ರಾಜ್ಯಕ್ಕೆ 15 ನವೋದ್ಯಮ ಪ್ರಶಸ್ತಿ

October 8, 2020

ಬೆಂಗಳೂರು ಅ.7 : ರಾಷ್ಟ್ರೀಯ ನವೋದ್ಯಮ ಪ್ರಶಸ್ತಿಗಳಿಗಾಗಿ “ನವೋದ್ಯಮ ಭಾರತ” ವತಿಯಿಂದ ಇತ್ತೀಚೆಗೆ ನಡೆಸಲಾಗಿದ್ದ ಸ್ಪರ್ಧೆಗೆ ಕರ್ನಾಟಕದಿಂದ ಅತ್ಯಧಿಕ ಅರ್ಜಿಗಳು ಸಲ್ಲಿಕೆಯಾಗುವ ಜೊತೆಗೆ ಇಲ್ಲಿನ ಹಲವಾರು ನವೋದ್ಯಮಗಳು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿವೆ ಎಂದು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ಹೇಳಿದ್ದಾರೆ.
ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳಿಗೆ ಪಾತ್ರವಾಗಿರುವ 36 ನವೋದ್ಯಮಗಳ ಪೈಕಿ ರಾಜ್ಯದ 14 ನವೋದ್ಯಮಗಳು ಹಾಗೂ 1 ವೇಗವರ್ಧಕ(ಆಕ್ಸಲರೇಟರ್) ಸೇರಿವೆ ಎಂದು ಡಿಸಿಎಂ ತಿಳಿಸಿದ್ದಾರೆ.
ಈ ಸ್ಪರ್ಧೆಗೆ ದೇಶದಾದ್ಯಂತ ಇರುವ ನವೋದ್ಯಮಗಳಿಂದ ಸಲ್ಲಿಕೆಯಾಗಿದ್ದ 1641 ಅರ್ಜಿಗಳ ಪೈಕಿ 418 ಅರ್ಜಿಗಳು ಕರ್ನಾಟಕದಿಂದ ಸಲ್ಲಿಕೆಯಾಗಿದ್ದವು. ಇದು ಒಟ್ಟಾರೆ ಸಲ್ಲಿಕೆಯಾದ ಅರ್ಜಿಗಳ ಪೈಕಿ ಶೇ.26 ರಷ್ಟಿರುವುದು ಗಮನಾರ್ಹ ಅಂಶ ಎಂದು ಅಶ್ವತ್ಥ ನಾರಾಯಣ ಅವರು ಹೇಳಿದ್ದಾರೆ.