ತಲಕಾವೇರಿ ಗೊಂದಲ : ಶಾಸಕರ ಮಧ್ಯ ಪ್ರವೇಶಕ್ಕೆ ಎಂಎಲ್‍ಸಿ ವೀಣಾಚಯ್ಯ ಒತ್ತಾಯ

08/10/2020

ಮಡಿಕೇರಿ ಅ.8 : ಭಾಗಮಂಡಲ ಮತ್ತು ತಲಕಾವೇರಿ ಕ್ಷೇತ್ರದ ಬಗ್ಗೆ ಕಳೆದ ಒಂದು ತಿಂಗಳಿನಿಂದ ಗೊಂದಲಗಳು ಸೃಷ್ಟಿಯಾಗಿ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಭಿನ್ನಾಭಿಪ್ರಾಯಗಳು ಮೂಡುತ್ತಿವೆ. ಭಕ್ತರ ಮನಸ್ಸಿಗೆ ಘಾಸಿಯಾಗುವ ಹೇಳಿಕೆಗಳು ಕೇಳಿ ಬರುತ್ತಿದ್ದು, ಇದೊಂದು ಸೂಕ್ಷ್ಮ ವಿಚಾರವಾಗಿ ಮಾರ್ಪಟ್ಟಿರುವುದು ವಿಷಾದಕರವೆಂದು ಬೇಸರ ವ್ಯಕ್ತಪಡಿಸಿರುವ ವಿಧಾನ ಪರಿಷತ್ ಸದಸ್ಯರಾದ ಶಾಂತೆಯಂಡ ವೀಣಾಅಚ್ಚಯ್ಯ, ಜವಬ್ದಾರಿಯುತ ಸ್ಥಾನದಲ್ಲಿರುವ ಜಿಲ್ಲೆಯ ಇಬ್ಬರು ಶಾಸಕರು ಮಧ್ಯ ಪ್ರವೇಶ ಮಾಡಿ ಗೊಂದಲಗಳನ್ನು ನಿವಾರಿಸಬೇಕೆಂದು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಡವರು ಹಾಗೂ ಅರೆಭಾಷೆ ಗೌಡರು ಬಹಳ ವರ್ಷಗಳ ಹಿಂದಿನಿಂದಲೂ ಅಣ್ಣ ತಮ್ಮಂದಿರಂತೆ ಸಾಮರಸ್ಯದಿಂದ ಬದುಕುತ್ತಿದ್ದಾರೆ. ಆದರೆ ಇತ್ತೀಚೆಗೆ ತಲಕಾವೇರಿ ಕ್ಷೇತ್ರದ ವಿಚಾರದಲ್ಲಿ ಕೆಲವರಲ್ಲಿ ಭಿನ್ನಾಭಿಪ್ರಾಯಗಳು ಮೂಡಿ ಗೊಂದಲ ಸೃಷ್ಟಿಯಾಗಿರುವುದು ಬೇಸರದ ವಿಚಾರವಾಗಿದೆ ಎಂದರು.
ಕಾವೇರಿಮಾತೆ ತೀರ್ಥರೂಪಿಣಿಯಾಗಿ ಪ್ರತ್ಯಕ್ಷಳಾಗುವ ಕಾವೇರಿ ತುಲಾಸಂಕ್ರಮಣದ ಒಂದು ತಿಂಗಳ ಕಾಲ ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ವಿವಿಧ ಸಾಂಪ್ರದಾಯಿಕ ಆಚರಣೆಗಳು ನಡೆಯುತ್ತವೆ. ಇದು ಈ ಹಿಂದಿನಂತೆ ಮುಂದುವರೆಯಬೇಕು ಎನ್ನುವುದು ನಮ್ಮ ಅಪೇಕ್ಷೆ. ಪ್ರಧಾನ ಅರ್ಚಕ ನಾರಾಯಣ ಆಚಾರ್ ಅವರ ನಿಧನದ ನಂತರ ಕೇತ್ರದ ಪೂಜಾ, ವಿಧಿವಿಧಾನಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದೆ. ಪರ, ವಿರೋಧ ಗುಂಪುಗಳು ಆರೋಪ, ಪ್ರತ್ಯಾರೋಪದಲ್ಲಿ ತೊಡಗಿಕೊಂಡ ಕಾರಣ ಭಕ್ತರಲ್ಲಿ ಗೊಂದಲದ ವಾತಾವರಣ ಮೂಡಿದೆ. ಇದೆಲ್ಲವೂ ನಿವಾರಣೆಯಾಗಬೇಕಾದರೆ ಕೊಡವ ಮತ್ತು ಗೌಡ ಸಮುದಾಯದ ಶಾಸಕರುಗಳಾದ ಎಂ.ಪಿ.ಅಪ್ಪಚ್ಚುರಂಜನ್ ಹಾಗೂ ಕೆ.ಜಿ.ಬೋಪಯ್ಯ ಅವರುಗಳು ಮಧ್ಯ ಪ್ರವೇಶ ಮಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಬೇಕಾಗಿದೆ. ಎಲ್ಲಾ ಜನಾಂಗದ ಸಭೆ ಕರೆದು ಸಾಂಪ್ರದಾಯಿಕ ಆಚರಣೆಗಳು ಪ್ರತಿವರ್ಷ ಹೇಗೆ ನಡೆದುಕೊಂಡು ಬರಬೇಕು ಮತ್ತು ಕ್ಷೇತ್ರದ ಪಾವಿತ್ರ್ಯತೆಯನ್ನು ಹೇಗೆ ಉಳಿಸಿಕೊಂಡು ಹೋಗಬೇಕು ಎನ್ನುವ ಬಗ್ಗೆ ಸೂತ್ರಗಳನ್ನು ಸಿದ್ಧಪಡಿಸಬೇಕು ಎಂದು ವೀಣಾಅಚ್ಚಯ್ಯ ಒತ್ತಾಯಿಸಿದರು.
ತಲಕಾವೇರಿಯ ಗೊಂದಲ ಸೂಕ್ಷ್ಮತೆಯನ್ನು ಪಡೆದುಕೊಳ್ಳುತ್ತಿದ್ದರೂ ಜಿಲ್ಲೆಯ ಇಬ್ಬರು ಶಾಸಕರು ಮೌನಕ್ಕೆ ಶರಣಾಗಿರುವುದು ಸರಿಯಾದ ಕ್ರಮವಲ್ಲ. ಕಾವೇರಿ ತೀರ್ಥೋದ್ಭವದ ದಿನ ಹತ್ತಿರವಾಗುತ್ತಿದ್ದು, ತಕ್ಷಣ ಶಾಸಕರುಗಳು ಸಭೆ ನಡೆಸಿ ಸೌಹಾರ್ದಯುತ ಸೂತ್ರವನ್ನು ರಚಿಸಬೇಕೆಂದು ಹೇಳಿದರು.
ಜನರಿಂದ ಆಯ್ಕೆಯಾಗಿ ಬಂದಿರುವ ಶಾಸಕರುಗಳಿಗೆ ತಮ್ಮದೇ ಆದ ಜವಬ್ದಾರಿಗಳಿದ್ದು, ಜನವಲಯದಲ್ಲಿ ಭಿನ್ನಾಭಿಪ್ರಾಯಗಳು ಮೂಡಿದಾಗ ಅದನ್ನು ಶಮನ ಮಾಡುವ ಕಾರ್ಯ ಮಾಡಬೇಕಾಗುತ್ತದೆ. ಅವರೊಂದಿಗೆ ಬೆಂಬಲಕ್ಕಿರುತ್ತೇವೆ, ಕೊನೆಯವರೆಗೂ ನಾವು ಶಾಸಕರಾಗಿ ಉಳಿಯುವುದಿಲ್ಲ, ಕೊಡಗಿನವರಾಗಿ ಉಳಿಯುತ್ತೇವೆ. ಆದ್ದರಿಂದ ಎಲ್ಲರೂ ಒಗ್ಗಟ್ಟಿನಿಂದ ಬದುಕು ಸಾಗಿಸುವ ಅಗತ್ಯವಿದೆ ಎಂದು ತಿಳಿಸಿದರು.
ಕಾವೇರಿ ನದಿಯ ಉಗಮ ಸ್ಥಾನ ತಲಕಾವೇರಿ ಕೋಟ್ಯಾಂತರ ಭಕ್ತರ ಪುಣ್ಯ ಕ್ಷೇತ್ರವಾಗಿದೆ. ಕೊಡಗಿನ ಕುಲದೇವಿ ಕಾವೇರಿಯ ಬಗ್ಗೆ ಎಲ್ಲರಿಗೂ ಶ್ರದ್ಧಾಭಕ್ತಿಯ ಮನೋಭಾವನೆ ಇದೆ. ನಾಡಿನ ಜನರ ಕುಡಿಯುವ ನೀರಿನ ಬವಣೆಯನ್ನು ನೀಗಿಸುತ್ತಿರುವ ಮತ್ತು ರೈತಾಪಿ ವರ್ಗದ ಬಾಳನ್ನು ಹಸನುಗೊಳಿಸುತ್ತಿರುವ ಕಾವೇರಿನಾಡು ಕೊಡಗಿನ ಬಗ್ಗೆ ಹೊರ ಜಿಲ್ಲೆ ಮತ್ತು ರಾಜ್ಯದ ಜನರಲ್ಲಿ ಅಪಾರ ಗೌರವವಿದೆ. ಆದರೆ ಕಾವೇರಿ ತುಲಾ ಸಂಕ್ರಮಣದ ವಿಚಾರದಲ್ಲಿ ಜಿಲ್ಲೆಯ ಎರಡು ಪ್ರಬಲ ಜನಾಂಗಗಳ ನಡುವೆ ಭಿನ್ನಾಭಿಪ್ರಾಯಗಳು ಮೂಡಿರುವುದು ಕ್ಷೇತ್ರದ ಗೌರವಕ್ಕೆ ದಕ್ಕೆ ತರುವಂತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
::: ಉಡುಗೆ ಬಗ್ಗೆ ಚರ್ಚೆ ಸರಿಯಲ್ಲ :::
ಸಾಂಪ್ರದಾಯಿಕ ಉಡುಗೆ ಬಗ್ಗೆ ಚರ್ಚೆಗಳು ನಡೆಯುವುದು ಅಷ್ಟು ಸಮಂಜಸವಲ್ಲ. ಯಾವುದೇ ದೇವಾಲಯಗಳಿಗೆ ತೆರಳುವಾಗ ತಮ್ಮ ತಮ್ಮ ಸಂಪ್ರದಾಯದಂತೆ ಉಡುಗೆ ತೊಟ್ಟು ಭಕ್ತಿಯನ್ನು ಮೆರೆಯಲು ಅವಕಾಶವಿದೆ. ಕ್ಷೇತ್ರದ ಭಾವನೆಗೆ ದಕ್ಕೆ ತರಬಹುದಾದ ಉಡುಗೆಗಳನ್ನು ತೊಡುವುದಕ್ಕಷ್ಟೇ ಆಕ್ಷೇಪಗಳಿರುವುದು ಸಹಜ ಎಂದು ವೀಣಾಅಚ್ಚಯ್ಯ ಅಭಿಪ್ರಾಯಪಟ್ಟರು.
ವಿವಾದಗಳು ಅತಿರೇಕಕ್ಕೆ ಹೋಗುವ ಮೊದಲು ಹಿರಿಯರು ಎಚ್ಚೆತ್ತುಕೊಂಡು ಯುವ ಸಮೂಹದಲ್ಲಿ ಸಾಮರಸ್ಯದ ಕುರಿತು ಜಾಗೃತಿ ಮೂಡಿಸಬೇಕಿದೆ ಎಂದರು. ಯುವ ಜನತೆ ಕೂಡ ಗೊಂದಲದ ಹೇಳಿಕೆಗಳಿಗೆ ಕಿವಿಗೊಡದೆ ಶಾಂತಿ, ಸಾಮರಸ್ಯವನ್ನು ಕಾಯ್ದುಕೊಳ್ಳುವ ಮೂಲಕ ಇತರರಿಗೆ ಮಾದರಿಯಾಬೇಕೆಂದು ಮನವಿ ಮಾಡಿದರು.
::: ಶಿವಲಿಂಗಕ್ಕೆ ಸ್ಥಾನ :::
ಅಗಸ್ತ್ಯ ಮುನಿಗಳು ತಲಕಾವೇರಿಯಲ್ಲಿ ಸ್ಥಾಪಿಸಿರುವ ಶಿವಲಿಂಗವು ಇಂದು ನೆಲೆ ಇಲ್ಲದೆ ಯಾವುದೋ ಒಂದು ಸ್ಥಳದಲ್ಲಿ ಇಡಲ್ಪಟ್ಟಿದ್ದು, ಈ ಲಿಂಗದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ವಿಧಾನ ಪರಿಷತ್‍ನಲ್ಲಿ ಮುಜರಾಯಿ ಸಚಿವರು ಕ್ರಮದ ಭರವಸೆ ನೀಡಿದ್ದರೂ ಆಡಳಿತ ಪಕ್ಷದ ಇಬ್ಬರು ಶಾಸಕರು ಈ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಅತ್ಯಂತ ಶೀಘ್ರವಾಗಿ ಲಿಂಗಕ್ಕೆ ಗೌರವಯುತ ಸ್ಥಾನ ಕಲ್ಪಿಸಬೇಕಿದೆ.
ಭಾಗಮಂಡಲ ಮತ್ತು ತಲಕಾವೇರಿ ಕ್ಷೇತ್ರದ ಬಗ್ಗೆ ಯಾವುದೇ ನಿರ್ಧಾರಗಳನ್ನು ಕೈಗೊಂಡರೂ ಅದು ಏಕಪಕ್ಷೀಯವಾಗಿರಬಾರದು. ಎಲ್ಲಾ ಜನಾಂಗಗಳ ಅಭಿಪ್ರಾಯಗಳನ್ನು ಸಂಗ್ರಹಿಸಿ ಯಾರ ಭಾವನೆಗಳಿಗೂ ದಕ್ಕೆಯಾಗದ ರೀತಿಯಲ್ಲಿ ಸಾಂಪ್ರದಾಯಿಕ ಆಚರಣೆಗಳನ್ನು ಮುಂದುವರೆಸಿಕೊಂಡು ಹೋಗಲು ಸೌಹಾರ್ದಯುತ ವಾತಾವರಣವನ್ನು ಸೃಷ್ಟಿಸಬೇಕು. ತಲಕಾವೇರಿ ಮತ್ತು ಭಾಗಮಂಡಲದಂತಹ ಪುಣ್ಯ ಕ್ಷೇತ್ರಗಳ ಬಗ್ಗೆ ಬಹಿರಂಗ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಿ ಕ್ಷೇತ್ರದಲ್ಲೆ ಸಭೆ ನಡೆಸಿ ಗೊಂದಲಕ್ಕೆ ತೆರೆ ಎಳೆಯಬೇಕೆಂದು ವೀಣಾಅಚ್ಚಯ್ಯ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಅರೆಭಾಷೆ ಸಾಹಿತ್ಯ, ಸಂಸ್ಕøತಿ ಅಕಾಡೆಮಿಯ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಪ್ರಮುಖ ಕೊಲ್ಯದ ಗಿರೀಶ್, ಬಾಬು, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ಮೀದೇರಿರ ನವೀನ್ ಮತ್ತು ಆಪ್ತ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ ಉಪಸ್ಥಿತರಿದ್ದರು.