ಜಿಲ್ಲಾ ಕೋವಿಡ್ ಆಸ್ಪತ್ರೆ : ಆಕ್ಸಿಜನ್ ಟ್ಯಾಂಕ್ ಕಾರ್ಯಾರಂಭ

13/10/2020

ಮಡಿಕೇರಿ ಅ.13 : ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿ ನಿರ್ಮಾಣವಾಗಿರುವ 13 ಸಾವಿರ ಲೀಟರ್ ಸಾಮಥ್ರ್ಯದ ಆಮ್ಲಜನಕ(ಆಕ್ಸಿಜನ್) ಟ್ಯಾಂಕ್ ಮಂಗಳವಾರದಿಂದ ಕಾರ್ಯ ಆರಂಭವಾಗಿದೆ.
ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್ ವಿವರ ಇಂತಿದೆ: ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಸಂಗ್ರಹ ಸಾಮಥ್ರ್ಯ 13 ಸಾವಿರ ಲೀಟರ್ ಆಗಿದೆ. ಹೆಚ್ಚಿನ ಕೋವಿಡ್ ಪ್ರಕರಣಗಳಿರುವ ಸಮಯದಲ್ಲಿ ಈ ಲಿಕ್ವಿಡ್ ಆಕ್ಸಿಜನ್ ಸ್ಥಾವರದಲ್ಲಿ 15 ದಿನಗಳವರೆಗೆ ಆಮ್ಲಜನಕ ಸಂಗ್ರಹ ಇರುತ್ತದೆ.
ಕೋವಿಡ್ ಅಲ್ಲದ ಸಮಯಗಳಲ್ಲಿ 2-3 ತಿಂಗಳು ಆಮ್ಲಜನಕ ಸಂಗ್ರಹ ಇರುತ್ತದೆ. ಮುಂದಿನ ದಿನಗಳಲ್ಲಿ ಕೋವಿಡ್ ಆಸ್ಪತ್ರೆ ಬ್ಲಾಕ್‍ನಲ್ಲಿ ಒಂದು ಬಾರಿ ಸಂಗ್ರಹವಾದ ಲಿಕ್ವಿಡ್ ಆಕ್ಸಿಜನ್‍ನ್ನು 300 ಆಕ್ಸಿಜನ್ ಹಾಸಿಗೆಗಳಿಗೆ ನಿರಂತರವಾಗಿ 15 ದಿನಗಳ ಕಾಲ ಪೂರೈಕೆ ಮಾಡಬಹುದಾಗಿದೆ.
ಆಸ್ಪತ್ರೆಯಲ್ಲಿನ ಬಳಕೆಗೆ ಅನುಗುಣವಾಗಿ ಮತ್ತು ಅಗತ್ಯವಿದ್ದಾಗ ಅದನ್ನು ಪುನಃ ತುಂಬಿಸಲಾಗುತ್ತದೆ. ಪ್ರವಾಹ ಪರಿಸ್ಥಿತಿ ಅಥವಾ ಭೂಕುಸಿತದಿಂದ ರಸ್ತೆ ಸಂಪರ್ಕ ಕಡಿತಗೊಂಡಿದ್ದರೂ ಸಹ ಆಸ್ಪತ್ರೆಯಲ್ಲಿ ಆಮ್ಲಜನಕದ ಉತ್ತಮ ಸಂಗ್ರಹವಿರುತ್ತದೆ. ಆಸ್ಪತ್ರೆಯಲ್ಲಿ ಅವಶ್ಯವಿರುವಷ್ಟು ಆಮ್ಲಜನಕದ ಸಂಗ್ರಹ ಇರುವುದರಿಂದ ಕೊಡಗು ಜಿಲ್ಲೆಯ ಜನರಿಗೆ ಅಗತ್ಯ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.