ಇಲಿಗಳ ದೇವಾಲಯ ಎಂದೇ ಪ್ರಸಿದ್ಧಿ ಹೊಂದಿರುವ ರಾಜಸ್ತಾನದ ಕರ್ಣಿಮಾತಾ ದೇವಾಲಯ

07/10/2020

ಇದು ರಾಜಸ್ತಾನದ ಬಿಕನೇರ್ ನಿಂದ ಸುಮಾರು 30 ಕಿಮೀ ದೂರದಲ್ಲಿ ದೇಶ್ನೋಕ್ ಎಂಬ ಊರಿನಲ್ಲಿದೆ. ಇದು ಇಲಿಗಳ ದೇವಸ್ಥಾನವೆಂದೇ ಪ್ರಸಿದ್ಧಿ ಹೊಂದಿದೆ.

ಕರ್ಣಿಮಾತೆಯು ದುರ್ಗಾ ದೇವಿಯ ಅವತಾರವೆಂದು ನಂಬಿಕೆ. ನೀರು ಕುಡಿಯಲು ಹೋಗಿದ್ದ ಕರ್ಣಿ ಮಾತಾಳ ಪುತ್ರ ಲಕ್ಷ್ಮಣ ಸರೋವರದಲ್ಲಿ ಮುಳುಗಿಬಿಟ್ಟನಂತೆ. ಆತನನ್ನು ಬದುಕಿಸುವಂತೆ ಕರ್ಣಿ ಮಾತಾ ಯಮರಾಜನ ಬಳಿ ಪ್ರಾರ್ಥಿಸಿದ್ದಳು. ಇದಕ್ಕೆ ಸಮ್ಮತಿಸಿದ ಯಮರಾಜ, ಕರ್ಣಿ ಮಾತೆಯ ಮಗನಿಗೆ ಇಲಿಯ ರೂಪದಲ್ಲಿ ಪುನರ್ಜನ್ಮ ನೀಡಿದ್ದ ಎಂಬ ಪುರಾಣವಿದೆ. ಇಲ್ಲಿ ಕಾಲಿಟ್ಟಲ್ಲೆಲ್ಲಾ ಇಲಿಗಳು ಎಡತಾಕುತ್ತವೆ. ಈ ದೇವಾಲಯದ ಆವರಣದಲ್ಲಿ ಮುವತ್ತು ಸಾವಿರಕ್ಕೂ ಅಧಿಕ ಇಲಿಗಳಿವೆಯಂತೆ. ಆದರೆ ಬಿಳಿ ಇಲಿಗಳು ಅತ್ಯಂತ ಕಡಿಮೆ ಸಂಖ್ಯೆಯಲ್ಲಿವೆ. ಯಾರಿಗೆ ಬಿಳಿ ಇಲಿಯ ದರ್ಶನವಾಗುತ್ತದೆಯೋ ಅವರು ಅದೃಷ್ಟವಂತರು ಎಂದು ಹೇಳಲಾಗುತ್ತದೆ. ಆಕಸ್ಮಿಕವಾಗಿ ನಿಮ್ಮ ಕಾಲಡಿಯಲ್ಲಿ ಸಿಕ್ಕು ಇಲಿ ಮೃತಪಟ್ಟರೆ ಆ ಪಾಪಕ್ಕೆ ನೀವು ಬೆಳ್ಳಿ ಅಥವಾ ಚಿನ್ನದ ಇಲಿಯನ್ನು ಕಾಣಿಕೆಯಾಗಿ ನೀಡಿ ಹರಕೆ ತೀರಿಸಿಕೊಂಡು ಪ್ರಾಯಶ್ಚಿತ ಮಾಡಿಕೊಳ್ಳಬೇಕಂತೆ. ಇಲ್ಲಿ ಇಲಿ ತಿಂದು ಉಳಿದ ಆಹಾರವನ್ನು ಪ್ರಸಾದದ ರೂಪದಲ್ಲಿ ಭಕ್ತರಿಗೆ ನೀಡಲಾಗುತ್ತದೆ. ಸಹಸ್ರಾರು ಇಲಿಗಳು ಇಲ್ಲಿದ್ದರೂ ಈ ದೇಗುಲದಲ್ಲಿ ದುರ್ವಾಸನೆಯಿಲ್ಲ. ಇಲ್ಲಿ ಪ್ರಸಾದ ತಿಂದವರು ಆರೋಗ್ಯ ತಪ್ಪಿಲ್ಲವಂತೆ. ಒಟ್ಟಿನಲ್ಲಿ ಇಲಿಯ ಎಂಜಲು ಶುಭವನ್ನು ತರುತ್ತದೆ ಎಂದು ಭಕ್ತರು ನಂಬುತ್ತಾರೆ.