ಕೊವೀಡ್ ನಿಯಂತ್ರಣ : ಕಾಂಟಾಕ್ಟ್ ಟ್ರೇಸಿಂಗ್ ಮತ್ತು ಕ್ವಾರಂಟೈನ್ ವಾಚ್ ಆಪ್ ಬಳಕೆ ಬಗ್ಗೆ ತರಬೇತಿ

08/10/2020

ಮಡಿಕೇರಿ ಅ. 8 : ಕೋವಿಡ್-19 ನಿಯಂತ್ರಣ ಸಂಬಂಧ ಕಾಂಟಾಕ್ಟ್ ಟ್ರೇಸಿಂಗ್ ಆಪ್ ಮತ್ತು ಕ್ವಾರಂಟೈನ್ ವಾಚ್ ಆಪ್ ಬಳಸುವ ಸಂಬಂಧ ನಗರ ಮತ್ತು ಪಟ್ಟಣ ಸ್ಥಳೀಯ ಸಂಸ್ಥೆ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಕ್ರಮವು ನಡೆಯಿತು.
ನಗರದ ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿ ನಡೆದ ತರಬೇತಿಯಲ್ಲಿ ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಸೋಂಕು ಹರಡದಂತೆ ಕ್ರಮವಹಿಸುವ ನಿಟ್ಟಿನಲ್ಲಿ ಯಾವುದೇ ವ್ಯಕ್ತಿಗೆ ಸೋಂಕು ದೃಢಪಟ್ಟ ಸಂದರ್ಭದಲ್ಲಿ ಆ ವ್ಯಕ್ತಿಯ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಿ ಅವರ ವಿವರಗಳನ್ನು ಆಪ್ ಮೂಲಕ ಅಪ್ ಲೋಡ್ ಮಾಡುವ ಬಗ್ಗೆ ಮಾಹಿತಿ ನೀಡಲಾಯಿತು.
ಭೂಮಿ ಕನ್ಸಲ್ಟೆಂಟ್ ನಿತಿನ್ ಅವರು ಯಾವುದೇ ವ್ಯಕ್ತಿಗೆ ಸೋಂಕು ದೃಢಪಟ್ಟ ಸಂದರ್ಭದಲ್ಲಿ ಆ ವ್ಯಕ್ತಿಯ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಶೀಘ್ರವಾಗಿ ಪತ್ತೆ ಮಾಡಬೇಕು. ಈ ಮೂಲಕ ಸೋಂಕು ಹರಡುವುದನ್ನು ತಪ್ಪಿಸಬಹುದಾಗಿದೆ. ಆ ದಿಸೆಯಲ್ಲಿ ಕಾಂಟಾಕ್ಟ್ ಟ್ರೇಸಿಂಗ್ ಆಪ್ ಬಳಕೆ ಬಹು ಮುಖ್ಯವಾಗಿದೆ ಎಂದರು.
ಪ್ರಾಥಮಿಕ ಸಂಪರ್ಕಿತರನ್ನು 14 ದಿನಗಳ ಕಾಲ ಕಡ್ಡಾಯ ಗೃಹ ಸಂಪರ್ಕ ತಡೆಯಲ್ಲಿ ಇರಿಸಬೇಕಿದೆ. ಗೃಹ ಸಂಪರ್ಕ ತಡೆಯಲ್ಲಿರುವವರ ಮೇಲೆ ನಿಗಾ ವಹಿಸುವ ನಿಟ್ಟಿನಲ್ಲಿ ಕ್ವಾರಂಟೈನ್ ವಾಚ್ ಆಪ್ ಬಳಕೆ ಬಹು ಉಪಯೋಗಕಾರಿ ಎಂದು ಅವರು ಹೇಳಿದರು.
ಈ ಸಂದರ್ಭ ಆನ್‍ಲೈನ್ ಮೂಲಕ ಈ ಎರಡೂ ಆಪ್‍ಗಳನ್ನು ಅಳವಡಿಸಿಕೊಳ್ಳುವುದು ಮತ್ತು ದಾಖಲಾತಿಗಳನ್ನು ನಮೂದಿಸಿ ಅಪ್‍ಲೋಡ್ ಮಾಡುವ ಸಂಬಂಧ ಹಲವು ಮಾಹಿತಿ ನೀಡಿದರು.
ಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ.ಮಹೇಶ್ ಅವರು ಮಾತನಾಡಿ ವೈದ್ಯಕೀಯ ಶಿಕ್ಷಣ ಸಚಿವರು ಜಿಲ್ಲೆಯಲ್ಲಿ ಕಾಂಟಾಕ್ಟ್ ಟ್ರೇಸಿಂಗ್ ಹೆಚ್ಚಿಸಬೇಕು ಮತ್ತು ಈ ಮೂಲಕ ಕೊರೊನಾ ನಿಯಂತ್ರಣಕ್ಕೆ ಹೆಚ್ಚು ಶ್ರಮವಹಿಸಬೇಕಿದೆ ಎಂದು ತಿಳಿಸಿದ್ದು, ಈ ಹಿನ್ನೆಲೆ ನಗರ ಸ್ಥಳೀಯ ಸಂಸ್ಥೆ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಾಗಾರ ನಡೆಸಲಾಗಿದೆ ಎಂದು ತಿಳಿಸಿದರು.
ಪ್ರಾಥಮಿಕ ಸಂಪರ್ಕಿತರು ಮಾತ್ರವಲ್ಲದೆ, ದ್ವಿತೀಯ ಸಂಪರ್ಕಿತರ ಮಾಹಿತಿಯನ್ನು ಸಹ ಕಾಂಟಾಕ್ಟ್ ಟ್ರೇಸಿಂಗ್ ಆಪ್‍ನಲ್ಲಿ ದಾಖಲು ಮಾಡಬೇಕಿದೆ. ಈ ಮೂಲಕ ದ್ವಿತೀಯ ಸಂಪರ್ಕಿತರಲ್ಲಿ ರೋಗ ಲಕ್ಷಣ ಕಂಡುಬಂದಲ್ಲಿ ಅವರನ್ನು ಶೀಘ್ರವಾಗಿ ತಪಾಸಣೆಗೆ ಒಳಪಡಿಸಬಹುದಾಗಿದೆ ಎಂದು ಅವರು ಹೇಳಿದರು. ನಗರ ಸ್ಥಳೀಯ ಸಂಸ್ಥೆಯ ಕಾಂಟಾಕ್ಟ್ ಟ್ರೇಸಿಂಗ್ ಆಪ್ ನಿರ್ವಾಹಕರಾದ ಮಂಜುಳಾ, ಸಿಬ್ಬಂಧಿಗಳು ಇದ್ದರು.