ಶಬರಿಮಲೆಗೆ ಪ್ರಮಾಣ ಪತ್ರ ಕಡ್ಡಾಯ

07/10/2020

ತಿರುವನಂತಪುರಂ ಅ.7 : ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಪ್ರವೇಶಿಸಲು ಭಕ್ತರಿಗೆ ಕೋವಿಡ್-19 ನೆಗಟಿವ್ ಪ್ರಮಾಣ ಪತ್ರ ಕಡ್ಡಾಯ ಮಾಡಬೇಕು ಎಂದು ತಜ್ಞರ ಸಮಿತಿ ಕೇರಳ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಎರಡು ತಿಂಗಳ ವಾರ್ಷಿಕ ಮಂಡಲ ಪೂಜೆ ಮಹೋತ್ಸವ ಮತ್ತು ಮಕರವಿಳಕ್ಕು ಉತ್ಸವ ನ. 16ರಿಂದ ಆರಂಭವಾಗಲಿದ್ದು, ದೇವಾಲಯ ತೆರೆದ ನಂತರ ಅನುಸರಿಸಬೇಕಾದ ಮಾರ್ಗಸೂಚಿಗಳ ಕುರಿತು ತಜ್ಞರ ಸಮಿತಿ ಸರ್ಕಾರಕ್ಕೆ ವರದಿ ನೀಡಿದ್ದು, ಅದರಲ್ಲಿ ಕೋವಿಡ್-19 ನೆಗಟಿವ್ ವರದಿ ಕಡ್ಡಾಯಗೊಳಿಸುವಂತೆಯೂ ಶಿಫಾರಸು ಮಾಡಲಾಗಿದೆ.
ಸಮಿತಿಯ ಶಿಫಾರಸುಗಳನ್ನು ಸರ್ಕಾರ ವಿವರವಾಗಿ ಪರಿಶೀಲಿಸಲಿದೆ ಎಂದು ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ಅವರು ಹೇಳಿದ್ದಾರೆ. ಬುಧವಾರ ಸಚಿವ ಸಂಪುಟ ಸಭೆ ಇದ್ದು, ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಕೋವಿಡ್-19 ನೆಗಟಿವ್ ಪ್ರಮಾಣಪತ್ರದೊಂದಿಗೆ ಆಗಮಿಸುವ ಯಾತ್ರಾರ್ಥಿಗಳಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡಬೇಕು ಮತ್ತು ದೇವಸ್ಥಾನ ಪ್ರವೇಶಕ್ಕೂ ಮುನ್ನ ಹೊಸದಾಗಿ ಪರೀಕ್ಷೆ ಮಾಡಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಸಮಿತಿಯು ಶಿಫಾರಸು ಮಾಡಿದೆ. 60 ವರ್ಷಕ್ಕಿಂತ ಮೇಲ್ಪಟ್ಟವರು ಯಾವುದೇ ಗಂಭೀರ ಕಾಯಿಲೆಗಳಿಂದ ಬಳಲುತ್ತಿಲ್ಲ ಎಂದು ವೈದ್ಯಕೀಯ ಪ್ರಮಾಣಪತ್ರವನ್ನು ಸಹ ನೀಡಬೇಕು ಎಂದು ಸಮಿತಿ ಹೇಳಿದೆ.