ಅತ್ಯಾಚಾರ ಪ್ರಕರಣ : ದಲಿತ ಜನಪ್ರತಿನಿಧಿಗಳ ರಾಜೀನಾಮೆಗೆ ಒತ್ತಾಯ

October 6, 2020

ಮಡಿಕೇರಿ ಅ.6 : ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದಿರುವ ದಲಿತ ಯುವತಿಯ ಮೇಲಿನ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಬಿಜೆಪಿಯ ದಲಿತ ಶಾಸಕರು, ಸಂಸದರು ಹಾಗೂ ಸಚಿವರುಗಳು ತಮ್ಮ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕ ಒತ್ತಾಯಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ದಲಿತ ಯುವತಿಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ನಡೆಸಿ ಹತ್ಯೆ ಮಾಡಿರುವ ಅಮಾನವೀಯ ಘಟನೆಯನ್ನು ಖಂಡಿಸಲಾಗದ ಪರಿಸ್ಥಿತಿಯಲ್ಲಿ ಬಿಜೆಪಿಯಲ್ಲಿರುವ ದಲಿತ ಮುಖಂಡರುಗಳು ಸಿಲುಕಿಕೊಂಡಿದ್ದಾರೆ ಎಂದು ಆರೋಪಿಸಿದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಜನರಿಗಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಅದೇ ಸಂವಿಧಾನದಡಿಯಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿಯ ದಲಿತ ಸಚಿವರು, ಸಂಸದರು ಹಾಗೂ ಶಾಸಕರು ತಮ್ಮ ತಮ್ಮ ಸ್ವಾರ್ಥಕ್ಕಾಗಿ ಮೌನಕ್ಕೆ ಶರಣಾಗಿ ಅಧಿಕಾರವನ್ನು ಭದ್ರಕೊಳಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ತಮ್ಮ ಸಮುದಾಯದವರಿಗೇ ನ್ಯಾಯ ದೊರಕಿಸಿಕೊಡಲಾಗದ ಮುಖಂಡರು ಅಧಿಕಾರಲ್ಲಿದ್ದು, ಏನು ಪ್ರಯೋಜನ ಎಂದು ದಿವಾಕರ್ ಪ್ರಶ್ನಿಸಿದರು.
ದೇಶ ಮುಂದುವರೆದಿದೆ, ಕಾನೂನು ಸುವ್ಯವಸ್ಥೆ ಬಲಿಷ್ಠವಾಗಿದೆ ಎಂದು ನಮ್ಮನ್ನು ಆಳುತ್ತಿರುವವರು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಆದರೆ ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳೇ ಕಳೆದರೂ ಸ್ತ್ರೀಕುಲಕ್ಕೆ ರಕ್ಷಣೆ ಇಲ್ಲದಾಗಿದೆ. ದಬ್ಬಾಳಿಕೆ, ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ದುಷ್ಕøತ್ಯ ನಡೆಸುವವರಿಗೆ ಈ ದೇಶದ ಕಾನೂನಿನ ಬಗ್ಗೆ ಭಯ ಇಲ್ಲದಾಗಿದೆ. ಕಾನೂನು ಕಠಿಣವಾಗಬೇಕೆನ್ನುವ ಅಪೇಕ್ಷೆ ಕೋಟ್ಯಾಂತರ ಜನರಲ್ಲಿದ್ದರೂ ಆಡಳಿತ ನಡೆಸುತ್ತಿರುವವರ ಇಚ್ಛಾಶಕ್ತಿಯ ಕೊರತೆಯಿಂದ ಅಪರಾಧಿಗಳು ತಪ್ಪಿಸಿಕೊಳ್ಳುತ್ತಲೇ ಇದ್ದಾರೆ. ಈ ಹಿಂದೆ ದೆಹಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣದ ತೀರ್ಪು ಹೊರ ಬೀಳಲು ಮತ್ತು ಶಿಕ್ಷೆಯನ್ನು ವಿಧಿಸಲು ಅನೇಕ ವರ್ಷಗಳೇ ಬೇಕಾಯಿತು. ಅತ್ಯಾಚಾರ ಮತ್ತು ಹತ್ಯೆ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಶೀಘ್ರವಾಗಿ ಇತ್ಯರ್ಥ ಪಡಿಸುವ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದರು.
ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದ ದಲಿತ ಯುವತಿಯ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಅತ್ಯಂತ ಅಮಾನವೀಯ ಕೃತ್ಯವಾಗಿದ್ದು, ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ದಿವಾಕರ್ ಒತ್ತಾಯಿಸಿದರು. ಬಿಜೆಪಿ ನೇತೃತ್ವದ ಆಡಳಿತವಿರುವ ರಾಜ್ಯದಲ್ಲೇ ಅತ್ಯಾಚಾರ, ದೌರ್ಜನ್ಯ, ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದೆ. ಹತ್ರಾಸ್ ನಲ್ಲಿ ನಡೆದ ಘಟನೆಯನ್ನು ಬಿಜೆಪಿ ಖಂಡಿಸದೆ ಇರುವುದನ್ನು ಗಮನಿಸಿದರೆ ದಲಿತರ ಮೇಲೆ ಆ ಪಕ್ಷಕ್ಕೆ ಕಾಳಜಿ ಎಷ್ಟಿದೆ ಎನ್ನುವುದು ಸಾಬೀತಾಗುತ್ತದೆ. ಕೇವಲ ಮತ ಬ್ಯಾಂಕ್‍ಗಾಗಿ ದಲಿತರನ್ನು ಬಳಸಿಕೊಳ್ಳುತ್ತಿರುವ ಬಿಜೆಪಿ ದಲಿತರ ಮೇಲೆ ದೌರ್ಜನ್ಯಗಳು ನಡೆದಾಗ ಜಾಣ ಮೌನಕ್ಕೆ ಶರಣಾಗುತ್ತಿದೆ ಎಂದು ಆರೋಪಿಸಿದರು.
::: ಅ.9 ರಂದು ಪ್ರತಿಭಟನೆ :::
ಉತ್ತರ ಪ್ರದೇಶದ ಹತ್ರಾಸ್ ಪ್ರಕರಣವನ್ನು ಖಂಡಿಸಿ ಮತ್ತು ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಅ.9 ರಂದು ಸಂಘಟನೆ ವತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಲಾಗುವುದು. ಅಂದು ಬೆಳಗ್ಗೆ 11 ಗಂಟೆಗೆ ನಗರದ ಜನರಲ್ ತಿಮ್ಮಯ್ಯ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳು ಹಾಗೂ ಪ್ರಧಾನಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ದಿವಾಕರ್ ಹೇಳಿದರು.
ಸಮಿತಿಯ ತಾಲ್ಲೂಕು ಸಂಚಾಲಕ ಎ.ಪಿ.ದೀಪಕ್ ಮಾತನಾಡಿ ಅತ್ಯಾಚಾರ ಪ್ರಕರಣವನ್ನು ತೀವ್ರವಾಗಿ ಖಂಡಿಸಿದರು. ಮಹಾತ್ಮ ಗಾಂಧಿ ಅವರ ಆಶಯದಂತೆ ಮಧ್ಯರಾತ್ರಿ ಹೆಣ್ಣು ಮಗಳೊಬ್ಬಳು ಒಂಟಿಯಾಗಿ ಓಡಾಡುವ ಪರಿಸ್ಥಿತಿ ಇನ್ನೂ ಕೂಡ ದೇಶದಲ್ಲಿ ಸೃಷ್ಟಿಯಾಗದೇ ಇರುವುದು ದುರಾದೃಷ್ಟಕರ. ದೇಶಕ್ಕೆ ಸ್ವಾತಂತ್ರ್ಯ ಬಂದು 74 ವರ್ಷಗಳೇ ಕಳೆದಿದ್ದರೂ ಹೆಣ್ಣು ಮಕ್ಕಳಿಗೆ ಸೂಕ್ತ ರಕ್ಷಣೆ ಮತ್ತು ಸ್ವಾತಂತ್ರ್ಯ ಇಲ್ಲದಾಗಿದೆ ಎಂದು ಆರೋಪಿಸಿದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವೈಫಲ್ಯತೆಯ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ದೀಪಕ್ ಒತ್ತಾಯಿಸಿದರು.
ಸುಂಟಿಕೊಪ್ಪ ಹೋಬಳಿ ಸಂಚಾಲಕ ಎಂ.ಎಸ್.ರವಿ, ಸಂಘಟನಾ ಸಂಚಾಲಕ ಎ.ಜಯಣ್ಣ, ಮೂರ್ನಾಡು ಹೋಬಳಿ ಸಂಚಾಲಕ ರಘು ಬೈರ ಹಾಗೂ ಮೂರ್ನಾಡು ಹೋಬಳಿ ಸಂಚಾಲಕ ದಿನೇಶ್ ಪೆಗ್ಗೋಲಿ ಉಪಸ್ಥಿತರಿದ್ದು ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದರು.