ಅತಂತ್ರ ಸರ್ಕಾರದಿಂದ ಜನರಿಗೆ ಸಂಕಷ್ಟ : ಕಾಂಗ್ರೆಸ್ ಟೀಕೆ

09/10/2020

ಮಡಿಕೇರಿ ಅ.9 : ವಾಮಮಾರ್ಗದ ಮೂಲಕ ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರದಲ್ಲಿ ಮೂಲ ನಿವಾಸಿ ಬಿಜೆಪಿಗರು ಹಾಗೂ ವಲಸಿಗರ ನಡುವೆ ಸಂಘರ್ಷ ಏರ್ಪಟ್ಟಿರುವುದರಿಂದ ಇಡೀ ವ್ಯವಸ್ಥೆ ಗೊಂದಲಕ್ಕೆ ಸಿಲುಕಿದೆ. ಅತಂತ್ರ ಸರ್ಕಾರದಿಂದ ರಾಜ್ಯದ ಜನತೆಗೆ ಸಂಕಷ್ಟ ಎದುರಾಗಿದೆ ಎಂದು ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಕೆಪಿಸಿಸಿ ಉಸ್ತುವಾರಿ ಟಿ.ಎಂ.ಶಾಹಿದ್ ತೆಕ್ಕಿಲ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ ಸೋಂಕು ವ್ಯಾಪಿಸುತ್ತಿದ್ದು, ಸೋಂಕಿತರ ಮತ್ತು ಮೃತರಾದವರ ಬಗ್ಗೆ ನಿಖರ ಮಾಹಿತಿಯನ್ನು ನೀಡದ ಸರ್ಕಾರ ದೊಡ್ಡ ಮಟ್ಟದ ದಂಧೆಯಲ್ಲಿ ತೊಡಗಿದೆ ಎಂದು ಆರೋಪಿಸಿದರು.
ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದ್ದು, ಸೋಂಕಿತರ ಸಂಖ್ಯೆ ಪ್ರತಿದಿನ ಹೆಚ್ಚಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಶಾಲೆಗಳನ್ನು ಆರಂಭಿಸುವ ಬಗ್ಗೆ ಸರ್ಕಾರದಲ್ಲಿರುವ ಸಚಿವರುಗಳೆ ಪರಸ್ಪರ ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಿದ್ದು, ಇದೊಂದು ಗೊಂದಲಮಯದ ಕಿಚಡಿ ಸರ್ಕಾರವಾಗಿದೆ ಎಂದು ಟೀಕಿಸಿದರು.
ನೋಟು ಅಮಾನ್ಯೀಕರಣ ಮತ್ತು ಜಿಎಸ್‍ಟಿಯ ಪರಿಣಾಮಗಳಿಂದ ಜನರು ಈಗಾಗಲೆ ರೋಸಿ ಹೋಗಿದ್ದಾರೆ. ಜೊತೆಯಲ್ಲಿ ಕೋವಿಡ್ ಕಾರಣದಿಂದಲು ಅನೇಕ ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರ ಏನು ಆಗಿಲ್ಲವೆನ್ನುವ ರೀತಿಯಲ್ಲಿ ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತಿದೆ ಎಂದರು.
ಕೃಷಿ ಭೂಮಿ ಬಂಡವಾಳಶಾಹಿಗಳ ಪಾಲಾಗುವುದಕ್ಕೆ ಮುಕ್ತ ಅವಕಾಶವನ್ನು ಸರ್ಕಾರ ನೀಡಿದೆ. ರೈತರಿಗೆ ಮಾರಕವಾಗಿರುವ ಕೃಷಿ ಮಸೂದೆಗಳ ವಿರುದ್ಧ ಜನಜಾಗೃತಿ ಮೂಡಿಸುವುದಕ್ಕಾಗಿ ಅ.10 ರಂದು ಮಂಡ್ಯದ ಡಾ.ಅಂಬೇಡ್ಕರ್ ಭವನದಲ್ಲಿ ಕೃಷಿಕರ ಮಹಾಸಭೆಯನ್ನು ಏರ್ಪಡಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಹಾಗೂ ಕರ್ನಾಟಕ ಎಐಸಿಸಿ ಉಸ್ತುವಾರಿ ರಣಬೀರ್ ಸಿಂಗ್ ಸುರ್ಜೆವಾಲ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ರೈತ ವಿರೋಧಿ ನೀತಿಗಳ ವಿರುದ್ಧ ಕಾಂಗ್ರೆಸ್ ನಿರಂತರವಾಗಿ ಸರ್ಕಾರವನ್ನು ಎಚ್ಚರಿಸುವ ಕಾರ್ಯವನ್ನು ಮಾಡಲಿದೆ ಎಂದು ಶಾಹಿದ್ ಹೇಳಿದರು. ಜಿಲ್ಲೆಯ ಶಾಸಕರುಗಳು ಕೇವಲ ಪ್ರಚಾರ ಮತ್ತು ಕಾಂಗ್ರೆಸ್ ಪಕ್ಷವನ್ನು ಟೀಕಿಸುವುದಕ್ಕೆ ಕಾಲ ಹರಣ ಮಾಡುತ್ತಿದ್ದು, ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ದೇಶ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರ ಅಧಿಕಾರದಲ್ಲಿದ್ದರೆ ಅಭಿವೃದ್ಧಿ ಸುಲಭವೆಂದು ಹೇಳಿಕೊಳ್ಳುತ್ತಿದ್ದ ಬಿಜೆಪಿಗರು, ಇದನ್ನು ನಿಜ ಮಾಡುವಲ್ಲಿ ಸೋತಿದ್ದಾರೆಂದು ಆರೋಪಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಮಾತನಾಡಿ, ದೇಶ ಮತ್ತು ರಾಜ್ಯದಲ್ಲಿ ರೈತರ ಮಟ್ಟಿಗೆ ಸರ್ಕಾರವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೃಷಿಕ ವರ್ಗ ಅನಾಥ ಪ್ರಜ್ಞೆಯನ್ನು ಅನುಭವಿಸುತ್ತಿದೆ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅರ್ಥ ಇಲ್ಲದಾಗಿದ್ದು, ಸರ್ಕಾರಿ ನೌಕರರಿಗೆ ವೇತನ ನೀಡಲು ಕೂಡ ಹಣವಿಲ್ಲದಂತೆ ಆರ್ಥಿಕ ಸ್ಥಿತಿ ಹದಗೆಟ್ಟಿದೆ ಎಂದು ಟೀಕಿಸಿದರು.
ಜಾಗಟೆ ಬಡಿಯುವುದರಿಂದ ಮತ್ತು ದೀಪ ಹಚ್ಚುವುದರಿಂದ ಕೋವಿಡ್ ಹೋಗುವುದಿಲ್ಲವೆಂದು ಮನವರಿಕೆಯಾದ ನಂತರ ಪ್ರಧಾನಮಂತ್ರಿಗಳು ಸೋಂಕಿನೊಂದಿಗೆ ಬದುಕು ಸಾಗಿಸಿ ಎಂದು ಕರೆ ನೀಡುವ ಮೂಲಕ ತಮ್ಮ ವೈಫಲ್ಯತೆಯನ್ನು ಒಪ್ಪಿಕೊಂಡು ಕೈ ಚೆಲ್ಲಿ ಕುಳಿತಿದ್ದಾರೆಂದು ಆರೋಪಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ತಕ್ಷಣ ರೈತರ ನೆರವಿಗೆ ಬರಬೇಕೆಂದು ಅವರು ಇದೇ ಸಂದರ್ಭ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ನೆರವಂಡ ಉಮೇಶ್, ನಗರ ಯುವ ಘಟಕದ ಅಧ್ಯಕ್ಷ ಸದಾ ಮುದ್ದಪ್ಪ, ಪರಿಶಿಷ್ಟ ಪಂಗಡ ಘಟಕದ ಮಾಜಿ ಜಿಲ್ಲಾಧ್ಯಕ್ಷ ಕೆ.ಆರ್.ಚಂದ್ರ ಹಾಗೂ ನಗರ ಎಸ್‍ಸಿ ಘಟಕದ ಅಧ್ಯಕ್ಷ ಮುದ್ದುರಾಜ್ ಉಪಸ್ಥಿತರಿದ್ದರು.