ಶ್ರದ್ಧಾಂಜಲಿ ವಾಹನ ಸುಸ್ಥಿತಿಯಲ್ಲಿಡಲು ಒತ್ತಾಯ

13/10/2020

ಮಡಿಕೇರಿ ಅ.13 : ಬಡವರಿಗೆ ಅನುಕೂಲವಾಗಲೆಂದು ಸರಕಾರ ನೀಡಿರುವ ಶ್ರದ್ಧಾಂಜಲಿ ವಾಹನದಲ್ಲಿ ಕೆಲವು ಅವ್ಯವಸ್ಥೆಗಳಿದ್ದು, ಜಿಲ್ಲಾಸ್ಪತ್ರೆ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ಇದನ್ನು ಸುಸ್ಥಿತಿಯಲ್ಲಿಡಬೇಕೆಂದು ಜೆಡಿಎಸ್ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ನಗರಸಭೆಯ ಮಾಜಿ ಉಪಾಧ್ಯಕ್ಷೆ ಲೀಲಾಶೇಷಮ್ಮ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಆಸ್ಪತ್ರೆಯಲ್ಲಿ ಯಾರಾದರೂ ಮೃತಪಟ್ಟರೆ ಕುಟುಂಬದ ಸದಸ್ಯರು ಶವ ಕೊಂಡೊಯ್ಯಲು ಶ್ರದ್ಧಾಂಜಲಿ ವಾಹನದ ಮೊರೆ ಹೋಗಬೇಕು. ಆದರೆ ಜಿಲ್ಲಾಸ್ಪತ್ರೆಯಲ್ಲಿ ಸರಕಾರದ ಶ್ರದ್ಧಾಂಜಲಿ ವಾಹನ ಇದ್ದರೂ ಅದನ್ನು ನಿರ್ವಹಣೆ ಮಾಡದೆ ಇರುವುದರಿಂದ ಕುಟುಂಬದ ಸದಸ್ಯರು ಸಮಸ್ಯೆ ಎದುರಿಸುವಂತ್ತಾಗಿದೆ ಎಂದು ಆರೋಪಿಸಿದ್ದಾರೆ.
ತಮ್ಮ ಸ್ನೇಹಿತರೊಬ್ಬರು ಮೃತ ಪಟ್ಟಾಗ ತುರ್ತಾಗಿ ಶ್ರದ್ಧಾಂಜಲಿ ವಾಹನದ ಅವಶ್ಯಕತೆ ಇತ್ತು. ಆದರೆ ಅಲ್ಲಿಯ ಸಿಬ್ಬಂದಿಯೊಬ್ಬರು ವಾಹನದಲ್ಲಿ ಹೆಡ್‍ಲೈಟ್ ಇಲ್ಲ ಎಂದು ಹೇಳಿದ ಕಾರಣ ಶವವನ್ನು ಬೇರೆ ವಾಹನದಲ್ಲಿ ಕೊಂಡೊಯ್ಯಬೇಕಾಯಿತು. ನಿರ್ವಹಣೆಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗುತ್ತಿದ್ದರೂ ಮಡಿಕೇರಿಯ ಶ್ರದ್ಧಾಂಜಲಿ ವಾಹನ ಮಾತ್ರ ದುಸ್ಥಿತಿಯಲ್ಲಿದೆ ಎಂದು ಟೀಕಿಸಿದ್ದಾರೆ.
ಆರ್ಥಿಕ ಹಿನ್ನಡೆಯನ್ನು ಅನುಭವಿಸುತ್ತಿರುವ ಬಡವರು ಹಾಗೂ ಜನ ಸಾಮಾನ್ಯರು ಶ್ರದ್ಧಾಂಜಲಿ ವಾಹನವನ್ನೇ ಅವಲಂಬಿಸುತ್ತಾರೆ. ಆದರೆ ಜಿಲ್ಲಾಸ್ಪತ್ರೆಯಲ್ಲಿ ವಾಹನವಿದ್ದರೂ ಸಕಾಲದಲ್ಲಿ ಉಪಯೋಗಕ್ಕೆ ಬರುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿರುವ ಲೀಲಾಶೇಷಮ್ಮ, ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.