ಕೊಡಗಿನಲ್ಲಿ 500 ರಿಂದ 600 ಕೋವಿಡ್ ಪರೀಕ್ಷೆ ನಡೆಯಲಿ : ಸಚಿವ ಡಾ.ಕೆ.ಸುಧಾಕರ್ ಸೂಚನೆ

06/10/2020

ಮಡಿಕೇರಿ ಅ.6 : ಕೋವಿಡ್ ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಪ್ರತಿ ದಿನ 500 ರಿಂದ 600 ಪರೀಕ್ಷೆ ನಡೆಯಬೇಕೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸೂಚನೆ ನೀಡಿದ್ದಾರೆ.
ನಗರದ ಜಿ.ಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ ಕೊರೊನಾ ನಿಯಂತ್ರಣದ ಜವಾಬ್ದಾರಿಯನ್ನು ನೀಡಿರುವ ಹಿನ್ನೆಲೆ ಜಿಲ್ಲೆಗೆ ಭೇಡಿ ನೀಡಿರುವುದಾಗಿ ತಿಳಿಸಿದರು.
ಲಾಕ್ ಡೌನ್ ವೇಳೆಯಲ್ಲಿ ಒಬ್ಬ ಸೋಂಕಿತರಿಂದ 45 ರಿಂದ 46 ಸಂಪರ್ಕಿತರನ್ನು ಪತ್ತೆ ಹಚ್ಚುತ್ತಿದ್ದೆವು. ಸಾರ್ವಜನಿಕರು ಮತ್ತಷ್ಟು ಜಾಗೃತರಾಗಬೇಕಿದ್ದು, ಮಾಸ್ಕ್ ಸರಿಯಾಗಿ ಹಾಕದಿರುವವರಿಗೆ 500 ರೂ. ದಂಡ ವಿಧಿಸಿ ಮಾಸ್ಕ್ ನ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ತಿಳಿಸುವ ಕಾರ್ಯ ಮಾಡುತ್ತಿದೆ ಎಂದು ತಿಳಿಸಿದರು.
ಮಾಸ್ಕ್ ಧರಿಸದಿರುವ ಸಂಬಂಧ ಕಳೆದ ಒಂದು ವಾರದ ಅವಧಿಯಲ್ಲಿ 1753 ಪ್ರಕರಣಗಳು ದಾಖಲಾಗಿದೆ. ಲಸಿಕೆ ಕಂಡು ಹಿಡಿಯುವವರೆಗೂ ಮಾಸ್ಕ್ ಲಸಿಕೆಯಾಗಿ ಕಾರ್ಯನಿರ್ವಹಿಸಲಿದೆ ಎಂದರು.
ಜಿಲ್ಲೆಯಲ್ಲಿ ಹೊಟೇಲ್ ಗಳಿಗಿಂತ ಹೋಂಸ್ಟೇ ಹೆಚ್ಚು ಇದೆ. ಪ್ರವಾಸಿಗರು ಒಂದೆರಡು ದಿನಗಳು ಮಾತ್ರ ಇರುತ್ತಾರೆ. ಆದರೆ ಅವರಲ್ಲಿ ಸೋಂಕಿತರು ಇದ್ದರೆ ಪತ್ತೆಹಚ್ಚುವುದು ಕಷ್ಟ ಸಾದ್ಯ. ಈ ನಿಟ್ಟಿನಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡುವ ಬಗ್ಗೆ ಕ್ರಮ ವಹಿಸಿ ಎಂದು ಹೇಳಿದರು.
ಸೋಂಕಿತರ ಸಂಪರ್ಕಿತರನ್ನು ಪತ್ತೆಹಚ್ಚಿ ಪರೀಕ್ಷಿಸುವ ಮೂಲಕ ಕೊರೊನಾ ಸೋಂಕು ಹರಡುವುದನ್ನು ತಪ್ಪಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ಕೋವಿಡ್ ಪರೀಕ್ಷೆ ಹೆಚ್ಚಿಸುವುದು, ಕೋವಿಡ್ ಬಗ್ಗೆ ಅರಿವು ಮೂಡಿಸುವುದು, ಗಣ್ಯರಿಂದ ಸಂದೇಶ ನೀಡುವುದು, ಹೀಗೆ ಹಲವು ರೀತಿಯ ಕ್ರಮಗಳನ್ನು ಕೈಗೊಂಡು ಕೋವಿಡ್ ನಿಯಂತ್ರಣ ಮಾಡಬೇಕಿದೆ. ಜನರ ಸಹಭಾಗಿತ್ವ ಅತ್ಯಗತ್ಯ. ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ನಿಗಾವಹಿಸಬೇಕು. ಹೆಚ್ಚಿನ ಜನದಟ್ಟಣೆ ಪ್ರದೇಶಗಳಲ್ಲಿ ಕೋವಿಡ್ ಮಾರ್ಗಸೂಚಿ ಅನುಸರಿಸುವುದು, ಆರ್ಥಿಕ ಹಾಗೂ ದಿನನಿತ್ಯ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಗಮನಹರಿಸುವುದು ಅಗತ್ಯ ಎಂದರು.
ಲಾಕ್‍ಡೌನ್ ವೇಳೆಗಿಂತ ಅನ್‍ಲಾಕ್ ಡೌನ್ ಸಂದರ್ಭದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಅನ್‍ಲಾಕ್ ಸಂದರ್ಭದಲ್ಲಿ ಕೋವಿಡ್ ಹೋಯಿತು ಎಂದು ಭಾವಿಸಬಾರದು. ಈ ಸಂದರ್ಭದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕಿದೆ ಎಂದು ಡಾ.ಕೆ.ಸುಧಾಕರ್ ಅವರು ಸಲಹೆ ಮಾಡಿದರು.
ಜಿಲ್ಲೆಯಲ್ಲಿ 540 ಸಕ್ರಿಯ ಪ್ರಕರಣಗಳಿದ್ದು, ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣ ಹೆಚ್ಚಾಗುತ್ತಿದೆ. ಕಳೆದ 5 ದಿನದಲ್ಲಿ ಮರಣ ಪ್ರಮಾಣ ಶೇ.2.2 ರಷ್ಟು ಹೆಚ್ಚಳವಾಗಿದೆ. ಅದಕ್ಕಿಂತ ಮುಂಚೆ 1.7 ರಷ್ಟು ಇತ್ತು, ಮರಣ ಪ್ರಮಾಣ ಕಡಿಮೆ ಮಾಡಬೇಕಿದೆ ಎಂದು ವೈದ್ಯಕೀಯ ಸಚಿವರು ಹೇಳಿದರು.
ಕೋವಿಡ್ ನಿಯಂತ್ರಿಸುವಲ್ಲಿ ಮತ್ತು ಪ್ರಕೃತಿ ವಿಕೋಪ ಎದುರಿಸುವಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾಡಳಿತ ಸಮರ್ಪಕವಾಗಿ ನಿರ್ವಹಿಸಿದೆ ಎಂದರು.
ಜಿಲ್ಲೆಯಲ್ಲಿ ಇದುವರೆಗೆ ಶೇ.67 ರಷ್ಟು ಕೋವಿಡ್ ಪರೀಕ್ಷೆ ಮಾಡಲಾಗಿದೆ. ಇನ್ನಷ್ಟು ಕೋವಿಡ್ ಪರೀಕ್ಷೆ ಮಾಡಬೇಕು. ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣ ಹೆಚ್ಚಳವಾಗುತ್ತಿರುವುದು ಆತಂಕದ ವಿಚಾರ. 100 ಜನ ಪರೀಕ್ಷೆಗೆ ಒಳಪಡಿಸಿದ್ದಲ್ಲಿ 20 ಜನರಿಗೆ ಪಾಸಿಟಿವ್ ಕಂಡು ಬರುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.
ಹೋಂ ಕ್ವಾರಂಟೈನ್‍ನಲ್ಲಿ ಇರುವವರನ್ನು ವೈದ್ಯರು ತೆರಳಿ ವಿಚಾರಿಸಿಕೊಳ್ಳಬೇಕು. ಆಸ್ಪತ್ರೆಯಲ್ಲಿ ಹೆಚ್ಚು ಒತ್ತಡ ಇರಬಾರದು ಎಂಬ ಉದ್ದೇಶದಿಂದ ಹೋಂ ಕ್ವಾರಂಟೈನ್ ಮತ್ತು ಹೋಂ ಐಸೋಲೇಷನ್ ಮಾಡಲಾಗುತ್ತಿದೆ. ಆದ್ದರಿಂದ ಇವರನ್ನು ಆಗಾಗ ಭೇಟಿ ನೀಡಿ ಗಮನಿಸಬೇಕು ಎಂದು ಡಾ.ಸುಧಾಕರ್ ಅವರು ಸೂಚಿಸಿದರು.
ಕೋವಿಡ್ ಪರೀಕ್ಷೆಗೆ ನಾಗರಿಕರು ಸಹಕರಿಸಬೇಕು. ಮಾಸ್ಕ್ ಬಳಸದಿರುವುದು ಕಂಡು ಬಂದರೆ 500 ರೂ. ದಂಡವನ್ನು ಪೊಲೀಸ್ ಇಲಾಖೆ ವಸೂಲಿ ಮಾಡಲಿದೆ ಎಂದರು. ಮಾಸ್ಕ್‍ನ್ನು ಸರಿಯಾಗಿ ಬಳಸುವುದು. ಶೇ.90 ರಷ್ಟು ಲಸಿಕೆ ಇದ್ದಂತೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಕೋವಿಡ್ ಪರೀಕ್ಷೆಯ ವರದಿಯನ್ನು ಕಾಲ ಮಿತಿಯೊಳಗೆ ಒದಗಿಸುವ ನಿಟ್ಟಿನಲ್ಲಿ ವೈದ್ಯರು ಮೂರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದರು.
ಗ್ರಾಮೀಣ ಪ್ರದೇಶದಲ್ಲಿ ಕಾರ್ಯಪಡೆ ನಿಯೋಜಿಸಿ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಜಿಲ್ಲೆಗೆ ವಾರಾಂತ್ಯದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಕೋವಿಡ್ ನಿಯಂತ್ರಣ ಸಂಬಂಧ ಮಾಹಿತಿ ನೀಡಬೇಕು ಎಂದು ಅವರು ಹೇಳಿದರು.
ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ ತಾಲ್ಲೂಕು ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ ಇದ್ದು, ತಜ್ಞ ವೈದ್ಯರನ್ನು ನಿಯೋಜಿಸಬೇಕು ಎಂದು ಅವರು ಮನವಿ ಮಾಡಿದರು.
ದಸರಾ ಹಾಗೂ ತುಲಾ ಸಂಕ್ರಮಣ ಜಾತ್ರೆ ಸಂದರ್ಭದಲ್ಲಿ ಜನದಟ್ಟಣೆ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಬೇಕಿದೆ. ಆ ನಿಟ್ಟಿನಲ್ಲಿ 144 ಸೆಕ್ಷನ್ ಜಾರಿ ಮಾಡಬೇಕು ಎಂದು ಅವರು ಕೋರಿದರು.
ಜಿಲ್ಲೆಯ ಕೋವಿಡ್ ಪ್ರಕರಣ ಹೆಚ್ಚು ಕಂಡುಬರುವ ಪ್ರದೇಶಗಳಲ್ಲಿ ಹೆಚ್ಚಿನ ಕೋವಿಡ್ ಪರೀಕ್ಷೆ ಮಾಡಬೇಕು. ಜೊತೆಗೆ ವೈದ್ಯಾಧಿಕಾರಿಗಳು ಅಲ್ಲಿಯೇ ವಾಸ್ತವ್ಯ ಹೂಡುವಂತಾಗಬೇಕು ಎಂದರು.
ಮಡಿಕೇರಿ, ಸೋಮವಾರಪೇಟೆ, ಕುಶಾಲನಗರ ಹಾಗೂ ಗೋಣಿಕೊಪ್ಪ ಸಂತೆ ಸ್ಥಳವನ್ನು ಆರ್‍ಎಂಸಿಗೆ ಸ್ಥಳಾಂತರಿಸಬೇಕು ಎಂದು ಶಾಸಕರಾದ ಕೆ.ಜಿ.ಬೋಪಯ್ಯ ಹಾಗೂ ಅಪ್ಪಚ್ಚುರಂಜನ್ ಅವರು ಸಲಹೆ ಮಾಡಿದರು.
ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ ಶನಿವಾರ ಮತ್ತು ಭಾನುವಾರ ರಾಜಾಸೀಟು, ಅಬ್ಬಿ ಮತ್ತು ಇರ್ಪು ಜಲಪಾತ, ತಲಕಾವೇರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಇವರು ಸರಿಯಾಗಿ ಮಾಸ್ಕ್ ಧರಿಸಿದ್ದಾರೆಯೇ ಎಂಬ ಬಗ್ಗೆ ಗಮನಿಸಬೇಕು ಎಂದರು.
ಕೋವಿಡ್-19 ನಿಯಂತ್ರಣ ಸಂಬಂಧ ಜಾಗೃತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಮಾಡಬೇಕು. ಜನಪ್ರತಿನಿಧಿಗಳು, ಕ್ರೀಡಾಪಟುಗಳು, ಧಾರ್ಮಿಕ ಗುರುಗಳು, ಮತ್ತಿತರ ಗಣ್ಯರಿಂದ ಕೋವಿಡ್ ನಿಯಂತ್ರಣ ಬಗ್ಗೆ ಸಂದೇಶಗಳನ್ನು ನೀಡಬೇಕು. ವಿವಿಧ ಮಾಧ್ಯಮಗಳ ಮೂಲಕ ಕೋವಿಡ್ ನಿಯಂತ್ರಣ ಸಂಬಂಧ ಸಂದೇಶ ಭಿತ್ತರಿಸಬೇಕು ಎಂದು ಡಾ.ಕೆ.ಸುಧಾಕರ್ ಅವರು ಸಲಹೆ ಮಾಡಿದರು. ಸರ್ಕಾರ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರನ್ನು ಖಾಯಂ ಮಾಡಲು ಮುಂದಾಗಿದೆ ಎಂದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕೋವಿಡ್ ಸಂಬಂಧಿಸಿದಂತೆ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿ ಜಿಲ್ಲೆಯಲ್ಲಿ ಇದುವರೆಗೆ 3,163 ಪ್ರಕರಣಗಳು ವರದಿಯಾಗಿದ್ದು, ಇದುವರೆಗೆ 2,600 ಮಂದಿ ಬಿಡುಗಡೆಯಾಗಿದ್ದಾರೆ. 514 ಸಕ್ರಿಯ ಪ್ರಕರಗಳು ಇದ್ದು, ಶೇ.1.5ರಷ್ಟು ಮರಣ ಪ್ರಮಾಣ, ಇದುವರೆಗೆ 45,684 ಮಾದರಿ ಪರೀಕ್ಷೆ ಮಾಡಲಾಗಿದೆ. 475 ನಿಯಂತ್ರಿತ ಪ್ರದೇಶಗಳಿವೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 100 ಹಾಸಿಗೆಯ ಕೋವಿಡ್ ಆಸ್ಪತ್ರೆ ಮತ್ತು 150 ಹಾಸಿಗೆ ಸಾಮಥ್ರ್ಯದ ಡಿಸಿಎಚ್‍ಸಿಗಳಿದ್ದು, ಈ ಪೈಕಿ 150 ಹಾಸಿಗೆಗಳಿಗೆ ಆಮ್ಲಜನಕ ಸರಬರಾಜು ವ್ಯವಸ್ಥೆ ಇದೆ. ಜಿಲ್ಲೆಯಲ್ಲಿ ಸುಸಜ್ಜಿತವಾದ 56 ಬೆಡ್‍ಗಳ ತೀವ್ರ ನಿಗಾ ಘಟಕ ಕಾರ್ಯನಿರ್ವಹಿಸುತ್ತಿದೆ. ಮಕ್ಕಳ ಮತ್ತು ನವಜಾತ ಶಿಶುಗಳಿಗೆ ವಿಶೇಷ ಸೌಲಭ್ಯವಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಜಿ.ಪಂ.ಅಧ್ಯಕ್ಷÀ ಬಿ.ಎ.ಹರೀಶ್, ಉಪಾಧ್ಯಕ್ಷ ಲೋಕೇಶ್ವರಿ ಗೋಪಾಲ್, ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಕಾರ್ಯಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ವೈದ್ಯಕೀಯ ಕಾಲೇಜಿನ ಆಡಳಿತಾಧಿಕಾರಿ ಡಾ.ನಂಜುಂಡೇಗೌಡ, ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಧೀಕ್ಷಕರಾದ ಡಾ.ಲೋಕೇಶ್ ಇತರರು ಹಾಜರಿದ್ದರು.