ಅಪರೂಪದ ಪಶುಪತಿ ಲಿಂಗ ಪ್ರತಿಷ್ಠಾಪನೆಗೆ ಚೆಟ್ಟಳ್ಳಿ ಸಹಕಾರ ಸಂಘ ಸಜ್ಜು

10/10/2020

ಸಿದ್ದಾಪುರ ಅ.10 : (ಅಂಚೆಮನೆ ಸುಧಿ) ಕೊಡಗಿನ ಕಾವೇರಿ, ಶ್ರೀವೀರಾಂಜನೇಯ, ಶ್ರೀಮಹಾವಿಷ್ಣು ಹಾಗೂ ಶ್ರೀಮಹಾಗಣಪತಿಯ ವಿಗ್ರಹಗಳ ಪ್ರತಿಷ್ಠಾಪನೆಯ ಮೂಲಕ ಭಕ್ತಾಧಿಗಳ ಗಮನ ಸೆಳೆದಿರುವ ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘ ಇದೀಗ ಪಶುಪತಿ ಲಿಂಗ ಮತ್ತು ನಂದಿ ವಿಗ್ರಹದ ಸ್ಥಾಪನೆಗೆ ವೇದಿಕೆ ಸಿದ್ಧಪಡಿಸಿಕೊಂಡಿದೆ.

ಅಪಾರ ದೈವಭಕ್ತರಾಗಿರುವ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ ಅವರು ನೇಪಾಳದಲ್ಲಿ ಮಾಡಿಕೊಂಡಿದ್ದ ಪ್ರಾರ್ಥನೆ ನೆರವೇರುವ ಕಾಲ ಕೂಡಿ ಬಂದಿದೆ. ಕೆಲವು ವರ್ಷಗಳ ಹಿಂದೆ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿದ್ದಾಗ ಬ್ಯಾಂಕ್ ಮೂಲಕ ನೇಪಾಳಕ್ಕೆ ಪ್ರವಾಸಕ್ಕೆಂದು ಹೋಗಿದ್ದಾಗ ಪಶುಪತಿ ಲಿಂಗವಿರುವ ದೇವಾಲಯಕ್ಕೆ ಭೇಟಿ ನೀಡಿದ್ದರು. ಅಲ್ಲಿ ಭಕ್ತಿಯಿಂದ ಪ್ರಾರ್ಥಿಸುತ್ತಿದ್ದ ಸಂದರ್ಭ ಅರ್ಚಕರು ಭಕ್ತರ ಮೇಲೆ ಎಸೆದ ಹೂವಿನ ಹಾರ ಮಣಿಉತ್ತಪ್ಪ ಅವರ ಕೊರಳಿಗೆ ಬಿದ್ದ ಕಾರಣದಿಂದ ಪ್ರೇರೇಪಣೆಗೊಂಡ ಅವರು ಚೆಟ್ಟಳ್ಳಿಯಲ್ಲೂ ಪಶುಪತಿ ಲಿಂಗವನ್ನು ಸ್ಥಾಪಿಸುವುದಾಗಿ ಹೇಳಿಕೊಂಡಿದ್ದರು.

ನೇಪಾಳದ ದೇವಾಲಯದಲ್ಲಿ ಪೂಜೆ ಮಾಡುತ್ತಿದ್ದ ಉಡುಪಿ ಮೂಲದ ಅರ್ಚಕರು ಪಶುಪತಿ ಲಿಂಗದ ಬಗ್ಗೆ ವಿವರಿಸಿ ಇದು ಅಪರೂಪದ ಲಿಂಗವಾಗಿದ್ದು, ನೇಪಾಳ ಮತ್ತು ಹಿಮಾಲಯದ ದೇವಾಲಯದಲ್ಲಿ ಮಾತ್ರ ಪ್ರತಿಷ್ಠಾಪನೆಗೊಂಡಿದೆ ಎಂದು ಮಾಹಿತಿ ನೀಡಿದರು. ಈ ಕಾರಣದಿಂದಲೇ ಚೆಟ್ಟಳ್ಳಿ ಗ್ರಾಮದಲ್ಲೂ ಲಿಂಗ ಪ್ರತಿಷ್ಠಾಪನೆಗೆ ಮಣಿಉತ್ತಪ್ಪ ಮನಸ್ಸು ಮಾಡಿದರು.

ಇದೀಗ ಪಶುಪತಿ ಲಿಂಗ ಮತ್ತು ನಂದಿ ವಿಗ್ರಹದ ಕೆತ್ತನೆ ಕಾರ್ಯ ಮುಗಿದ್ದಿದ್ದು, ಸಧ್ಯದಲ್ಲಿಯೇ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಹೇಳಿದ್ದಾರೆ. ಕಾರ್ಕಳದ ಶ್ರೀಮೂಕಾಂಬಿಕ ಶಿಲ್ಪ ತರಬೇತಿ ಪಾಠ ಶಾಲೆಯಲ್ಲಿ ಗುಣವಂತೇಶ್ವರ ಭಟ್ ಅವರ ನೇತೃತ್ವದಲ್ಲಿ ಕೃಷ್ಣಶಿಲೆ ಕಲ್ಲಿನಿಂದ ವಿಗ್ರಹಗಳು ರೂಪ ಪಡೆದುಕೊಂಡಿವೆ. ಶಿವನ ಚತುರ್ಮುಖವಿರುವ ಲಿಂಗ ಅತ್ಯಂತ ಆಕರ್ಷಣೀಯವಾಗಿದ್ದು, ಜೀವಕಳೆಯ ಮೂಲಕ ಗಮನ ಸೆಳೆಯುತ್ತಿದೆ. ಗುಣವಂತೇಶ್ವರ ಭಟ್ 1985 ರಲ್ಲಿ ಚೆಟ್ಟಳ್ಳಿ ಶ್ರೀಮಂಗಲ ಭಗವತಿ ದೇವಾಲಯದಲ್ಲಿ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದರು ಎನ್ನುವ ವಿಚಾರ ತಡವಾಗಿ ತಿಳಿದು ಬಂದಿದ್ದು, ಈ ಬೆಳವಣಿಗೆ ನನಗೆ ವಿಸ್ಮಯವನ್ನುಂಟು ಮಾಡಿದೆ ಎಂದು ಮಣಿಉತ್ತಪ್ಪ ತಿಳಿಸಿದ್ದಾರೆ.

ಸಹಕಾರ ಸಂಘದ ಕಟ್ಟಡದಲ್ಲಿ ಮೊದಲು ಕಾವೇರಿ ಮಾತೆಯ ಪ್ರತಿಮೆಯ ಸ್ಥಾಪನೆಗೆ ಕಾರಣಕರ್ತರಾಗಿರುವ ಇವರು, ನಂತರ ನರೇಂದ್ರಮೋದಿ ಭವನದ ಆವರಣದಲ್ಲಿ ಶ್ರೀವೀರಾಂಜನೇಯ ಹಾಗೂ ಮಹಾಗಣಪತಿಯ ವಿಗ್ರಹಗಳನ್ನು ಪ್ರತಿಷ್ಠಾಪಿಸಿದರು. ಪ್ರಸ್ತುತ ಪಶುಪತಿ ಲಿಂಗ ಹಾಗೂ ನಂದಿ ವಿಗ್ರಹದ ಸ್ಥಾಪನೆಗೆ ಉತ್ಸುಕರಾಗಿರುವ ಮಣಿಉತ್ತಪ್ಪ, ಈ ಎಲ್ಲಾ ಕಾರ್ಯಗಳು ಜಿಲ್ಲೆಯ ರೈತರು, ಬೆಳೆಗಾರರು ಹಾಗೂ ಜನರ ಒಳಿತಿಗಾಗಿ ಎಂದು ಹೇಳಿದ್ದಾರೆ.

ಸಂಘದಲ್ಲಿ ಈ ಹಿಂದೆ ಕಾರ್ಯ ನಿರ್ವಹಿಸಿರುವ ಕಾರ್ಯ ನಿರ್ವಹಣಾಧಿಕಾರಿಗಳಾದ ಚಿಣ್ಣಪ್ಪ, ರಮೇಶ್, ಮುಳ್ಳಂಡ ಮಾಯಮ್ಮ ಹಾಗೂ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಉಳುವಾರನ ನಂದಿನಿ ಸೇರಿದಂತೆ ಎಲ್ಲಾ ಸಿಬ್ಬಂದಿ ವರ್ಗದ ಸಹಕಾರದಿಂದ ಸಂಘ ಅಭಿವೃದ್ಧಿಯನ್ನು ಹೊಂದುತ್ತಿದೆ. ಅಲ್ಲದೆ ದೇವರ ವಿಗ್ರಹಗಳ ಪ್ರತಿಷ್ಠಾಪನೆಯ ಮಹಾತ್ಕಾರ್ಯಗಳು ನಡೆದಿದೆ ಎಂದು ಮಣಿಉತ್ತಪ್ಪ ತೃಪ್ತಿ ವ್ಯಕ್ತಪಡಿಸಿದ್ದಾರೆ.

ದೇವರ ವಿಗ್ರಹಗಳ ಸ್ಥಾಪನೆಗೆ ಸಹಕಾರ ಸಂಘದ ಹಣವನ್ನು ಬಳಕೆ ಮಾಡದೆ ತಮ್ಮ ಸ್ವಂತ ಹಣವನ್ನು ಖರ್ಚು ಮಾಡುತ್ತಿರುವುದಲ್ಲದೆ ದಾನಿಗಳ ಸಹಕಾರ ಪಡೆಯುತ್ತಿದ್ದಾರೆ.

ಶ್ರೀವೀರಾಂಜನೇಯ, ಶ್ರೀಮಹಾವಿಷ್ಣು ಹಾಗೂ ಶ್ರೀಮಹಾಗಣಪತಿ ವಿಗ್ರಹಗಳು ಸ್ಥಾಪನೆಯಾದ ನಂತರ ಈ ಪ್ರದೇಶವನ್ನು ಜನ ಭಕ್ತಿ ಭಾವದಿಂದ ನೋಡುತ್ತಿದ್ದಾರೆ. ಅಲ್ಲದೆ ಸಹಕಾರ ಸಂಘದ ಗೌರವವೂ ಹೆಚ್ಚಾಗಿದೆ. ಪಶುಪತಿ ಲಿಂಗ ಮತ್ತು ನಂದಿ ವಿಗ್ರಹವನ್ನು ಪ್ರತಿಷ್ಠಾಪಿಸಿದ ನಂತರ ಇಲ್ಲಿನ ಶಕ್ತಿ ಮತ್ತಷ್ಟು ಹೆಚ್ಚಾಗಲಿದೆ ಮತ್ತು ಜನರಿಗೆ ಒಳಿತಾಗಲಿದೆ ಎಂದು ಮಣಿಉತ್ತಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆಂಜನೇಯ ಹಾಗೂ ಗಣಪತಿಗೆ ಬುಧವಾರ ಮತ್ತು ಶನಿವಾರ ವಿಶೇಷ ಪೂಜೆ ನೆರವೇರುತ್ತದೆ. ಹಬ್ಬದ ದಿನಗಳಲ್ಲಿ ಅರ್ಚಕರು ಪೂಜೆ ಸಲ್ಲಿಸಿದರೆ ಉಳಿದ ದಿನಗಳಲ್ಲಿ ಭಕ್ತರು ತಾವೇ ಪೂಜೆ ಸಲ್ಲಿಸುತ್ತಾರೆ.