ಕುಶಾಲನಗರದಲ್ಲಿ ಕಾವೇರಿ ಪರಿಸರ ರಕ್ಷಣಾ ಬಳಗದಿಂದ ಗಿಡನೆಡುವ ಕಾರ್ಯಕ್ರಮ

October 10, 2020

ಕುಶಾಲನಗರ ಅ. 10 : ಪ್ರಕೃತಿ ಮತ್ತು ಪರಿಸರದ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸುವಂತಾಗಬೇಕು ಎಂದು ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರೂ ಮತ್ತು ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಕರೆ ನೀಡಿದ್ದಾರೆ.
ಅವರು ಕುಶಾಲನಗರದಲ್ಲಿ ಕಾವೇರಿ ಪರಿಸರ ರಕ್ಷಣಾ ಬಳಗದ ವತಿಯಿಂದ ನಡೆದ ಗಿಡ, ಮರಗಳ ಹುಟ್ಟುಹಬ್ಬ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಪ್ರಕೃತಿಯ ಆರಾಧನೆ ಮೂಲಕ ಉತ್ತಮ ವಾತಾವರಣ ನಿರ್ಮಾಣವಾಗಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಂಗವಾಗಿ ಕುಶಾಲನಗರ ಅರಣ್ಯ ತಪಾಸಣಾ ಗೇಟ್ ಬಳಿ ಬಳಗದ ವತಿಯಿಂದ ನೆಟ್ಟು ಬೆಳೆಸಿದ್ದ ಬಾದಾಮಿ ಮತ್ತಿತರ ಗಿಡಗಳ ಹುಟ್ಟುಹಬ್ಬದ ಹೆಸರಿನಲ್ಲಿ ಕೇಕ್ ಕತ್ತರಿಸಿ ಆಚರಣೆ ಮಾಡಲಾಯಿತು.
ಇದೇ ಸಂದರ್ಭ ಆವರಣದಲ್ಲಿ ಗಿಡವೊಂದನ್ನು ನೆಡಲಾಯಿತು.
ಪಾದಚಾರಿಗಳು ಹಾಗೂ ವಾಯುವಿಹಾರಿಗಳ ಅನುಕೂಲಕ್ಕಾಗಿ ಬೆಂಚ್ ಅಳವಡಿಸಲಾಯಿತು. ನಂತರ ಉಪಸ್ಥಿತರಿದ್ದ ಪರಿಸರ ಪ್ರೇಮಿಗಳಿಗೆ ಬಳಗದ ವತಿಯಿಂದ ಸಿಹಿ ವಿತರಣೆಯೊಂದಿಗೆ ಗಣ್ಯರಿಗೆ ಹೂವಿನ ಗಿಡಗಳನ್ನು ನೀಡಲಾಯಿತು.
ಈ ಸಂದರ್ಭ ಪರಿಸರ ರಕ್ಷಣಾ ಬಳಗದ ಅಧ್ಯಕ್ಷರಾದ ಎಂ.ಎನ್.ಚಂದ್ರಮೋಹನ್, ಅರಣ್ಯ ಇಲಾಖೆ ಉಪ ವಲಯ ಅರಣ್ಯಾಧಿಕಾರಿ ಮಹದೇವ ನಾಯಕ್, ಪಪಂ ಸದಸ್ಯರಾದ ಪ್ರಮೋದ್ ಮುತ್ತಪ್ಪ, ಕೆ.ಜಿ.ಮನು ಕುಡಾ ಸದಸ್ಯರಾದ ವೈಶಾಖ್, ರಾಣು ಅಪ್ಪಣ್ಣ, ಬಳಗದ ಪ್ರಮುಖರಾದ ಡಿ.ಆರ್.ಸೋಮಶೇಖರ್, ಬಿ.ಜೆ.ಅಣ್ಣಯ್ಯ, ಶಿವಾಜಿ, ಎಂ.ಡಿ.ಕೃಷ್ಣಪ್ಪ, ಮಂಜುನಾಥ್, ವನಿತಾ ಚಂದ್ರಮೋಹನ್, ಪ್ರವಾಹ ಸಂತ್ರಸ್ಥರ ವೇದಿಕೆಯ ಪ್ರಮುಖರಾದ ತೋರೇರ ಉದಯಕುಮಾರ್, ಕೊಡಗನ ಹರ್ಷ ಇದ್ದರು.

error: Content is protected !!