ನಮ್ಮನ್ನೂ ಪರಿಶಿಷ್ಟ ಪಂಗಡಕ್ಕೆ ಸೇರಿಸಿ : ಕೊಡವ ಭಾಷಿಕ ಸಮುದಾಯಗಳ ಕೂಟ ಒತ್ತಾಯ

09/10/2020

ಮಡಿಕೇರಿ ಅ.9 : ಕೊಡವ ಭಾಷೆ (ಕೊಡಗು ಭಾಷೆ) ಸಾಹಿತ್ಯ, ಸಂಸ್ಕೃತಿಯ ಆಧಾರ ಸ್ತಂಭವಾಗಿರುವ ಕಲೆ-ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿರುವ ಕೊಡಗು ಭಾಷಿಕ ಜನಾಂಗದವರ ಕುಲಶಾಸ್ತ್ರೀಯ ಅಧ್ಯಯನ ಕೈಗೊಂಡು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೊಡವ ಭಾಷಿಕ ಸಮುದಾಯಗಳ ಕೂಟ ಒತ್ತಾಯಿಸಿದೆ.
ಕೂಟದ ಅಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ ಹಾಗೂ ಕಾರ್ಯದರ್ಶಿ ಕೂಡಂಡ ಸಾಬ ಸುಬ್ರಮಣಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಪ್ರಮುಖರು, ರಾಜ್ಯದಲ್ಲಿ ತುಳು, ಲಿಂಗಾಯಿತ, ವೀರಶೈವ ಹಾಗೂ ಒಕ್ಕಲಿಗರಲ್ಲಿ ವಿವಿಧ ಪಂಗಡಗಳಿರುವಂತೆ, ಕೊಡಗು ಜಿಲ್ಲೆಯಲ್ಲಿ ಕೊಡಗು ಭಾಷೆ ಮಾತನಾಡುವ ಪಂಗಡಗಳಿವೆ ಎಂದು ಗಮನ ಸೆಳೆದಿದ್ದಾರೆ.
ಕೊಡಗು ಭಾಷೆ (ಕೊಡವ ಭಾಷೆ) ಮಾತಾನಾಡುವವರು ಅನಾದಿ ಕಾಲದಿಂದಲೂ ಪೂರ್ವಿಕರಿಂದ ನಡೆಸಿಕೊಂಡು ಬಂದಿರುವ ಎಲ್ಲಾ ವಿಶಿಷ್ಟ ಪದ್ಧತಿ, ಪರಂಪರೆ, ಆಚಾರ, ವಿಚಾರ, ಸಂಪ್ರದಾಯಗಳನ್ನು ಮೈಗೂಡಿಸಿಕೊಂಡು ಮುನ್ನಡೆಯುತ್ತಿದ್ದಾರೆ. ಜೀವನದಿ ಕಾವೇರಿಯ ಉಗಮ ಸ್ಥಾನವಾಗಿರುವ ಕೊಡಗು ಜಿಲ್ಲೆಯ ವಿವಿಧ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ದೇವಾನುದೇವತೆಗಳ ನೆಲೆವೀಡು. ಇಂತಹ ನೆಲೆ ಸಂಪತ್ತಿನ ಪೆÇೀಷಣೆ ಈ ನಾಡಿನ ಕೊಡವ ಭಾಷಾ ಮೂಲ ನಿವಾಸಿಗಳಿಗೆ ಹೆಮ್ಮೆಯ ವಿಚಾರ ಎಂದರು.
ಹಲವಾರು ನಷ್ಟ-ಕಷ್ಟದೊಂದು ಸ್ವಾಭಿಮಾನದೊಂದಿಗೆ ನೋವನ್ನು ಸಹಿಸಿಕೊಂಡು ಇದುವರೆಗೂ ದುಸ್ತರ ಬದುಕನ್ನು ಸಾಗಿಸುತ್ತ ಬರುತ್ತಿರುವ, ಕೊಡಗು ಭಾಷೆ ಮಾತನಾಡುವ ಸಮುದಾಯಗಳಾದ ಹೆಗ್ಗಡೆ, ಐರಿ, ಕೊಯವ, ಕೊಡಗು ನಾಯರ್, ಕೋಲೆಯ, ಗೊಲ್ಲ, ಮಲೆಯ, ಪಣಿಕ, ಕಣಿಯ, ಕೊಡವ ಸವಿತ (ನಾಯಿಂದ) ಬೂಣೆ ಪಟ್ಟಮ, ಮಡಿವಾಳ ಮತ್ತು ಬಣ್ಣ ಜನಾಂಗದವರು ಸಾಹಿತ್ಯ ಮತ್ತು ಸಾಂಸ್ಕøತಿಕ ಕ್ಷೇತ್ರಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ನೀಡುತ್ತಾ ಬರುತ್ತಿದ್ದಾರೆ.
ಅಂದಿನ ಕಾಲದ ರಾಜಾ-ಮಹಾರಾಜರುಗಳ ಆಳ್ವಿಕೆಯ ಕಾಲಘಟ್ಟದಲ್ಲಿ ಕೊಡಗು ಭಾಷಿಕ ಮೂಲ ನಿವಾಸಿ ಜನಾಂಗದವರಿಗೆ ಅಲ್ಲಲ್ಲಿ ಸೇವಾ ಬಳುವಳಿಯಾಗಿ ಜಮ್ಮಾ, ಉಂಬಳಿ-ಜಹಗೀರ್ ಭೂಮಿಯನ್ನು ಕಾಣಿಕೆಯಾಗಿ ನೀಡಿ, ಕೃಷಿಗೆ ಒತ್ತುಕೊಟ್ಟು ಬದುಕನ್ನು ನಡೆಸುವಲ್ಲಿ ಸಫಲರಾಗಿರುವುದು ಇತಿಹಾಸದ ಪುಟಗಳಲ್ಲಿ ಕಾಣಬಹುದಾಗಿದೆ.
ಈ ಜನಾಂಗದವರಿಗೆ ಐನ್‍ಮನೆ, ಮುಂದ್ಮನೆ, ತೊಟ್ಟಿಮನೆ, ಕೈಮಡಗಳು ಇಂದಿಗೂ ಹೆಗ್ಗುರುತುಗಳಾಗಿ ಕಂಡುಬರುತ್ತಿವೆ. ಧಾರ್ಮಿಕ ಪೂಜಾ ಕೈಂಕರ್ಯಗಳಲ್ಲಿ ಸಂಪ್ರದಾಯದಂತೆ ಕಾವೇರಿ ತುಲಾಸಂಕ್ರಮಣ, ಹುತ್ತರಿ, ಕೈಲ್‍ಮುಹೂರ್ತ, ಆಯುಧ ಪೂಜೆಯಂತಹ ಗುರು-ಕಾರೋಣ ಹಾಗೂ ಇಗ್ಗುತ್ತಪ್ಪ ದೇವರ ಪೂಜೆ ಸಮುದಾಯ ಬಾಂಧವರು ಆಚರಿಸಿಕೊಂಡು ಬರುತ್ತಿರುವುದು ಪ್ರಚಲಿತದಲ್ಲಿದೆ.
ದೇಶಕ್ಕೆ ಸ್ವಾತಂತ್ರ್ಯ ಬಂದು 74 ವರ್ಷಗಳೇ ಕಳೆದಿದ್ದರೂ ಕೊಡಗು ಭಾಷಿಕ ಜನಾಂಗದ ಹಲವಾರು ಸಮುದಾಯಗಳ ಬದುಕು ದುಸ್ತರವಾಗಿದೆ. ಕೂಲಿ ಕೆಲಸ ಮಾಡಿ ಕಣ್ಣೀರಿನ ಬದುಕನ್ನು ಸಾಗಿಸುತ್ತಿರುವುದು ವಿಪರ್ಯಾಸ ಎಂದು ಡಾ.ಸುಭಾಷ್ ನಾಣಯ್ಯ ಹೇಳಿದ್ದಾರೆ.
ಕೆಲವು ಜನಾಂಗಗಳು ಬದುಕನ್ನು ಸಾಗಿಸಲಾಗದೆ ನಾಶವಾಗುತ್ತಾ ಸಾಗುತ್ತಿದೆ. ಶ್ರೀಮಂತಿಕೆಯ ಹೆಗ್ಗುರುತಿಗೆ ಭಾಷಿಕ ಸಮುದಾಯಗಳ ಕೊಡುಗೆ ಅನನ್ಯವಾಗಿದೆ. ಇವೆಲ್ಲದರ ಪರಿಣಾಮ ಹಲವಾರು ಬಾರಿ ಸಂಬಂಧಿಸಿದ ಸರ್ಕಾರ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದಾರೂ, ಇದುವರೆಗೂ ಸೂಕ್ತ ಸ್ಪಂದನೆ ಸಿಗದಿರುವುದು ಭಾಷಿಕ ಜನಾಂಗ ಅವನತಿಯತ್ತ ಸಾಗಲು ಕಾರಣವಾಗಿದೆ ಎಂದು ಆರೋಪಿಸಿದರು.
ಭಾಷಿಕ ಜನಾಂಗದವರ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳು ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಮತ್ತು ಕುಲಶಾಸ್ತ್ರೀಯ ಅಧ್ಯಯನ ಕೈಗೊಂಡು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿಗಳಿಗೆ ಮನವಿ ನೀಡುವ ಸಂದರ್ಭ ಕೊಡಗು ಹೆಗ್ಗಡೆ ಸಮಾಜದ ಪ್ರತಿನಿಧಿ ತೋರೆರ ಮುದ್ದಯ್ಯ, ಕೋಲೆಯ ಸಮಾಜದ ಅಧ್ಯಕ್ಷ ಕೋಲೆಯಂಡ ಗಿರೀಶ್, ಐರಿ ಸಮಾಜದ ನಿರ್ದೇಶಕ ಐರೀರ ಬೋಪಯ್ಯ, ಕಣಿಯ ಸಮಾಜದ ಕಾರ್ಯದರ್ಶಿ ಕಣಿಯರ ಪ್ರಕಾಶ್, ಪಣಿಕ ಸಮಾಜದ ಕಾರ್ಯದರ್ಶಿ ಪೊನ್ನಜ್ಜೀರ ಕಿಶು ಭರತ್, ಬೂಣೆಪಟ್ಟಮ ಸಮಾಜದ ಪ್ರತಿನಿಧಿ ಜೋಕೀರ ಜೀವನ್, ಕೊಯವ ಸಮಾಜ ಕಾರ್ಯದರ್ಶಿ ತೋಕಿರ ಕಾಶಿ ಕಾರ್ಯಪ್ಪ, ಮಲೆಯ ಸಮಾಜದ ಅಧ್ಯಕ್ಷ ಮಲೆಯಡ ರಾಜಾ ಮುತ್ತಪ್ಪ, ಸವಿತಾ ಸಮಾಜದ ಪ್ರತಿನಿಧಿ ವೇದಪ್ಪಂಡ ಕಿರಣ್, ಗೊಲ್ಲ ಸಮಾಜದ ಪ್ರತಿನಿಧಿ ಜಗತ್, ಕೌಶಿಕ್, ಬಣ್ಣ ಸಮಾಜದ ಪ್ರತಿನಿಧಿ ಬೀಕಚಂಡ ಬೆಳ್ಯಪ್ಪ, ಮಡಿವಾಳ ಸಮಾಜದ ಪ್ರತಿನಿಧಿ ಮೇಕಂಡ ಪಾಪು ಲೋಕೇಶ್ ಹಾಜರಿದ್ದರು.