ಜಿಲ್ಲಾ ಕಾಂಗ್ರೆಸ್ ನಿಂದ ಅರ್ಥವಿಲ್ಲದ ವ್ಯರ್ಥ ಪ್ರತಿಭಟನೆ : ಕೊಡಗು ಬಿಜೆಪಿ ಟೀಕೆ

ಮಡಿಕೇರಿ ಅ.7 (NEWS DESK) : ನಿಯಮ ಮೀರಿ ಹಣ ಸಂಪಾದಿಸಿದ ಆರೋಪದಡಿ ಪ್ರಕರಣಗಳನ್ನು ಎದುರಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪರ ಜಿಲ್ಲಾ ಕಾಂಗ್ರೆಸ್ ಸಮಿತಿ ಅ.8 ರಂದು ಹಮ್ಮಿಕೊಂಡಿರುವ ಪ್ರತಿಭಟನೆ ಅರ್ಥಹೀನವಾಗಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ ಟೀಕಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ದೇಶವನ್ನು ಭ್ರಷ್ಟಾಚಾರ ಮುಕ್ತಗೊಳಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನಿಯಮಗಳನ್ನು ರೂಪಿಸುತ್ತಿದ್ದರೆ, ಕಾಂಗ್ರೆಸ್ ಪಕ್ಷ ಮಾತ್ರ ಭ್ರಷ್ಟರಿಗೆ ಕುಮ್ಮಕ್ಕು ನೀಡುವ ಕಾರ್ಯದಲ್ಲಿ ತೊಡಗಿದೆ ಎಂದು ಆರೋಪಿಸಿದ್ದಾರೆ.
ದೇಶದ ಅದೆಷ್ಟೋ ರಾಜಕಾರಣಿಗಳ ಮನೆಯ ಮೇಲೆ ಸಿಬಿಐ ದಾಳಿಯಾಗಿದೆ. ಹಲವು ಪ್ರಕರಣಗಳಲ್ಲಿ ಖ್ಯಾತ ರಾಜಕಾರಣಿಗಳಿಗೆ ಜೈಲು ಶಿಕ್ಷೆಯಾಗಿದೆ. ಇನ್ನು ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯ ಕ್ಲೀನ್ ಚಿಟ್ ನೀಡಿ ನಾಯಕರನ್ನು ಖುಲಾಸೆಗೊಳಿಸಿದ ಉದಾಹರಣೆಗಳೂ ಇದೆ.
ಇ.ಡಿ ಮತ್ತು ಸಿಬಿಐ ಕಾನೂನಿನ ಪ್ರಕಾರವೇ ತನ್ನ ಕಾರ್ಯವನ್ನು ದಕ್ಷತೆಯಿಂದ ಮಾಡುತ್ತಿದ್ದು, ಅದೇ ಪ್ರಕಾರವಾಗಿ ಡಿ.ಕೆ.ಶಿವಕುಮಾರ್ ಅವರ ಮನೆಯ ಮೇಲೂ ದಾಳಿ ನಡೆದಿದೆ. ಆದರೆ ಈ ದಾಳಿ ಬಿಜೆಪಿ ಪ್ರೇರಿತ ಎಂದು ಕಾಂಗ್ರೆಸ್ ಮಾಡುತ್ತಿರುವ ಆರೋಪ ಖಂಡನೀಯವೆಂದು ಮಹೇಶ್ ಜೈನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೂಕ್ತ ತನಿಖೆಯ ನಂತರ ನ್ಯಾಯಾಲಯದಲ್ಲಿ ಶಿವಕುಮಾರ್ ಅವರು ಪ್ರಾಮಾಣಿಕರೋ ಅಥವಾ ಭ್ರಷ್ಟರೋ ಎನ್ನುವುದು ಸಾಬೀತಾಗಲಿದೆ. ಅಲ್ಲಿಯವರೆಗೆ ತಾಳ್ಮೆಯಿಂದ ಕಾಯದೆ ಕ್ಷುಲ್ಲಕ ರಾಜಕಾರಣಕ್ಕಾಗಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಈ ಹಿಂದೆ ಬಿಜೆಪಿ ನಾಯಕರ ಬಂಧನವಾದಾಗ ಬಿಜೆಪಿ ಮುಖಂಡರು ಅಥವಾ ಕಾರ್ಯಕರ್ತರು ಬೀದಿಗಳಿದು ಪ್ರತಿಭಟನೆ ನಡೆಸಿದ ಉದಾಹರಣೆ ಇದೆಯೇ ಎಂದು ಪ್ರಶ್ನಿಸಿರುವ ಅವರು, ಬಿಜೆಪಿಗೆ ನ್ಯಾಯಾಲಯದ ಬಗ್ಗೆ ಅಪಾರ ಗೌರವವಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ತಪ್ಪು ಮಾಡಿದವರಿಗೆ ಶಿಕ್ಷಯಾಗಬೇಕು ಹೊರತು ನಿರಪರಾಧಿಗಳಿಗೆ ಅಲ್ಲ ಎನ್ನುವ ಸಿದ್ಧಾಂತವನ್ನು ಬಿಜೆಪಿ ಹೊಂದಿದೆ. ಒಬ್ಬ ನಾಯಕನ ಪ್ರಾಮಾಣಿಕತೆಯನ್ನು ನ್ಯಾಯಾಲಯ ನಿರ್ಧರಿಸುತ್ತದೆಯೇ ಹೊರತು ಪಕ್ಷ ನಿರ್ಧರಿಸಲು ಸಾಧ್ಯವಿಲ್ಲ. ಡಿ.ಕೆ.ಶಿವಕುಮಾರ್ ಅವರ ಪ್ರಕರಣದ ಬಗ್ಗೆ ಕಾಂಗ್ರೆಸ್ ಪಕ್ಷವೇ ತೀರ್ಪು ನೀಡುವ ತರಾತುರಿಯಲ್ಲಿದೆ ಎಂದು ಟೀಕಿಸಿದ್ದಾರೆ.
ಸಿಬಿಐ ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, ರಾಜಕೀಯ ಅಥವಾ ಸರ್ಕಾರದ ಹಸ್ತಕ್ಷೇಪಕ್ಕೆ ಅವಕಾಶವೇ ಇಲ್ಲ. ವಿನಾಕಾರಣ ಸಿಬಿಐ ವ್ಯವಸ್ಥೆಯ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸುವ ಕಾರ್ಯದಲ್ಲಿ ಕಾಂಗ್ರೆಸ್ ಪಕ್ಷ ತೊಡಗಿದೆ ಎಂದು ಆರೋಪಿಸಿರುವ ಮಹೇಶ್ ಜೈನಿ, ವ್ಯರ್ಥ ಪ್ರತಿಭಟನೆ ಮಾಡುವ ಬದಲು ದೇಶದ ಕಾನೂನಿಗೆ ಮೊದಲು ಗೌರವ ನೀಡಿ ತನಿಖೆಗೆ ಸಹಕರಿಸಲಿ ಎಂದು ಒತ್ತಾಯಿಸಿದ್ದಾರೆ.