ರೈತರ ಬೆಳೆಸಾಲ ಮನ್ನಾ ಮಾಡಲು ಸೋಮವಾರಪೇಟೆ ತಾಲ್ಲೂಕು ಕಾಫಿ ಬೆಳೆಗಾರರ ಸಂಘ ಆಗ್ರಹ

07/10/2020

ಸೋಮವಾರಪೇಟೆ ಅ. 7 : ಕಳೆದ ಕೆಲವು ವರ್ಷಗಳಿಂದ ಕಾಫಿ ಬೆಳೆಗಾರರು ನಿರಂತರವಾಗಿ ಬೆಳೆ ನಷ್ಟದೊಂದಿಗೆ ಕೃಷಿ ಭೂಮಿ ಹಾನಿಯಾಗುತ್ತಿದ್ದು, ರೈತರ ಬೆಳೆಸಾಲ ಸಂಪೂರ್ಣ ಮನ್ನಾ ಮಾಡುವಂತೆ ತಾಲ್ಲೂಕು ಕಾಫಿ ಬೆಳೆಗಾರರ ಸಂಘ ಆಗ್ರಹಿಸಿದೆ.
ಸುದ್ದಿಗೊಷ್ಠಿಯಲ್ಲಿ ಬೆಳೆಗಾರರ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ ಮಾತನಾಡಿ, ನಿರಂತರವಾಗಿ ಕಾಫಿ ಬೆಳೆಗಾರರು ನಷ್ಟವನ್ನು ಅನುಭವಿಸುತ್ತಿದ್ದಾರೆ. ಇದರೊಂದಿಗೆ, ಅರೇಬಿಕಾ ಕಾಫಿ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿದೆ. ಕಾರ್ಮಿಕರ ಕೆಲಸದ ಸಮಯ ಕಡಿಮೆಯಾಗಿದೆ. ಗೊಬ್ಬರ ಸೇರಿದಂತೆ ಎಲ್ಲಾ ಪರಿಕರಗಳ ಬೆಳೆ ದುಪ್ಪಟ್ಟಾಗಿದೆ. ಆದರೆ, ಕಾಫಿ ಇಳುವರಿ ಮಾತ್ರ ಕಡಿಮೆಯಾಗುತ್ತಿದೆ. ಶೇ. 90ರಷ್ಟು ಸಣ್ಣ ಕಾಫಿ ಬೆಳೆಗಾರರು ನಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಚುನಾವಣೆಗೂ ಮುನ್ನ ಸಂಸದ ಪ್ರತಾಪ್ ಸಿಂಹ ಬೆಳೆಗಾರರ ಸಾಲವನ್ನು ಸಂಪೂರ್ಣ ಮನ್ನಾ ಮಾಡುವುದಾಗಿ ಘೊಷಣೆ ಮಾಡಿದ್ದರು. ಆದರೆ, ಸಾಲ ಮನ್ನಾ ಮಾಡಲಿಲ್ಲ ಎಂದು ಹೇಳಿದರು.
ಕಳೆದ 10-15 ವರ್ಷಗಳಿಂದ ಕಾಫಿ ಉತ್ಪಾದನಾ ವೆಚ್ಚ ಹೆಚ್ಚಾಗಿದ್ದು, ಉತ್ಪಾದನೆ ಮಾತ್ರ 5ರಿಂದ 6 ಚೀಲ ಕಾಫಿ ಸಿಗುತ್ತಿದೆ. ಕಾರ್ಮಿಕರ ಕೆಲಸದ ಅವಧಿ ನಾಲ್ಕು ಗಂಟೆಗೆ ಸೀಮಿತವಾಗಿದೆ. ಈ ಹಿನ್ನೆಲೆಯಲ್ಲಿ ಬೆಳೆಗಾರರ ಅಭಿವೃದ್ಧಿ ಸಾಲದ ಅವಧಿಯನ್ನು ಎರಡು ವರ್ಷಗಳಿಗೆ ಮುಂದೂಡಿ ಬಡ್ಡಿ ರಹಿತವಾಗಿ ಬ್ಯಾಂಕುಗಳು ಪಡೆಯಬೇಕು. ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ರೈತರ ರೂ. 50 ಸಾವಿರ ಸಾಲ ಹಾಗೂ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದ ಸಂದರ್ಭ ರೂ 1 ಲಕ್ಷ ಸಾಲ ಮನ್ನಾ ಮಾಡಲಾಗಿತ್ತು. ಆದರೆ, ಇಂದಿಗೂ ಹೆಚ್ಚಿನ ರೈತರ ಸಾಲ ಮನ್ನಾ ಆಗಲಿಲ್ಲ. ಕೂಡಲೇ ಅಧಿಕಾರಿಗಳು ರೈತರ ಸಾಲಾ ಮನ್ನಾ ಮಾಡಬೇಕೆಂದು ಆಗ್ರಹಿಸಿದರು.
ರೈತರಿಗೆ ಕಳೆದ ಎರಡು ವರ್ಷಗಳ ಹಿಂದ ಎನ್‍ಡಿಆರ್‍ಎಫ್ ಮತ್ತು ಎಸ್‍ಡಿಆರ್‍ಎಫ್‍ಗಳು ಹೆಕ್ಟೇರಿಗೆ ರೂ. 28 ಸಾವಿರ ಬೆಳೆ ನಷ್ಟವನ್ನು ನೀಡಿದ್ದವು. ಆದರೆ, ಪ್ರಸಕ್ತ ಸಾಲಿನಲ್ಲಿ ಹೆಕ್ಟೇರಿಗೆ ರೂ 12 ಸಾವಿರ ಮಾತ್ರ ಘೋಷಣೆಯಾಗಿದೆ. ಅದು ಹೆಚ್ಚಾಗಬೇಕು. ಮಳೆ ಹಾನಿಗೊಳಗಾದ ಹಲವು ರೈತರಿಗೆ ಇಂದಿಗೂ ನಷ್ಟ ಪರಿಹಾರ ನೀಡಿಲ್ಲ. ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ತಕ್ಷಣ ಪರಿಹಾರ ನೀಡುವ ಮೂಲಕ ಬೆಳೆಗಾರರ ಹಿತ ಕಾಯಬೇಕೆಂದರು.
ಉಪಾಧ್ಯಕ್ಷ ಬಿ.ಎಂ. ಲವ ಮಾತನಾಡಿ, ಕಾಫಿ ಮಂಡಳಿ ಇತ್ತೀಚಿನ ವರ್ಷಗಳಲ್ಲಿ ನಿಷ್ಟ್ರಿಯವಾಗಿದೆ. ಇಲಾಖೆಯನ್ನು ಕೇಂದ್ರ ಸರ್ಕಾರ ಸ್ವತಂತ್ರಗೊಳಿಸಬೇಕು. ಮಂಡಳಿಯ ಅಧ್ಯಕ್ಷರಿಗೆ ಸಂಪೂರ್ಣ ಅಧಿಕಾರ ನೀಡುವ ಮೂಲಕ ಇಲಾಖೆಯನ್ನು ಪುನಶ್ಚೇತನಗೊಳಿಸಬೇಕೆಂದರು.
ಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಎಸ್.ಸಿ. ಪ್ರಕಾಶ್, ನಿರ್ದೇಶಕರಾದ ಬಿ.ಜಿ. ಪೂವಮ್ಮ, ಸೋಮಶೇಖರ್ ಉಪಸ್ಥಿತರಿದ್ದರು.