ವಿದ್ಯುತ್ ಕ್ಷೇತ್ರ ಖಾಸಗೀಕರಣ : ಕೇಂದ್ರ ಸರ್ಕಾರದ ವಿರುದ್ಧ ಸುಂಟಿಕೊಪ್ಪ ಚೆಸ್ಕಾಂ ಸಿಬ್ಬಂದಿಗಳಿಂದ ಪ್ರತಿಭಟನೆ

06/10/2020

ಸುಂಟಿಕೊಪ್ಪ,ಅ.6: ಸುಂಟಿಕೊಪ್ಪ ಚೆಸ್ಕಾಂ ಇಲಾಖೆಯ ಸಿಬ್ಬಂದಿಗಳು ಮತ್ತು ಕಾರ್ಮಿಕರು ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡುವ ಸರ್ಕಾರದ ನೀತಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು.
ಸುಂಟಿಕೊಪ್ಪ ಚೆಸ್ಕಾಂ ಇಲಾಖೆಯ ಮುಂಭಾಗದಲ್ಲಿ ಸೇರಿದ ಸಿಬ್ಬಂದಿಗಳು ಕೇಂದ್ರ ಸರ್ಕಾರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರವು ಹಲವು ತಿಂಗಳುಗಳಲ್ಲಿ ಸರ್ಕಾರದ ಅಧೀನದ ವಿವಿಧ ವಲಯ ಮತ್ತು ಇಲಾಖೆಗಳನ್ನು ಖಾಸಗೀಕರಣ ಮಾಡಲು ಮುಂದಾಗಿದೆ. ಅದರಲ್ಲೂ ಸಾರ್ವಜನಿಕ ನಿರಂತರ ಸೇವೆಗಾಗಿಯೇ ಇರುವ ವಿದ್ಯುತ್ ಇಲಾಖೆಯನ್ನು ಖಾಸಗೀಕರಣ ಮಾಡುವುದರಿಂದ ಸಿಬ್ಬಂದಿಗಳಿಗೆ ಮಾತ್ರವಲ್ಲ ಸಾರ್ವಜನಿಕರಿಗೂ ಬಹಳಷ್ಟು ತೊಂದರೆಯಾಗಲಿದೆ ಎಂದು ಸಿಬ್ಬಂದಿಗಳು ಆರೋಪಿಸಿದರು.
ಕೇಂದ್ರ ಸರ್ಕಾರವು ವಿದ್ಯುತ್ ಇಲಾಖೆಯನ್ನು ಖಾಸಗೀಕರಣ ಮಾಡುವುದನ್ನು ನಿಲ್ಲಿಸಿ ಈಗ ಇರುವಂತೆಯೇ ಸರ್ಕಾರಿ ಸೌಮ್ಯದಲ್ಲಿಯೇ ಮುಂದುವರಿಸಬೇಕು ಎಂದು ಚೆಸ್ಕಾಂ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಪ್ರತಿಭಟನೆಯ ಮೂಲಕ ಆಗ್ರಹಿಸಿದರು.