ಕೊಡವರಿಗೆ ಎಸ್‍ಟಿ ಸ್ಥಾನಮಾನ ನೀಡಲು ಸಿಎನ್‍ಸಿ ಆಗ್ರಹ

13/10/2020

ಮೈಸೂರು : ಕೊಡವ ಬುಡಕಟ್ಟು ಕುಲವನ್ನು ಪ್ರಾಚೀನ ಆದಿಮ ಸಂಜಾತ ಬುಡಕಟ್ಟು ಜನಾಂಗವೆಂದು ಸರ್ಕಾರ ಘೋಷಿಸಬೇಕು ಎಂದು ಆಗ್ರಹಿಸಿರುವ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ)ಅಧ್ಯಕ್ಷ ಎನ್.ಯು.ನಾಚಪ್ಪರವರು ಸಂವಿಧಾನ 340 ಮತ್ತು 342ನೇ ವಿಧಿಯಂತೆ ಎಸ್.ಟಿ. ಪಟ್ಟಿಯಲ್ಲಿ ಸೇರಿಸಿ ರಾಜಾಶ್ರಯ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯ ಮೂಲನಿವಾಸಿಗಳಾದ ಕೊಡವ ಜನಾಂಗವು ತನ್ನದೇ ಆದ ವಿಶಿಷ್ಟ ಸಂಸ್ಕøತಿ, ಆಚರಣೆ, ಸಂಪ್ರದಾಯಗಳನ್ನು ಪಾಲಿಸುತ್ತಿದ್ದು ಇಲ್ಲಿನ ಸಂಪ್ರದಾಯವನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಅಷ್ಟೇ ಅಲ್ಲದೆ, ಅಂಕಿ -ಅಂಶಗಳ ಪ್ರಕಾರ ಕೊಡಗು ಹೊರತುಪಡಿಸಿ ದೇಶದ ಹಾಗೂ ವಿದೇಶಗಳಲ್ಲಿ ನೆಲೆಸಿರುವ ಕೊಡವರ ಒಟ್ಟು ಸಂಖ್ಯೆ ಸುಮಾರು 1.6 ಲಕ್ಷ ಆಗಿದೆ.

ಈಗಾಗಲೇ ಸಂಘಟನೆ ವತಿಯಿಂದ ಕೊಡವ ಹಕ್ಕೋತ್ತಾಯಕ್ಕಾಗಿ ಹಲವು ಹೋರಾಟಗಳನ್ನು ಮಾಡಲಾಗಿದೆ. ಈ ಸಂಬಂಧ ದೆಹಲಿಯಲ್ಲಿ ಒತ್ತಡ ಹಾಕಿದ ಪರಿಣಾಮವಾಗಿ ಹಿಂದಿನ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬುಡಕಟ್ಟು (ಎಸ್‍ಟಿ) ಸ್ಥಾನ ವಾನ ನೀಡುವ ಕುರಿತು ಕುಲ ಶಾಸ್ತ್ರ ಅಧ್ಯಯನಕ್ಕೆ ಮುಂದಾಗಿದ್ದು ಇದೀಗ ಅಧ್ಯಯನ ನಡೆದಿದ್ದು, ಇದನ್ನು ಸರ್ಕಾರದ ಮುಂದೆ ಮಂಡಿಸಬೇಕು ಎಂದು ಮನವಿ ಮಾಡಿದರು.

ವಾರಕ್ಕೆ ಎರಡು ಬಾರಿ ಉಪವಾಸ ವೃತ ಕೈಗೊಂಡರೂ ಕೊಡವರು ಬ್ರಾಹ್ಮಣರ ಸಂಪ್ರಾದಾಯವನ್ನು ಪಾಲಿಸುತ್ತಿಲ್ಲ. ಹಿಂದು ಮ್ಯಾರೇಜ್ ಆಕ್ಟ್ ಪ್ರಕಾರ (ಹಿಂದು ವೈವಾಹಿಕ ಕಾಯ್ದೆ) ಸಪ್ತಪದಿ ಇಲ್ಲದೆ ನಡೆಯುವ ಯಾವುದೇ ಮದುವೆಗಳನ್ನು ಹಿಂದು ಮದುವೆ ಎಂದು ಪರಿಗಣಿಸಲಾವುದಿಲ್ಲ. ಸಪ್ತಪದಿ ಸಂಸ್ಕಾರಕ್ಕೆ ಹೊರತಾದ ವಿಧಿ ವಿಧಾನಗಳನ್ನು ಅನುಸರಿಸುವವರನ್ನು ಹಿಂದೂಗಳೆಂದು ಮಾನ್ಯ ಮಾಡಲಾಗುವುದಿಲ್ಲ. ಹೀಗಾಗಿ ಕೊಡವ ಸಮುದಾಯದ ವಿಶೇಷ ಬುಡಕಟ್ಟು ಜನಾಂಗವೆಂದು ಬುಡಕಟ್ಟು ಅನುವಂಶಿಕತೆಯ ಊರ್ಜಿತ್ವ ಮತ್ತು ಪೂರ್ವಜತೆಯನ್ನು ನಮ್ಮ ವಿಶಿಷ್ಟ ಬದುಕು ಮತ್ತು ಜೀವನ ವಿಧಾನವೇ ಸಾಕ್ಷಿಯಾಗಿದೆ. ಆದ್ದರಿಂದ ಸರ್ಕಾರಗಳು ನಮ್ಮ ಮನವಿಯನ್ನು ಮಾನ್ಯ ಮಾಡಬೇಕೆಂದು ಅವರು ಮನವಿ ಮಾಡಿದರು.

ಅಸ್ಸಾಂನಲ್ಲಿ ಸತತ 8 ಬಾರಿ ತಿರಸ್ಕಾರಕ್ಕೊಳಗಾದ ಅಸ್ಸಾಮಿನ 6 ಬುಡಕಟ್ಟು ವರ್ಗಗಳನ್ನು ಎಸ್‍ಟಿ ಪಟ್ಟಿಗೆ ಸೇರಿಸಲು ಕೇಂದ್ರ ಮತ್ತು ಅಸ್ಸಾಂ ಸರ್ಕಾರ ಸಂವಿಧಾನ ತಿದ್ದುಪಡಿಗೆ ಮುಂದಾಗಿವೆ. ಈ ಹಿನ್ನೆಲೆಯಲ್ಲಿ ಕೊಡವ ಕುಲದ ಸುದೀರ್ಘ ಅಶೋತ್ತರವಾದ ಸ್ವಾಯತ್ತತೆ ಮತ್ತು ಎಸ್.ಟಿ, ಪಟ್ಟಿಗೆ ಸೇರಿಸುವುದು ಕೂಡ ಸಂವಿಧಾನ ಮೂಲಭೂತ ಹಕ್ಕಾಗಿದೆ. ಆದ್ದರಿಂದ ಈ ಸಾಂವಿಧಾನಿಕ ಪರಿಹಾರಕ್ಕಾಗಿ ತುರ್ತಾಗಿ ಸಂವಿಧಾನ ತಿದ್ದುಪಡಿಗೆ ಮುಂದಾಗಬೇಕು. ಆ ಮೂಲಕ ನಮ್ಮ ಬೇಡಿಕೆಯನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಕೊಡವ ನ್ಯಾಷನಲ್ ಕೌನ್ಸಿಲ್‍ನ ಪದಾಧಿಕಾರಿಗಳಾದ ಅರೆಯಡ ಗಿರೀಶ್, ಕಲಿಯಂಡ ಪ್ರಕಾಶ, ಚಂಬಂಡ ಜನತ್ ಕುಮಾರ್, ಅಪ್ಪನೆರವಂಡ, ಮನೋಜ್ ಮಂದಪ್ಪ ಇದ್ದರು.