ಕೋವಿಡ್ ಆತಂಕ : ತೀರ್ಥೋದ್ಭವ ಸಂದರ್ಭ ತಲಕಾವೇರಿಯಲ್ಲಿ ಮುಂಜಾಗೃತಾ ಕ್ರಮಕ್ಕೆ ಸೂಚನೆ

10/10/2020

ಮಡಿಕೇರಿ ಅ.10 : ಕೊಡಗು ವ್ಯಾಪ್ತಿಯಲ್ಲಿ ಕೊರೊನಾ ಸಾಂಕ್ರಾಮಿಕ ಪ್ರಕರಣಗಳು ಏರುಗತಿಯಲ್ಲಿ ಸಾಗಿರುವ ಹಿನ್ನೆಲೆಯಲ್ಲಿ, ತಲಕಾವೇರಿಯಲ್ಲಿ ಅ.17ರಂದು ನಡೆಯಲಿರುವ ಕಾವೇರಿ ತುಲಾ ಸಂಕ್ರಮಣ ತೀರ್ಥೋದ್ಭವ ಮತ್ತು ಜಾತ್ರಾ ಮಹೋತ್ಸವವನ್ನು ಅತ್ಯಂತ ಎಚ್ಚರಿಕೆಯಿಂದ ನಡೆಸಬೇಕೆಂದು ಶಾಸಕ ಕೆ.ಜಿ.ಬೋಪಯ್ಯ ತಿಳಿಸಿದ್ದಾರೆ.
ಭಾಗಮಂಡಲದ ಭಗಂಡೇಶ್ವರ ದೇವಾಲಯದ ಮುಡಿ ಕಟ್ಟಡದಲ್ಲಿ ತುಲಾ ಸಂಕ್ರಮಣ ಸಂಬಂಧ ಆಯೋಜಿತ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದ ಇತರೆ ಜಿಲ್ಲೆಗಳಲ್ಲಿ ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತಿದ್ದರು, ಕೊಡಗಿನಲ್ಲಿ ಹೆಚ್ಚುತ್ತಿದೆ. ಇದನ್ನು ಲಕ್ಷ್ಯದಲ್ಲಿರಿಸಿಕೊಂಡು ಜಾತ್ರಾ ಮಹೋತ್ಸವವನ್ನು ಆಚರಿಸಬೇಕೆಂದು ಎಚ್ಚರಿಕೆಯ ಮಾತುಗಳನ್ನಾಡಿದರು.
ತೀರ್ಥೋದ್ಭವ ಸಂದರ್ಭ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯವಶ್ಯ. ತಲಕಾವೇರಿಯಲ್ಲಿ ಹೆಚ್ಚಿನ ಚಳಿಯಿದ್ದು, ಈ ಸಂದರ್ಭ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಮುಂಜಾಗ್ರತೆ ವಹಿಸುವಂತೆ ಅವರು ಮನವಿ ಮಾಡಿದರಲ್ಲದೆ, ತಲಕಾವೇರಿ ಭಾಗದಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದರು.
::: ಥರ್ಮಲ್ ಸ್ಕ್ರೀನಿಂಗ್ :::
ಶ್ರೀತಲಕಾವೇರಿ ಮತ್ತು ಭಾಗಮಂಡಲ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಿ.ಎಸ್.ತಮ್ಮಯ್ಯ ಮಾತನಾಡಿ, ಆರೋಗ್ಯ ಇಲಾಖೆ ಕಾವೇರಿ ತೀರ್ಥೋದ್ಭವ ಸಂದರ್ಭ ಹೆಚ್ಚು ಕಾಳಜಿಯಿಂದ ಕಾರ್ಯನಿರ್ವಹಿಸಬೇಕು. ಹೊರಗಿನಿಂದ ಬರುವವರಿಗೆ ಥರ್ಮಲ್ ಸ್ಕ್ರೀನಿಂಗ್, ಪಲ್ಸ್ ಆಕ್ಸಿಮೀಟರ್ ಪರೀಕ್ಷೆಯನ್ನು ನಡೆಸಬೇಕು. ಯಾವುದೇ ಒಬ್ಬ ವ್ಯಕ್ತಿಗೆ ಸೋಂಕು ಹರಡದಂತೆ ಅತ್ಯಂತ ಎಚ್ಚರಿಕೆಯಿಂದ ಜಾತ್ರಾ ಮಹೋತ್ಸವವನ್ನು ನಡೆಸಬೇಕಿದೆ ಎಂದು ತಿಳಿಸಿದರು.
::: ವೀಕ್ಷಣೆಗೆ ಎಲ್‍ಇಡಿ ಸ್ಕ್ರೀನ್ :::
ತೀರ್ಥೋದ್ಭವ ಸಂದರ್ಭ ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಎಲ್.ಇ.ಡಿ. ಸ್ಕ್ರೀನ್ ಮೂಲಕ ತೀರ್ಥೋದ್ಭವ ದರ್ಶನದ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ ಬಿ.ಎಸ್.ತಮ್ಮಯ್ಯ, ಇತರೆ ರಾಜ್ಯಗಳಿಂದ ಬರುವ ಪ್ರವಾಸಿಗರ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಸರ್ಕಾರದ ನಿಯಮಾವಳಿಯಂತೆ ಪಿಂಡ ಪ್ರದಾನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.
::: ಊಟದ ವ್ಯವಸ್ಥೆ ಇಲ್ಲ :::
ತಲಕಾವೇರಿ ಕ್ಷೇತ್ರದಲ್ಲಿ ವರ್ಷಂಪ್ರತಿ ವಿವಿಧ ಸಂಘ ಸಂಸ್ಥೆಗಳಿಂದ ನಡೆಸಿಕೊಂಡು ಬರಲಾಗುತ್ತಿದ್ದ ಊಟದ ವ್ಯವಸ್ಥೆ ಈ ಬಾರಿ ಇರುವುದಿಲ್ಲವೆಂದು ತಮ್ಮಯ್ಯ ಸ್ಪಷ್ಟಪಡಿಸಿದರು.
ಆರ್.ಸಿ.ಎಚ್. ಅಧಿಕಾರಿ ಡಾ.ಗೋಪಿನಾಥ್ ಮಾತನಾಡಿ, ತಲಕಾವೇರಿ ಮತ್ತು ಭಾಗಮಂಡಲದ 2 ಕಡೆ ಆಂಬ್ಯೂಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ 72 ಗಂಟೆಗಳ ಮುಂಚಿತವಾಗಿ ಆರ್.ಟಿ.ಪಿ.ಸಿ.ಆರ್. ಮೂಲಕ ಕೋವಿಡ್ ಪರೀಕ್ಷೆ ಮಾಡಬೇಕಿದೆ ಎಂದರು.
ಸ್ಥಳೀಯ ನಿವಾಸಿಗಳು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 72 ಗಂಟೆಗಳ ಮುಂಚಿತವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದರು.
ಸಭೆ ಯಲ್ಲಿ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ವ್ಯವಸ್ಥಾಪನಾ ಸಮಿತಿ ಪ್ರಮುಖರು, ಸ್ಥಳೀಯ ಗ್ರಾಮಸ್ಥರು ಹಾಜರಿದ್ದರು.