ಕೆಪಿಸಿಸಿ ಮಾಧ್ಯಮ ವಕ್ತಾರರಾಗಿ ಶೌವಾದ್ ನೇಮಕ

08/10/2020

ಮಡಿಕೇರಿ ಅ. 8 : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮೀಡಿಯಾ ಪ್ಯಾನಲಿಸ್ಟ್ (ಮಾಧ್ಯಮ ವಕ್ತಾರ) ಆಗಿ ಎನ್‍ಎಸ್‍ಯುಐ ಮುಖಂಡ ಶೌವಾದ್ ಗೂನಡ್ಕ ಆಯ್ಕೆಯಾಗಿದ್ದಾರೆ.
ಶೌವಾದ್ ಅವರ ಸಂಘಟನಾ ಹಾಗೂ ವಾಕ್ ಚಾತುರ್ಯತೆಯನ್ನು ಗುರುತಿಸಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಈ ಮಹತ್ವದ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.

ತಮ್ಮ 24ನೇ ವಯಸ್ಸಿಗೆ ಕೆಪಿಸಿಸಿ ಗೆ ನೇಮಕಗೊಳ್ಳುವ ಮೂಲಕ ಶೌವಾದ್ ಗೂನಡ್ಕ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಸ್ಥಾನವನ್ನು ಪಡೆದಂತಹ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಈ ಹಿಂದೆ ಎನ್‍ಎಸ್‍ಯುಐ ಕಾಲೇಜು ಘಟಕದ ಅಧ್ಯಕ್ಷರಾಗಿ, ದಕ್ಷಿಣ ಕನ್ನಡ ಜಿಲ್ಲಾ ಎನ್‍ಎಸ್‍ಯುಐ ಸಮಿತಿಯ ಸಂಘಟನಾ ಕಾರ್ಯದರ್ಶಿಯಾಗಿ, ಜಿಲ್ಲಾ ಎನ್‍ಎಸ್‍ಯುಐ ಸಮಿತಿಯ ಉಪಾಧ್ಯಕ್ಷರಾಗಿ, ಕಾಲೇಜು ಹಂತದಲ್ಲಿ ವಿದ್ಯಾರ್ಥಿ ಸಂಘ ಹಾಗೂ ಎನ್‍ಎಸ್‍ಎಸ್ ಘಟಕದ ನಾಯಕರಾಗಿ ಸೇವೆಯನ್ನು ಸಲ್ಲಿಸಿದ್ದಾರೆ.
ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುಂಞ ಗೂನಡ್ಕ ಹಾಗೂ ಹಾಜಿರಾ ದಂಪತಿಗಳ ಕಿರಿಯ ಪುತ್ರರಾಗಿರುವ ಶೌವಾದ್ ಮಂಗಳೂರಿನ ರೋಶನಿ ನಿಲಯ ಕಾಲೇಜಿನ ಸಮಾಜಕಾರ್ಯ ವಿಭಾಗದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಪಡೆದು ಪ್ರಸ್ತುತ ಮಂಗಳೂರಿನ ಎಸ್.ಡಿ.ಎಂ.ಕಾನೂನು ಕಾಲೇಜಿನಲ್ಲಿ ಅಂತಿಮ ವರ್ಷದ ಎಲ್‍ಎಲ್‍ಬಿ ವ್ಯಾಸಾಂಗ ಮಾಡುತ್ತಿದ್ದಾರೆ.