ಸಿಬಿಐ ದಾಳಿ ರಾಜಕೀಯ ಪ್ರೇರಿತ : ಕಾಂಗ್ರೆಸ್ ವಕ್ತಾರ ಎ.ಎಸ್. ಟಾಟು ಮೊಣ್ಣಪ್ಪ ಆರೋಪ
06/10/2020

ಮಡಿಕೇರಿ ಅ. 6 : ಡಿ.ಕೆ. ಶಿವಕುಮಾರ್ ಅವರನ್ನೆ ಗುರಿಯಾಗಿಟ್ಟುಕೊಂಡು ಮಾಡುತ್ತಿರುವ ಸಿಬಿಐ ಹಾಗೂ ಈ ಹಿಂದೆ ಇಡಿ ದಾಳಿ ರಾಜಕೀಯ ಪ್ರೇರಿತ ಹಾಗೂ ದುರುದ್ದೇಶದಿಂದ ಕೂಡಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ಎ.ಎಸ್. ಟಾಟು ಮೊಣ್ಣಪ್ಪ ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಳೆದ ಏಳು ವರ್ಷಗಳಿಂದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕೇವಲ ವಿರೋಧ ಪಕ್ಷವನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಇದುವರೆಗೆ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷದವರ ಮೇಲೆ ಒಂದೇ ಒಂದು ದಾಳಿ ಮಾಡಿಲ್ಲ ಎಂದರು.
ಈಗಾಗಲೇ ಮುಖ್ಯಮಂತ್ರಿ ಕುಟುಂಬದ ಸದಸ್ಯರ ಮೇಲೆ ಬಹುಕೋಟಿ ಹಗರಣ ಹಾಗೂ ಸಚಿವ ಸಂಪುಟದ ಕೆಲವು ಸದಸ್ಯರ ಅಕ್ರಮ ಆಸ್ತಿ ಹಾಗೂ ಎಂಎಲ್‍ಸಿ ಸಿ.ಪಿ. ಯೋಗೇಶ್ವರ ಮೇಲೆ ಹಲವು ಹಗರಣ ಇದ್ದರು ಸಹ ಇಲ್ಲಿಯವರೆಗೆ ಯಾವುದೇ ತನಿಖೆ ನಡೆಸಲಿಲ್ಲ ಎಂದು ದೂರಿದರು. ತನಿಖೆ ಕೇವಲ ಕಾಂಗ್ರೆಸ್ ಮುಖಂಡರನ್ನೆ ಗುರಿಯಾಗಿಸಿಕೊಂಡು ಮಾಡುವ ಸಿಬಿಐ ದಾಳಿಯನ್ನು ಜಿಲ್ಲಾ ಕಾಂಗ್ರೆಸ್ ಖಂಡಿಸುತ್ತದೆ ಎಂದರು.
