ಹುಲಿ ದಾಳಿಗೆ ಹಸು ಬಲಿ : ಕುಮಟೂರು ಗ್ರಾಮದಲ್ಲಿ ಘಟನೆ
08/10/2020

ಮಡಿಕೇರಿ ಅ.8 : ದಕ್ಷಿಣ ಕೊಡಗಿನಲ್ಲಿ ಹುಲಿ ದಾಳಿಗೆ ಮತ್ತೊಂದು ಹಸು ಬಲಿಯಾಗಿದೆ. ವೀರಾಜಪೇಟೆ ತಾಲೂಕಿನ ಕುಮಟೂರು ಗ್ರಾಮದ ಬೊಜ್ಜಂಗಡ ದೇವಯ್ಯ ಅವರ ಗಬ್ಬದ ಹಸುವನ್ನು ಹುಲಿ ಬಲಿ ಪಡೆದಿದೆ.
ಬುಧವಾರ ಮಧ್ಯಾಹ್ನ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ದಾಳಿ ನಡೆದಿದ್ದು, ಸಂಜೆ ವೇಳೆಗೆ ಹಸುವಿನ ಮಾಲಕರಿಗೆ ವಿಷಯದ ಅರಿವಾಗಿದೆ.
ಘಟನಾ ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಹತ್ತು ಸಾವಿರ ರೂ.ಗಳ ಪರಿಹಾರ ನೀಡುವ ಭರವಸೆ ನೀಡಿದರು. ಆದರೆ ಸ್ಥಳದಲ್ಲಿದ್ದ ವೀರಾಜಪೇಟೆ ತಾಲೂಕು ಬಿಜೆಪಿ ಕೃಷಿ ಮೋರ್ಚಾ ಅಧ್ಯಕ್ಷ ಕಟ್ಟೇರ ಈಶ್ವರ ಅವರು ಇದಕ್ಕೆ ತೀವ್ರ ವಿರೋಧ ವಿರೋಧ ವ್ಯಕ್ತಪಡಿಸಿ ಹಸುವಿನ ನೈಜ ಬೆಲೆ ನಲವತ್ತು ಸಾವಿರ ನೀಡುವಂತೆ ಆಗ್ರಹಿಸಿದರು.
ಚಟ್ಟಂಗಡ ಮಹೇಶ್, ಕಟ್ಟೇರ ಕವನ, ಮಿಲನ್, ಚಟ್ಟಮಾಡ ಅನಿಲ್, ಕೆ. ಸಂಪತ್ ಮತ್ತಿತರ ಗ್ರಾಮಸ್ಥರು ಸ್ಥಳದಲ್ಲಿದ್ದರು.
