ಸರ್ಕಾರದ ವಿರುದ್ಧ ಯುವ ಜೆಡಿಎಸ್ ಅಸಮಾಧಾನ : ಅ.12, 16 ರಂದು ಪ್ರತಿಭಟನೆ

09/10/2020

ಮಡಿಕೇರಿ ಅ.9 : ಬಿಪಿಎಲ್ ಕಾರ್ಡ್‍ದಾರರಿಗೆ ಅಕ್ಕಿ, ಅರ್ಹ ಫಲಾನುಭವಿಗಳಿಗೆ ಮಾಸಾಶನ, ವಿಧವಾ ವೇತನ ಮತ್ತಿತರ ಸೌಲಭ್ಯಗಳನ್ನು ನೀಡದೆ ರಾಜ್ಯ ಸರ್ಕಾರ ವಂಚಿಸುತ್ತಿದೆ ಎಂದು ಆರೋಪಿಸಿರುವ ಜಾತ್ಯತೀತ ಜನತಾದಳದ ಯುವ ಘಟಕ, ಸರ್ಕಾರದ ವೈಫಲ್ಯ ಖಂಡಿಸಿ ಅ.12 ರಂದು ಸೋಮವಾರಪೇಟೆ ಮತ್ತು ಅ.16 ರಂದು ಮಡಿಕೇರಿಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಯುವ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಕೆ.ಜಿ.ಜಾಶೀರ್, ಬಿಜೆಪಿ ಯುವ ಜನತೆಯನ್ನು ಕೇವಲ ಗಲಭೆಗಳಿಗೆ ಮಾತ್ರ ಬಳಸಿಕೊಳ್ಳುತ್ತಿದ್ದು, ಯಾವುದೇ ಜನ ಸ್ಪಂದನ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಿಲ್ಲವೆಂದು ಆರೋಪಿಸಿದರು.
ಧರ್ಮಾಧಾರಿತ ರಾಜಕೀಯ ಇನ್ನು ಮುಂದೆ ನಡೆಯುವುದಿಲ್ಲವೆಂದು ಅಭಿಪ್ರಾಯಪಟ್ಟ ಅವರು, ಯುವ ಸಮೂಹ ಕೂಡ ಪ್ರಗತಿ ಪಥದತ್ತ ಚಿಂತನೆ ಹರಿಸಿದೆ ಎಂದರು. ಜಿಲ್ಲೆಯಲ್ಲಿ ಯುವಕರು ಜೆಡಿಎಸ್ ಪಕ್ಷದೆಡೆಗೆ ಆಕರ್ಷಿತರಾಗುತ್ತಿದ್ದಾರೆ ಎಂದು ತಿಳಿಸಿದ ಜಾಶೀರ್, ಸಂಕಷ್ಟಕ್ಕೆ ಸಿಲುಕಿರುವ ಜನಸಾಮಾನ್ಯರಿಗೆ ನ್ಯಾಯ ಒದಗಿಸುವ ಕಾರ್ಯವನ್ನು ಪಕ್ಷ ಮಾಡಲಿದೆ ಎಂದರು.
ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾದ ಅಧ್ಯಕ್ಷ ತೇಜಸ್ವಿ ಸೂರ್ಯ ಅವರು ಯುರೋಪ್‍ನಲ್ಲಿ ಭಾಷಣ ಮಾಡುವ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಆದರೆ, ಅಲ್ಲಿನ ಪ್ರಜೆಗಳು ಪ್ರಚೋದನಕಾರಿ ಭಾಷಣ ಎನ್ನುವ ಕಾರಣಕ್ಕೆ ಕಾರ್ಯಕ್ರಮವನ್ನು ತಿರಸ್ಕರಿಸಿದ್ದಾರೆ. ಈ ಬೆಳವಣಿಗೆ ಬಿಜೆಪಿಯ ಬಣ್ಣವನ್ನು ಬಯಲು ಮಾಡಿದಂತಾಗಿದೆ ಎಂದು ಜಾಶೀರ್ ಟೀಕಿಸಿದರು.
ಯುವ ವಕ್ತಾರ ರವಿಕಿರಣ್ ರೈ ಮಾತನಾಡಿ, ಉತ್ತರ ಪ್ರದೇಶದಲ್ಲಿ ನಡೆದ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಮತ್ತು ಶವ ನೀಡದ ಪೊಲೀಸರ ಕ್ರಮ ಖಂಡನೀಯವೆಂದರು. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಗುವಲ್ಲಿಯವರೆಗೆ ಪಕ್ಷ ಹೋರಾಟವನ್ನು ಮುಂದುವರಿಸಲಿದೆ ಎಂದು ತಿಳಿಸಿದರು.
ಬಿಜೆಪಿ ನೇತೃತ್ವದ ಸರ್ಕಾರಗಳು ಜನರನ್ನು ಮೂರ್ಖರನ್ನಾಗಿ ಮಾಡುತ್ತಿವೆ. ಚಪ್ಪಾಳೆ ತಟ್ಟಿದರೆ ಮತ್ತು ದೀಪ ಬೆಳಗಿದರೆ ಕೊರೊನಾ ಹೋಗುತ್ತದೆ ಎಂದು ಪ್ರಚಾರ ನೀಡಲಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಸಮರ್ಥಿಸಿಕೊಳ್ಳುವ ಗುಂಪುಗಳು ಹಣ ಪಡೆದು ಇದನ್ನು ಬೆಂಬಲಿಸಿದವು ಎಂದು ಆರೋಪಿಸಿದರು. ಇಂದು ದೇಶದಲ್ಲಿ ಕೋವಿಡ್ ಸೋಂಕು ಮಿತಿ ಮೀರಿ ವ್ಯಾಪಿಸುತ್ತಿದ್ದು, ಸರ್ಕಾರದ ಸುಳ್ಳನ್ನು ಜನರು ಅರ್ಥಮಾಡಿಕೊಳ್ಳಬೇಕಿದೆ ಎಂದರು.
ಸುಳ್ಳು ಭರವಸೆಗಳ ಬಗ್ಗೆ ಸತ್ಯಾಸತ್ಯತೆಯನ್ನು ಅರಿತು ಜನರು ಜಾಗೃತರಾಗಬೇಕಾಗಿದೆ. ಈ ಹಿಂದೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರ ಜನ ಸಾಮಾನ್ಯರ, ಬಡವರ ಹಾಗೂ ಮಳೆಹಾನಿ ಸಂತ್ರಸ್ತರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿತ್ತು. ಇದನ್ನು ಜಿಲ್ಲೆಯ ಜನ ಅರಿತುಕೊಳ್ಳಬೇಕಾಗಿದೆ ಮತ್ತು ಜೆಡಿಎಸ್ ನ್ನು ಬೆಂಬಲಿಸಬೇಕಾಗಿದೆ ಎಂದು ರವಿಕಿರಣ್ ತಿಳಿಸಿದರು.
ಯುವ ಘಟಕದ ತಾಲ್ಲೂಕು ಅಧ್ಯಕ್ಷ ಅಭಿತ್ ಅಪ್ಪಯ್ಯ ಮಾತನಾಡಿ, ತಲಕಾವೇರಿ ಕ್ಷೇತ್ರದ ವಿಚಾರದಲ್ಲಿ ಕೊಡವರು, ಗೌಡರು ಎನ್ನುವ ಭಿನ್ನಾಭಿಪ್ರಾಯಗಳು ಮೂಡಿದ್ದು, ಜಿಲ್ಲೆಯ ಇಬ್ಬರು ಶಾಸಕರು ಪರಿಸ್ಥಿತಿಯನ್ನು ಶಾಂತಗೊಳಿಸಬೇಕಿದೆ ಎಂದರು.
ಶಾಸಕರು ಮೌನಕ್ಕೆ ಶರಣಾಗಿರುವುದು ಬೇಸರದ ಬೆಳವಣಿಗೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಹೇಳಿಕೆಗಳು ಪ್ರಚಾರ ಪಡೆದುಕೊಳ್ಳುತ್ತಿದ್ದು, ಈ ಬಗ್ಗೆ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಲಾಗುವುದು ಎಂದು ತಿಳಿಸಿದರು.
ಪುಣ್ಯಕ್ಷೇತ್ರ ತಲಕಾವೇರಿಯಲ್ಲಿ ಕೊಡವರು ಹಾಗೂ ಗೌಡರು ಒಗ್ಗಟ್ಟಾಗಿ ಸಾಂಪ್ರದಾಯಿಕ ಆಚರಣೆಯನ್ನು ಮುಂದುವೆಸಿಕೊಂಡು ಹೋಗಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ನಗರಾಧ್ಯಕ್ಷ ಕೆ.ಎಂ.ಮೋನಿಶ್ ಹಾಗೂ ಯುವ ವಕ್ತಾರ ಎಂ.ಯು.ಜಿನಾಶ್ ಉಪಸ್ಥಿತರಿದ್ದರು.