ಅಖಿಲ ಕೊಡವ ಸಮಾಜದ ಯುವ ಘಟಕ ಅಸ್ತಿತ್ವಕ್ಕೆ : ನೂತನ ಅಧ್ಯಕ್ಷರಾಗಿ ಚಮ್ಮಟೀರ ಪ್ರವೀಣ್ ಉತ್ತಪ್ಪ ಆಯ್ಕೆ

10/10/2020

ಮಡಿಕೇರಿ ಅ. 10 : ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಅಖಿಲ ಕೊಡವ ಸಮಾಜದ ಯುವ ಘಟಕದ ಅಧ್ಯಕ್ಷರಾಗಿ ಚಮ್ಮಟೀರ ಪ್ರವೀಣ್ ಉತ್ತಪ್ಪ ಆಯ್ಕೆಯಾಗಿದ್ದಾರೆ.
ವಿರಾಜಪೇಟೆ ಅಖಿಲ ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಮಾಜ ಸರ್ವ ಸದಸ್ಯರ ಸಮ್ಮಖದಲ್ಲಿ ಚಮ್ಮಟೀರ ಪ್ರವೀಣ್ ಉತ್ತಪ್ಪ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭ ಮಾತನಾಡಿದ ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ, ಯುವ ಜನಾಂಗವನ್ನು ಕೊಡವಾಮೆಯಡಿಯಲ್ಲಿ ತಯಾರು ಮಾಡುವ ಜವಬ್ದಾರಿಯನ್ನು ಯುವ ಘಟಕಕ್ಕೆ ನೀಡಿದ್ದು, ಇದರಿಂದ ಕೊಡವ ಸಂಸ್ಕøತಿಗೆ ಕೊಡವ ಯುವ ಜನಾಂಗ ಆಕರ್ಷಣೆಗೊಳ್ಳಲಿದ್ದಾರೆ ಎಂದರು.
ಯುವ ಜನಾಂಗ ಈ ದೇಶದ ಆಸ್ತಿಯಾಗಿದ್ದು, ಇವರ ಕೈಯಲ್ಲಿ ಅಧಿಕಾರವನ್ನು ನೀಡಿದರೆ ಒಂದು ಬದಲಾವಣೆಯಾಗಲಿದೆ ಎಂದು ಘಟಕಕ್ಕೆ ಚಾಲನೆ ನೀಡಲಾಗಿದೆ ಎಂದರು.
ಅಖಿಲ ಕೊಡವ ಸಮಾಜ ಯುವ ಘಟಕದ ವಿಷಯದಲ್ಲಿ ಅಖಿಲ ಕೊಡವ ಸಮಾಜ ಮೂಗು ತೂರಿಸುವುದಿಲ್ಲ, ಆದರೆ ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕಾಗಿರುವುದರಿಂದ ಕೊಡವ ಸಮುದಾಯದ ಯುವ ಜನಾಂಗದ ಒಳಿತಿಗೆ ಶ್ರಮಿಸಬೇಕಿದೆ ಎಂದರು.
ಯುವ ಘಟಕದ ನೂತನ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲಾ ಜಾತಿ ಹಾಗೂ ವಿವಿಧ ಧರ್ಮದ ಜನಾಂಗವಿದ್ದು, ಅವರೊಂದಿಗೆ ಸಹಬಾಳ್ವೆ ನಡೆಸಲು ನಮ್ಮ ಯುವಜನಾಂಗಕ್ಕೆ ಕರೆ ನೀಡಲಾಗುತ್ತದೆ ಎಂದರು.
ಕೊಡಗು ಶಾಂತಿಯ ನಾಡು, ಕೊಡವರು ಎಲ್ಲರನ್ನೂ ಸಹೋದರರಂತೆ ಕಾಣುವ ಜನಾಂಗ. ಕೊಡಗಿನಲ್ಲಿ ಎಂದಿಗೂ ಜಾತಿಯ ವಿಷಗಾಳಿ ಬೀಸಿರಲಿಲ್ಲ, ಆದರೆ ಇದೀಗ ಜಾತಿಯ ಸಂಘರ್ಷ ಏರ್ಪಟ್ಟಿದೆ ಎಂದು ಅಭಿಪ್ರಾಯಪಟ್ಟ ಅವರು, ಇದಕ್ಕೆ ಅವಕಾಶ ನೀಡಬಾರದು ಎಂದರು.

ಯುವ ಘಟಕದ ಉಪಾಧ್ಯಕ್ಷರಾಗಿ ಅಣ್ಣೀರ ಹರೀಶ್ ಮಾದಪ್ಪ, ಸಂಘಟನಾ ಕಾರ್ಯದರ್ಶಿ ಅಜ್ಜಿಕುಟ್ಟೀರ ಪ್ರಥ್ವಿ ಸುಬ್ಬಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ಸಣ್ಣುವಂಡ ದರ್ಶನ್ ಕಾವೇರಪ್ಪ, ಸಹ ಕಾರ್ಯದರ್ಶಿಯಾಗಿ ಅಪ್ಪಂಡೇರಂಡ ದೇವಯ್ಯ ಹಾಗೂ ಖಜಾಂಚಿಯಾಗಿ ಚಿರಿಯಪಂಡ ವಿಶು ಕಾಳಪ್ಪ ಆಯ್ಕೆಯಾಗಿದ್ದಾರೆ.
ಸಲಹೆಗಾರರಾಗಿ ಡಾ. ಮುಲ್ಲೇಂಗಡ ರೇವತಿ ಪೂವಯ್ಯ ಅವರನ್ನು ಆಯ್ಕೆ ಮಾಡಲಾಗಿದ್ದು ಇತರ ಸಲಹೆಗಾರರು ಹಾಗೂ ಪೂರ್ಣ ಪ್ರಮಾಣದ ಆಡಳಿತ ಮಂಡಳಿ ರಚಿಸಿ ಸದ್ಯದಲ್ಲಿ ಯುವ ಘಟಕಕ್ಕೆ ಸದಸ್ಯತ್ವ ಆಭಿಯಾನವನ್ನು ಹಮ್ಮಿಕೊಳ್ಳಲಾಗುವುದು ಎಂದು ಮಾತಂಡ ಮೊಣ್ಣಪ್ಪ ತಿಳಿಸಿದರು.