ಹಳೇ ಬಸ್ ನಿಲ್ದಾಣದ ಕಾಮಗಾರಿ ನೆನೆಗುದಿಗೆ : ತಕ್ಷಣ ನಿರ್ಮಾಣ ಕಾರ್ಯ ಆರಂಭಿಸಲು ಜಿಲ್ಲಾಧಿಕಾರಿ ಸೂಚನೆ

07/10/2020

ಮಡಿಕೇರಿ ಅ.7 : ನಗರದ ಖಾಸಗಿ ಹಳೇ ಬಸ್ ನಿಲ್ದಾಣದ ಬಳಿಯ ತಡೆಗೋಡೆ ಕಾಮಗಾರಿ ಕಳೆದ ಮೂರು ವರ್ಷಗಳಿಂದ ಸ್ಥಗಿತಗೊಂಡಿದ್ದು, ತಕ್ಷಣ ನಿರ್ಮಾಣ ಕಾರ್ಯ ಆರಂಭಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸೂಚನೆ ನೀಡಿದ್ದಾರೆ.

ನಗರದ ನಗರಸಭೆಯ ಕೌನ್ಸಿಲ್ ಸಭಾಂಗಣದಲ್ಲಿ ನಗರ ಮತ್ತು ಪಟ್ಟಣ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿ ಸಂಬಂಧಿಸಿದಂತೆ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಗರದ ಖಾಸಗಿ ಹಳೇ ಬಸ್ ನಿಲ್ದಾಣದ ಕಾಮಗಾರಿ ಆರಂಭಿಸಲು ಕಾರ್ಯಾದೇಶ ನೀಡಬೇಕು ಎಂದು ಪೌರಾಯುಕ್ತರು ಹಾಗೂ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ನಿರ್ದೇಶನ ನೀಡಿದರು.

ಇಂದಿರಾ ಕ್ಯಾಂಟೀನ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ನಿವಾಸದ ಬಳಿ ತಡೆಗೋಡೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ವಿರಾಜಪೇಟೆಯ ಅಯ್ಯಪ್ಪ ಬೆಟ್ಟದ ನಿರಾಶ್ರಿತರಿಗೆ ವಸತಿ ಕಲ್ಪಿಸಲು ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ನಿರ್ದೇಶನ ನೀಡಿದ್ದು, ಅದರಂತೆ ಪ.ಪಂ.ಮುಖ್ಯಾಧಿಕಾರಿ ಅವರು ತ್ವರಿತ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸೂಚಿಸಿದರು.

ನಗರೋತ್ಥಾನ ಯೋಜನೆಯಡಿ ಬಾಕಿ ಇರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಯಾವುದಾದರೂ ಕಾಮಗಾರಿ ಬದಲಾವಣೆ ಇದ್ದಲ್ಲಿ ಸ್ಥಳೀಯ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ ಗಮನಕ್ಕೆ ತಂದು ಅನುಮೋದನೆ ಪಡೆಯುವಂತೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.

ಕಾಮಗಾರಿ ಬದಲಾವಣೆಗಿರುವ ಸಂಬಂಧ ನಗರಾಭಿವೃದ್ಧಿ ಯೋಜನಾ ನಿರ್ದೇಶಕರು ಸ್ಥಳವನ್ನು ಪರಿಶೀಲಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.

ನಗರಸಭೆ ಮತ್ತು ಪಟ್ಟಣ ಪಂಚಾಯಿತಿ ಮುಖ್ಯಸ್ಥರು, ಎಂಜಿನಿಯರ್‍ಗಳು, ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ನಿಖರ ಮಾಹಿತಿ ಒದಗಿಸಬೇಕು. ಕಾಲಮಿತಿಯೊಳಗೆ ಅಭಿವೃದ್ಧಿ ಕಾರ್ಯಗಳು ನಡೆಯಬೇಕು ಎಂದು ಅನೀಸ್ ಕಣ್ಮಣಿ ಜಾಯ್ ಅವರು ಹೇಳಿದರು.

ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಕೋವಿಡ್ ನಿರ್ವಹಣೆ ಸಂಬಂಧ ಪಾಸಿಟಿವ್ ಕಂಡುಬಂದ ಪ್ರದೇಶಗಳಲ್ಲಿ ಪ್ರಾಥಮಿಕ ಸಂಪರ್ಕಿತರನ್ನು ಕೋವಿಡ್ ಪರೀಕ್ಷೆ ಮಾಡಿಸಬೇಕು. ಕೋವಿಡ್ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೊಂದಿಗೆ ನಗರ ಸ್ಥಳೀಯ ಸಂಸ್ಥೆ ಅಧಿಕಾರಿಗಳು ಕೈಜೋಡಿಸಬೇಕು ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ವೀಲೆನ್ಸ್ ತಂಡಕ್ಕೆ ಮಾಹಿತಿ ನೀಡಬೇಕು. ಮಾಸ್ಕ್ ಸರಿಯಾಗಿ ಧರಿಸದಿದ್ದಲ್ಲಿ ದಂಡ ವಿಧಿಸಬೇಕು. ಹಾಟ್ ಸ್ಪಾಟ್ ಪ್ರದೇಶಗಳಿಗೆ ಮನೆಗಳಿಗೆ ತೆರಳಿ ಪಲ್ಸ್ ಆಕ್ಸಿಮೀಟರ್(Puಟse ಔximeಣeಡಿ) ಸಮೀಕ್ಷೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು.

ನಗರಾಭಿವೃದ್ಧಿ ಯೋಜನಾ ಕೋಶದ ಯೋಜನಾ ನಿರ್ದೇಶಕರಾದ ರಾಜು ಅವರು ನಗರ ಮತ್ತು ಪಟ್ಟಣ ಪಂಚಾಯಿತಿಗಳ ಅಭಿವೃದ್ಧಿಗೆ ಎಲ್ಲಾ ಹಂತದ ಅಧಿಕಾರಿಗಳು ಪಣ ತೊಡಬೇಕಿದೆ. ಆ ನಿಟ್ಟಿನಲ್ಲಿ ಕಂದಾಯ ಸಂಗ್ರಹ, ನಗರ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ ಮಳಿಗೆಗಳ ಕಾಲ ಮಿತಿಯಲ್ಲಿ ಬಾಡಿಗೆ ಪಡೆಯುವುದು. ಹೊರಗುತ್ತಿಗೆ, ಇಂಧನ ಇತರೆ ಕಚೇರಿ ವೆಚ್ಚಕ್ಕೆ ಬಳಸಲು ಕಾರ್ಯ ಪ್ರವೃತ್ತರಾಗಬೇಕು. ಜಾಹೀರಾತು ಫಲಕಗಳ ಅಳವಡಿಕೆಗೆ ಪರವಾನಗಿ ನೀಡುವುದು ಮತ್ತು ತೆರಿಗೆ ಸಂಗ್ರಹಿಸುವ ಕಾರ್ಯವಾಗಬೇಕು ಎಂದು ರಾಜು ಅವರು ಹೇಳಿದರು.

ವ್ಯಾಪಾರ ವಹಿವಾಟು ಪರವಾನಗಿ ನೀಡುವ ಸಂಬಂಧ ಸರ್ಕಾರದ ಮಾರ್ಗಸೂಚಿ ಪಾಲಿಸುವುದು ಮತ್ತಿತರ ಬಗ್ಗೆ ಹೆಚ್ಚಿನ ಗಮನಹರಿಸುವಂತೆ ನಗರಾಭಿವೃದ್ಧಿ ಯೋಜನಾ ಕೋಶದ ಯೋಜನಾ ನಿರ್ದೇಶಕರಾದ ರಾಜು ಅವರು ಸಲಹೆ ಮಾಡಿದರು.

ನಗರಸಭೆ ಪೌರಾಯುಕ್ತರಾದ ಎಸ್.ವಿ.ರಾಮದಾಸ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಾದ ಶ್ರೀಧರ್(ವಿರಾಜಪೇಟೆ), ಸುಜಯ್(ಕುಶಾಲನಗರ), ನಾಚಪ್ಪ(ಸೋಮವಾರಪೇಟೆ), ಎಇಇ ನಟರಾಜು, ಸಹಾಯಕ ಅಭಿಯಂತರರಾದ ನಾಗರಾಜು, ವನಿತಾ, ನಗರ ಕುಡಿಯುವ ನೀರು ವಿಭಾಗದ ಎಇಇ ಅಜಯ್, ಇತರರು ತಮ್ಮ ತಮ್ಮ ಇಲಾಖೆಯ ವ್ಯಾಪ್ತಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದರು.

ಕೋವಿಡ್ ನಿರ್ವಹಣೆ ಬಗ್ಗೆ ಸಮನ್ವಯ ಸಾಧಿಸುವಲ್ಲಿ ವಹಿಸಬೇಕಾದ ಕ್ರಮಗಳ ಬಗ್ಗೆ ಕೊಡಗು ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರಾದ ಮಹೇಶ್ ಅವರು ಹಲವು ಸಲಹೆ ಮಾಡಿದರು.