ಬೆಳೆ ಸಮೀಕ್ಷೆ : ಕೈಬಿಟ್ಟ ಗ್ರಾಮಗಳನ್ನು ಪರಿಹಾರದ ಪಟ್ಟಿಯಲ್ಲಿ ಸೇರಿಸಲು ಒತ್ತಾಯ

October 9, 2020

ಮಡಿಕೇರಿ ಅ.9 : ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿ ವಿಕೋಪದಿಂದ ಕಾಫಿ ಬೆಳೆಗಾರರಿಗೆ ನಷ್ಟ ಉಂಟಾಗಿದ್ದು, ಬೆಳೆ ಸಮೀಕ್ಷೆಯಲ್ಲಿ ಕೈಬಿಟ್ಟ ಗ್ರಾಮಗಳನ್ನು ಪರಿಹಾರದ ಪಟ್ಟಿಯಲ್ಲಿ ಸೇರಿಸಿಕೊಳ್ಳುವಂತೆ ಮಕ್ಕಂದೂರು, ಕಡಗದಾಳು, ಮರಗೋಡು, ಹಾಕತ್ತೂರು ಕಾಫಿ ಬೆಳೆಗಾರರು ಒತ್ತಾಯಿಸಿದ್ದಾರೆ.
ಪ್ರಭಾರ ಜಿಲ್ಲಾಧಿಕಾರಿ ಡಾ.ಸ್ನೇಹ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಬಿಜೆಪಿ ವಕ್ತಾರ ಹಾಗೂ ಕಾಫಿ ಬೆಳೆಗಾರ ರವಿ ಕುಶಾಲಪ್ಪ, ಮಹಾ ಮಳೆಯಿಂದಾಗಿ ಬೆಳೆಗಾರರು ಬೆಳೆದ ಕಾಫಿ, ಕಾಳುಮೆಣಸು, ಅಡಿಕೆ, ಬಾಳೆ ಹಾಗೂ ಇತರೆ ಕೃಷಿಗಳು ಅತೀ ಶೀತ ಮತ್ತು ಕೊಳೆ ರೋಗದಿಂದ ಫಸಲು ನಾಶವಾಗಿದ್ದು, ರೈತರು ಹಾಗೂ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ.
ಅಲ್ಲದೆ ಕಳೆದ ಮೂರು ವರ್ಷಗಳಿಂದ ನಿರಂತರ ಭೂಕುಸಿತ ಉಂಟಾಗಿ ತೋಟಗಳ ಅರ್ಧ ಭಾಗ ಇಲ್ಲದಂತಾಗಿದೆ. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ಬೆಳೆಗಾರರ ಸಮೀಕ್ಷೆ ನಡೆಸಲು ಬೆಳೆಗಾರರ ಕೆಲವು ಮನೆಗಳಿಗೆ ಮಾತ್ರ ಭೇಟಿ ನೀಡಿ ಸಮೀಕ್ಷೆ ಮುಕ್ತಾಯವಾಗಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಕಾಫಿ ಮಂಡಳಿ ವತಿಯಿಂದ ಕೈಗೊಳ್ಳಲಾದ ಬೆಳೆ ಸಮೀಕ್ಷೆಯಲ್ಲಿ ಮಕ್ಕಂದೂರು, ಕಡಗದಾಳು, ಮರಗೋಡು, ಹಾಕತ್ತೂರು, ಅವಂದೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳನ್ನು ಕೈಬಿಡಲಾಗಿದ್ದು, ಕೂಡಲೇ ಈ ಗ್ರಾಮಗಳನ್ನು ಪರಿಹಾರದ ಪಟ್ಟಿಯಲ್ಲಿ ಸೇರಿಸಿಕೊಳ್ಳುವಂತೆ ಆಗ್ರಹಿಸಿದರು.
ಜಿಲ್ಲಾಧಿಕಾರಿಗಳು, ಶಾಸಕರು ಹಾಗೂ ಸಂಸದರು ಸರ್ಕಾರದ ಗಮನ ಸೆಳೆಯುವ ಮೂಲಕ ರೈತರ ಹಾಗೂ ಬೆಳೆಗಾರರ ಕಣ್ಣೊರೆಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ರೈತರು ಹಾಗೂ ಬೆಳೆಗಾರರು ತಮ್ಮ ಸಮಸ್ಯೆಗಳನ್ನು ಹೊತ್ತು ದೂರದ ಊರುಗಳಿಂದ ಕಚೇರಿಗೆ ಆಗಮಿಸಿದರೆ ಅಧಿಕಾರಿಗಳ ಗೈರು ಹಾಜರಾಗಿದ್ದಾರೆ. ಸಂತೆ ದಿನವಾದ ಶುಕ್ರವಾರವು ಅಧಿಕಾರಿಗಳ ಗೈರಿನಿಂದ ಬೆಳೆಗಾರರು ಹಿಂತಿರುಗುವಂತಾಗಿದ್ದು, ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಮನವಿ ನೀಡುವ ಸಂದರ್ಭ ಬೆಳೆಗಾರರಾದ ಬೆಪ್ಪರನ ಮೇದಪ್ಪ, ಕೊಡಪಾಲು ಗಣಪತಿ, ಬೆಳ್ಳಿನ ಚಂದ್ರ ಪ್ರಕಾಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.

error: Content is protected !!