ವಸತಿಗಾಗಿ ಒತ್ತಾಯಿಸಿ ಸಿಎಂ ಬಳಿಗೆ ನಿಯೋಗ ತೆರಳಲು ಕೊಡಗು ಪ್ರಜಾ ಪರಿವರ್ತನಾ ವೇದಿಕೆ ಒತ್ತಾಯ

October 9, 2020

ಮಡಿಕೇರಿ ಅ.9 : ಜಿಲ್ಲೆಯ ವಸತಿ ರಹಿತ ಕಡು ಬಡವರು ಹಾಗೂ ಕಾರ್ಮಿಕ ವರ್ಗಕ್ಕೆ ವಸತಿ ಯೋಜನೆಯ ಮೂಲಕ ಮನೆಗಳನ್ನು ನೀಡುವಂತೆ ಒತ್ತಾಯಿಸಿ ಅ.12 ರಂದು ಮುಖ್ಯಮಂತ್ರಿಗಳ ಬಳಿಗೆ ನಿಯೋಗ ತೆರಳಲು ನಿರ್ಧರಿಸಲಾಗಿದೆ ಎಂದು ಪ್ರಜಾ ಪರಿವರ್ತನಾ ವೇದಿಕೆಯ ಜಿಲ್ಲಾಧ್ಯಕ್ಷ ಹೆಚ್.ಎಸ್.ಮುತ್ತಪ್ಪ ಹಾಗೂ ಕಾರ್ಯದರ್ಶಿ ಜಯಂತಿ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರಜಾ ಪರಿವರ್ತನಾ ವೇದಿಕೆ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿತ್ತು. ಆದರೆ ಇದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದನೆ ದೊರೆಯದೆ ಇರುವುದರಿಂದ ವೇದಿಕಯ ರಾಜ್ಯಾಧ್ಯಕ್ಷ ಬಿ.ಗೋಪಾಲ್ ಅವರ ನೇತೃತ್ವದಲ್ಲಿ ನಿಯೋಗ ತೆರಳಲಾಗುವುದು ಎಂದು ತಿಳಿಸಿದ್ದಾರೆ.
ವಿರಾಜಪೇಟೆ ತಾಲ್ಲೂಕಿನ ವಿವಿಧ ಗ್ರಾಮಗಳನ್ನು ಕಾಡುತ್ತಿರುವ ಸ್ಮಶಾನದ ಕೊರತೆಯ ಸಮಸ್ಯೆಯನ್ನು ಬಗೆಹರಿಸಬೇಕು, ಶುದ್ಧ ಕುಡಿಯುವ ನೀರಿನ ಸರಬರಾಜಿಗೆ ಕ್ರಮ ಕೈಗೊಳ್ಳಬೇಕು, ನಿವೇಶನದ ಹಕ್ಕು ಪತ್ರವನ್ನು ಯಾವುದೇ ತಕರಾರು ಇಲ್ಲದೆÉ ಹಂಚಿಕೆ ಮಾಡಬೇಕು.
ವೃದ್ಧಾಪ್ಯ ವೇತನ, ವಿಧವಾವೇತನ ಮತ್ತು ಪಿಂಚಣಿಯನ್ನು ಸಕಾಲದಲ್ಲಿ ನೀಡಬೇಕು, ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಮನೆ, ಗದ್ದೆಗಳಿಗೆ ತೆರಳಲು ರಸ್ತೆ ವ್ಯವಸ್ಥೆಯನ್ನು ಕಲ್ಪಿಸಬೇಕು, ಸರ್ಕಾರ ವಶಪಡಿಸಿಕೊಂಡಿರುವ ಒತ್ತುವರಿ ಜಾಗವನ್ನು ಆಯಾ ಹೋಬಳಿ ವ್ಯಾಪ್ತಿಯಲ್ಲಿರುವ ನಿರಾಶ್ರಿತರಿಗೆ ಹಂಚಿಕೆ ಮಾಡಬೇಕು ಮತ್ತು ನೆರೆ ಸಂತ್ರಸ್ತರಿಗೆ ಮನೆಗಳನ್ನು ಹಂಚಿಕೆ ಮಾಡುವ ಸಂದರ್ಭ ಲೋಪವಾಗಿದ್ದು, ಸೂಕ್ತ ತನಿಖೆಗೆ ಒತ್ತಾಯಿಸಿ ಮುಖ್ಯಮಂತ್ರಿಗಳು ಹಾಗೂ ವಸತಿ ಸಚಿವರನ್ನು ಭೇಟಿ ಮಾಡಿ ಮನವಿ ಪತ್ರವನ್ನು ಸಲ್ಲಿಸಲಾಗುವುದೆಂದು ಮುತ್ತಪ್ಪ ಹಾಗೂ ಜಯಂತಿ ತಿಳಿಸಿದ್ದಾರೆ.