ಚಿಂತಕ, ವಾಗ್ಮಿ , ಪ್ರಾಧ್ಯಾಪಕ ಡಾ ಬಿ.ಪ್ರಕಾಶ್ ಇನ್ನಿಲ್ಲ

October 9, 2020

ಕುಶಾಲನಗರ, ಅ.9: ಕುಶಾಲನಗರ ಸೋಮೇಶ್ವರ ಬಡಾವಣೆಯ ನಿವಾಸಿ, ಉತ್ತಮ ವಾಗ್ಮಿಯೂ ಆಗಿದ್ದ ಚಿಂತಕ, ಹಾಸನ ಜಿಲ್ಲೆಯ ಕೊಣನೂರು ಬಿ.ಎಂ.ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿದ್ದ ಡಾ.ಬಿ.ಪ್ರಕಾಶ್ ( 41) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಮೃತರು ಪತ್ನಿ ಸುಂಟಿಕೊಪ್ಪ ಸ.ಪ.ಪೂ.ಕಾಲೇಜಿನ ಕನ್ನಡ ಭಾಷಾ ಉಪನ್ಯಾಸಕಿ ಡಾ ಸುಕನ್ಯಾ ಸೇರಿದಂತೆ ಓರ್ವ ಪುತ್ರಿ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.
ವೈಚಾರಿಕ ಪ್ರಭುತ್ವ ಹೊಂದಿದ್ದ ಡಾ.ಪ್ರಕಾಶ್ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಂಡಿದ್ದು, ಹೆಚ್ಚು ಪುಸ್ತಕಗಳನ್ನು ಅಧ್ಯಯನ ಮಾಡುತ್ತಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ವಿವಿಧ ಸಾಹಿತ್ಯ ಗೋಷ್ಠಿಗಳಲ್ಲಿ ತಮ್ಮ ವಿಚಾರಧಾರೆ ಮಂಡಿಸುವ ಮೂಲಕ ಸಾಹಿತ್ಯ ವಲಯದಲ್ಲಿ ತುಂಬ ಹೆಸರು ಗಳಿಸಿದ್ದರು.
ಇತ್ತೀಚೆಗೆ ಮಡಿಕೇರಿಯಲ್ಲಿ ಜನಪದ ಸಾಹಿತ್ಯ ಪರಿಷತ್ತು ವತಿಯಿಂದ ಹೊರತರಲಾದ ನಾಟುನುಡಿ ಎಂಬ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿದ್ದರು.
ಡಾ. ಪ್ರಕಾಶ್ ಈ ಮೊದಲು ಕೂಡಿಗೆ ಸ.ಪ.ಪೂ.ಕಾಲೇಜಿನಲ್ಲಿ ಕನ್ನಡ ಭಾಷಾ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು, ಕಳೆದ ಎರಡು ವರ್ಷಗಳಿಂದ ಕೊಣನೂರು ಬಿ.ಎಂ.ಶೆಟ್ಟಿ ಸರ್ಕಾರಿ ಪದವಿ ಕಾಲೇಜಿಗೆ ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸುತ್ತಿದ್ದರು.
ಮೂಲತಃ ತುಮಕೂರು ಜಿಲ್ಲೆಯ ಮಧಗಿರಿ ತಾಲ್ಲೂಕಿನ ಬಡವನಹಳ್ಳಿ ಗ್ರಾಮದವರು.
ಮೃತ ಡಾ.ಪ್ರಕಾಶ್ ಅವರ ಹಠಾತ್ ಸಾವು ಸಾಹಿತ್ಯ ವಲಯಕ್ಕೆ ತುಂಬಲಾರದ ನಷ್ಠ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಟಿ.ಪಿ.ರಮೇಶ್ ತಿಳಿಸಿದ್ದಾರೆ.
ಪಟ್ಟಣದ ಸೋಮೇಶ್ವರ ಬಡಾವಣೆಯ ಮನೆಯಲ್ಲಿ ಮೃತರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ಅಂತ್ಯ ಸಂಸ್ಕಾರಕ್ಕೆ ಅವರ ತವರಾದ ಮಧುಗಿರಿ ತಾಲ್ಲೂಕಿನ ಬಡುವನಹಳ್ಳಿಗೆ ಪಾರ್ಥಿವ ಶರೀರವನ್ನು ಮಧ್ಯಾಹ್ನ ತೆಗೆದುಕೊಂಡು ಹೋಗಲಾಯಿತು.
ಶಿಕ್ಷಣ ಇಲಾಖೆಯ ಶಿಕ್ಷಕರು, ಉಪನ್ಯಾಸಕರು, ಸಾಹಿತ್ಯಾಭಿಮಾನಿಗಳು, , ನೆರೆಹೊರೆಯವರು ಕುಶಾಲನಗರದಲ್ಲಿ ಅಂತಿಮ ದರ್ಶನ ಪಡೆದರು.

error: Content is protected !!