರವಣಿಗೆ ಮತ್ತು ಗಾಂಧಿ ಮೈದಾನದಲ್ಲಿ ಸಭೆ ನಡೆಸಲಾಗುವುದೆಂದು ತಿಳಿಸಿದರು.
ಬಿಜೆಪಿ ಅಧಿಕಾರದಲ್ಲಿರುವ ಎಲ್ಲಾ ರಾಜ್ಯಗಳಲ್ಲಿ ದಬ್ಬಾಳಿಕೆ ನಡೆಯುತ್ತಿದೆ ಎಂದು ಅವರು ಟೀಕಿಸಿದರು. ಉತ್ತರ ಪ್ರದೇಶದಲ್ಲಿ ದಲಿತ ಯುವತಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಖಂಡಿಸಿದ ಮಂಜುನಾಥ್ ಕುಮಾರ್, ಯೋಗಿ ಆದಿತ್ಯನಾಥ್ ಆಡಳಿತದಲ್ಲಿ ದರೋಡೆ, ಕೊಲೆ, ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಸಾಮೂಹಿಕ ಅತ್ಯಾಚಾರದಿಂದ ಮೃತಪಟ್ಟ ಯುವತಿಯ ಶವವನ್ನು ಕೂಡ ಕುಟುಂಬಕ್ಕೆ ನೀಡದೆ ಪೊಲೀಸರು ದರ್ಪ ಮೆರೆದಿದ್ದಾರೆ. ಯೋಗಿ ಸರ್ಕಾರ ನಾಮಕಾವಸ್ಥೆಗೆ ಪೊಲೀಸರನ್ನು ಅಮಾನತು ಮಾಡಿದೆ. ಶೋಷಿತ ವರ್ಗದ ಅನ್ಯಾಯಕ್ಕೆ ನ್ಯಾಯವೇ ಸಿಗದ ಪರಿಸ್ಥಿತಿ ಆ ರಾಜ್ಯದಲ್ಲಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯರಾದ ಟಿ.ಪಿ.ರಮೇಶ್, ಸಂಯೋಜಕ ಹೆಚ್.ಎಂ.ನಂದಕುಮಾರ್, ಜಿಲ್ಲಾ ಕಾಂಗ್ರೆಸ್ ವಕ್ತಾರ ಎಸ್.ಐ.ಮುನೀರ್ ಅಹಮ್ಮದ್, ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ಕೆ.ಯು.ಅಬ್ದುಲ್ ರಜಾಕ್ ಹಾಗೂ ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ನೆರವಂಡ ಉಮೇಶ್ ಉಪಸ್ಥಿತರಿದ್ದರು.
