ತಲಕಾವೇರಿಗೆ ಆಗಮಿಸುವ ಭಕ್ತರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ

ಮಡಿಕೇರಿ ಅ.10 : ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಅ.17 ರಂದು ಜರುಗಲಿರುವ ಕಾವೇರಿ ಪವಿತ್ರ ತೀರ್ಥೋದ್ಭವ ವೀಕ್ಷಿಸಲು ಹೊರಜಿಲ್ಲೆ ಮತ್ತು ಹೊರರಾಜ್ಯದಿಂದ ಬರುವ ಭಕ್ತಾದಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಲು ತೀರ್ಮಾನಿಸಲಾಗಿದೆ ಎಂದು ಶಾಸಕ ಕೆ.ಜಿ.ಬೋಪಯ್ಯ ತಿಳಿಸಿದ್ದಾರೆ.
ಭಾಗಮಂಡಲದಲ್ಲಿ ಜಾತ್ರೆ ಸಂಬಂಧ ಶನಿವಾರ ನಡೆದ ಪೂರ್ವಭಾವಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಇದ್ದರೆ ಮಾತ್ರ ಕ್ಷೇತ್ರದೊಳಗೆ ಪ್ರವೇಶಿಸಲು ಅನುಮತಿ ನೀಡಲಾಗುತ್ತದೆ. ಸ್ಥಳೀಯರು ಕೂಡಾ ತೀಥೋದ್ಭವದ ಸಂದರ್ಭ ಆದಷ್ಟ ಮನ್ನೆಚ್ಚರಿಕೆ ವಹಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರೊಂದಿಗೆ ಸ್ವಯಂ ನಿಯಂತ್ರಣ ಹಾಕಿಕೊಳ್ಳಬೇಕು ಎಂದು ನುಡಿದರು.
ತೀರ್ಥೋದ್ಭವ ಸಂದರ್ಭ ತಲಕಾವೇರಿ ಕ್ಷೇತ್ರದ ಸಂಪ್ರದಾಯಗಳಿಗೆ ಕಿಂಚಿತ್ತೂ ಚ್ಯುತಿ ಬಾರದಂತೆ ಪೂಜಾ ವಿಧಿವಿಧಾನಗಳಲ್ಲೂ ಎಲ್ಲಾ ರೀತಿಯ ವ್ಯವಸ್ಥೆ ಕೈಗೊಳ್ಳಲಾಗುತ್ತದೆ. ಕೋವಿಡ್ ಹಿನ್ನೆಲೆಯಲ್ಲಿ ಭಕ್ತಾದಿಗಳ ಆರೋಗ್ಯ ಹಿತರಕ್ಷಣೆಗೂ ಆದ್ಯತೆ ನೀಡಲಾಗುತ್ತದೆ.
ಕಾವೇರಿ ಕ್ಷೇತ್ರಕ್ಕೆ ಬಂದವರಿಂದ ಕೊರೋನಾ ಸೋಂಕು ವ್ಯಾಪಿಸದಂತೆ, ಯಾವುದೇ ಸಮಸ್ಯೆಗೆ ಕಾರಣವಾಗದಂತೆ ಕ್ಷೇತ್ರದಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಈ ಬಾರಿ ಜಿಲ್ಲಾಡಳಿತ ಹಾಗೂ ದೇವಾಲಯ ಸಮಿತಿ ವತಿಯಿಂದ ಕೈಗೊಳ್ಳಲಾಗುತ್ತದೆ. ಈ ಸಂಬಂಧ ಜನತೆ ಕೂಡ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.
