ದಲಿತ ಸಂಘರ್ಷ ಸಮಿತಿಯ ಕೊಡಗು ಘಟಕ ಪುನರ್ ರಚನೆ : ದುರ್ಬಲರ ಪರ ಹೋರಾಟಕ್ಕೆ ಕರೆ

ಮಡಿಕೇರಿ ಅ.13 : ಪ್ರೊ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಘಟಕ ಪುನರ್ ರಚನೆಗೊಂಡಿದ್ದು, ಜಿಲ್ಲಾ ಸಂಚಾಲಕರಾಗಿ ದಾಮೋದರ್ ಆಯ್ಕೆಯಾಗಿದ್ದಾರೆ.
ಮಡಿಕೇರಿಯ ಡಾ.ಅಂಬೇಡ್ಕರ್ ಭವನದಲ್ಲಿ ನಡೆದ ಸಮಿತಿಯ 46ನೇ ವರ್ಷದ ಸಭೆಯಲ್ಲಿ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು.
ಜಿಲ್ಲಾ ಖಜಾಂಚಿಯಾಗಿ ಗಾಯತ್ರಿ ನರಸಿಂಹ, ಜಿಲ್ಲಾ ಸಂಘಟನಾ ಸಂಚಾಲಕರಾಗಿ ಲತೇಶ್, ಸುರೇಶ್, ಟಿ.ಜಿ.ರಘು, ಮಡಿಕೇರಿ ತಾಲ್ಲೂಕು ಸಂಚಾಲಕ ಹೆಚ್.ಎಲ್.ಕುಮಾರ್, ವಿರಾಜಪೇಟೆ ತಾಲ್ಲೂಕು ಸಂಚಾಲಕ ಹೆಚ್.ವಿ.ರಾಮ್‍ದಾಸ್, ಸೋಮವಾರಪೇಟೆ ತಾಲ್ಲೂಕು ಸಂಚಾಲಕರಾಗಿ ಮಂಜುನಾಥ್ ಅವರುಗಳು ಆಯ್ಕೆಯಾದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಹೆಣ್ಣೂರು ಶ್ರೀನಿವಾಸ್, ನೂತನ ಪದಾಧಿಕಾರಿಗಳು ಎಲ್ಲಾ ಶೋಷಿತ ಸಮುದಾಯದ ಪರ ಚಳುವಳಿಗಳನ್ನು ರೂಪಿಸಬೇಕೆಂದು ಕರೆ ನೀಡಿದರು. ಇಂದಿನ ಅವ್ಯವಸ್ಥೆಗಳನ್ನು ಅರ್ಥ ಮಾಡಿಕೊಂಡು ದುರ್ಬಲರಿಗೆ ನ್ಯಾಯ ಒದಗಿಸುವ ಕಾರ್ಯ ಮಾಡಬೇಕು ಮತ್ತು ಜನಜಾಗೃತಿ ಮೂಡಿಸಬೇಕೆಂದರು.
ಮದೆನಾಡು ಕಾಲೇಜು ಪ್ರಾಧ್ಯಾಪಕ ಸಿದ್ದರಾಜು ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ವಿಶ್ವದಲ್ಲಿಯೇ ಶ್ರೇಷ್ಠ ವ್ಯಕ್ತಿಯಾಗಿದ್ದು, ಸಮಾನತೆ, ಸಾಮಾಜಿಕ ನ್ಯಾಯವನ್ನು ಒದಗಿಸಿದ್ದಾರೆ. ದೇಶದಲ್ಲಿ ಜಾತಿ ವ್ಯವಸ್ಥೆಯಿಂದ ಹೊರಬರಬೇಕಾದರೆ ಶಿಕ್ಷಣ ಅತೀ ಅಗತ್ಯ ಎಂದು ಅಭಿಪ್ರಾಯಪಟ್ಟರು.
ರಾಜ್ಯ ಸಂಘಟನಾ ಸಂಚಾಲಕ ಜೆ.ಶ್ರೀನಿವಾಸುಲು ಮಾತನಾಡಿ, ಕಳೆದ ಮೂರು ವರ್ಷಗಳಿಂದ ಸಂಘಟನೆ ಹಿಂದುಳಿದಿದ್ದು, ಇದನ್ನು ಬಲಪಡಿಸಬೇಕಾಗಿದೆ. ಪ್ರೊ.ಕೃಷ್ಣಪ್ಪ ಅವರ ವಿಚಾರಧಾರೆಯನ್ನು ಮುಂದಿಟ್ಟುಕೊಂಡು ಸಂಘಟನೆಯನ್ನು ಬಲ ಪಡಿಸಬೇಕಾಗಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಖಜಾಂಚಿ ಗಾಯತ್ರಿ ನರಸಿಂಹ, ಸಂಘಟನೆ ಜಾತಿ, ಧರ್ಮ ಮೀರಿ ಸಮಾಜದ ಬೆಳವಣಿಗೆಗೆ ಶ್ರಮಿಸಬೇಕು, ಶೋಷಿತ ವರ್ಗಗಳ ಅಭ್ಯುದಯಕ್ಕಾಗಿ ಶ್ರಮಿಸುವ ಮೂಲಕ ನಿರಂತರ ಕಾರ್ಯಪ್ರವೃತರಾಗಬೇಕು ಎಂದು ತಿಳಿಸಿದರು.
ಸಮಿತಿಯ ಹಿರಿಯ ಸದಸ್ಯರುಗಳಾಗಿ ಸೇವೆ ಸಲ್ಲಿಸಿ ನಿಧನರಾದ ಹೆಚ್.ಟಿ.ಗಂಗಯ್ಯ ಮತ್ತು ಬಸವರಾಜು ಅವರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಅರುಂಧತಿಯಾರ್ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಪಳನಿ ಪ್ರಕಾಶ್ ಮಾತನಾಡಿ ಸಂಘಟನೆಯ ಬೆಳವಣಿಗೆಗಾಗಿ ಸಲಹೆ ಸೂಚನೆಗಳನ್ನು ನೀಡಿದರು.
ಪ್ರಮುಖರಾದ ಹೆಚ್.ಪಿ.ಶಿವಕುಮಾರ್, ಹೆಚ್.ಟಿ.ಕಾವೇರಪ್ಪ, ನಜೀರ್ ಸುನಿಲ್ ಪಾಲಿಬೆಟ್ಟ, ದುರ್ಗೇಶ್, ಶುಭ, ಹೆಚ್. ಹೆಚ್. ಮಹಾದೇವ ಹಾಗೂ ಮತ್ತಿತರ ಕಾರ್ಯಕರ್ತರು ಭಾಗವಹಿಸಿದ್ದರು.
ಹೆಚ್.ಪಿ.ಶಿವಕುಮಾರ್ ಪ್ರಾರ್ಥಿಸಿ, ಮಹದೇವ್ ಸ್ವಾಗತಿಸಿದರು.