ಹಿರಿಯ ಐಪಿಎಸ್ ಅಧಿಕಾರಿ ಮನೆಯಪಂಡ ಎ.ಗಣಪತಿ ಅವರಿಗೆ ಉನ್ನತ ಹುದ್ದೆ

ಮಡಿಕೇರಿ ಅ.8 : ಹಿರಿಯ ಐಪಿಎಸ್ ಅಧಿಕಾರಿ ಕೊಡಗಿನ ಮನೆಯಪಂಡ ಎ.ಗಣಪತಿ ಅವರನ್ನು ನಾಗರಿಕ ವಿಮಾನಯಾನದ ಭದ್ರತಾ ವಿಭಾಗದ ಮಹಾ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. 1986ನೇ ಸಾಲಿನ ಉತ್ತರಾಖಂಡ್ ಕೇಡರ್‍ನ ಹಿರಿಯ ಐಪಿಎಸ್ ಅಧಿಕಾರಿಯಾಗಿರುವ ಎಂ.ಎ. ಗಣಪತಿ ಅವರು ದಕ್ಷಿಣ ಕೊಡಗಿನ ಕುಂದಾ ಗ್ರಾಮದ ಮನೆಯಪಂಡ ಅಪ್ಪಯ್ಯ ಮತ್ತು ಪ್ರೇಮಲತಾ ದಂಪತಿಯ ಪುತ್ರರಾಗಿದ್ದಾರೆ. ಪೊನ್ನಂಪೇಟೆಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದ ಎಂ.ಎ. ಗಣಪತಿ, ತದನಂತರ ಉನ್ನತ ವಿದ್ಯಾಭ್ಯಾಸದ ಮೂಲಕ ಐಪಿಎಸ್ ಹುದ್ದೆಗೇರಿದ್ದರು. 2024ರ ಫೆಬ್ರವರಿಯಲ್ಲಿ ಗಣಪತಿ ಅವರು ಸೇವೆಯಿಂದ ನಿವೃತ್ತಿಯಾಗಲಿದ್ದು, ಅಲ್ಲಿಯವರೆಗೆ ಬಿಸಿಎಎಸ್ ಮಹಾ ನಿರ್ದೇಶಕರಾಗಿ ಕರ್ತವ್ಯದಲ್ಲಿ ಮುಂದುವರೆಯಲಿದ್ದಾರೆ.
ನಾಗರಿಕ ವಿಮಾನಯಾನ ಸಚಿವಾಲಯ ಕಳುಹಿಸಿದ್ದ ಗಣಪತಿ ಅವರ ನೇಮಕಾತಿ ಪ್ರಸ್ತಾವನೆಗೆ ಮಂಗಳವಾರ ಪ್ರದಾನ ಮಂತ್ರಿ ನೇತೃತ್ವದ ಸಚಿವ ಸಂಪುಟ ಸಮಿತಿ ಅನುಮೋದನೆ ನೀಡಿದೆ. ಈ ಹಿಂದೆ ಬಿಸಿಎಎಸ್ ಮುಖ್ಯಸ್ಥರ ಹುದ್ದೆಯಲ್ಲಿದ್ದ ರಾಕೇಶ್ ಅಸ್ತಾನ ಅವರನ್ನು ಗಡಿ ಭದ್ರತಾ ಪಡೆಯ ಮಹಾನಿರ್ದೇಶಕರನ್ನಾಗಿ ನೇಮಕ ಮಾಡಿದ ಬಳಿಕ ಈ ಹುದ್ದೆ ಖಾಲಿ ಉಳಿದಿತ್ತು. ಈ ಹಿನ್ನಲೆಯಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಎಂ.ಎ. ಗಣಪತಿ ಅವರನ್ನು ನೇಮಕ ಮಾಡಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. 1986ರ ಸಾಲಿನ ಐಪಿಎಸ್ ಅಧಿಕಾರಿಯಾದ ಗಣಪತಿ ಅವರು 2010ರಿಂದ ಕೇಂದ್ರ ಗೃಹ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.
ಗೃಹ ಇಲಾಖೆಯ ವಕ್ತಾರರಾಗಿ ಸೇವೆ ಸಲ್ಲಿಸಿದ್ದ ಎಂ.ಎ.ಗಣಪತಿ ಅವರನ್ನು 2016ರಲ್ಲಿ ಉತ್ತರಾಖಂಡ್ ರಾಜ್ಯದ ಪೊಲೀಸ್ ಮಹಾ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿತ್ತು. ಗಣಪತಿ ಅವರು ಪ್ರಸ್ತುತ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ(ಸಿಐಎಸ್‍ಎಫ್) ವಿಶೇಷ ಮಹಾ ನಿರ್ದೇಶಕರಾಗಿ ಮತ್ತು ವಿಮಾನ ನಿಲ್ದಾಣದ ಮುಖ್ಯಸ್ಥರಾಗಿ ಕರ್ತವ್ಯದಲ್ಲಿದ್ದರು. 1999ರಲ್ಲಿ ಕೇಂದ್ರಿಯ ತನಿಖಾ ಸಂಸ್ಥೆ(ಸಿಬಿಐ)ಯಲ್ಲೂ ಸೇವೆ ಸಲ್ಲಿಸಿದ್ದ ಮನೆಯಪಂಡ ಎ.ಗಣಪತಿ, ಕಳೆದ 30 ವರ್ಷಗಳ ಸೇವೆಯಲ್ಲಿ ಸೋನೆಬಾಂದ್ರಾ, ಮೊರಾದಾಬಾದ್ ನಗರ ಮತ್ತು ಹಾರ್ ದೋಯಿ ಸೇರಿದಂತೆ ಉತ್ತರ ಭಾರತದ ಆಯಕಟ್ಟಿನ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ.
