ಮಡಿಕೇರಿ ದಸರಾ ಸರಳ : ಕರಗಗಳಿಗೆ ಮನೆ ಪೂಜೆ ಇಲ್ಲ : ವಿಜಯದಶಮಿಯಂದು ಜೀಪ್ ನಲ್ಲಿ ದೇವಿಮೂರ್ತಿಯ ಮೆರವಣಿಗೆ : ನೆಂಟರಿಷ್ಟರು ಬರುವುದು ಬೇಡ

ಮಡಿಕೇರಿ ಅ.14 : ಪ್ರತೀ ವರ್ಷ ವಿಜೃಂಭಣೆಯಿಂದ ಆಚರಿಸಲ್ಪಡುತ್ತಿದ್ದ ಮಡಿಕೇರಿ ದಸರಾವನ್ನು ಈ ಬಾರಿ ಕೋವಿಡ್ ಹಿನ್ನೆಲೆ ಸರಳ ಮತ್ತು ಸಾಂಪ್ರದಾಯಕವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಮಡಿಕೇರಿ ನಗರ ದಸರಾ ಸಮಿತಿಯ ಕಾರ್ಯಾಧ್ಯಕ್ಷ ರಾಬಿನ್ ದೇವಯ್ಯ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸರ್ಕಾರದ ಮಾರ್ಗಸೂಚಿಯನ್ವಯ ಸಾಮಾಜಿಕ ಕಳಕಳಿ ಹಾಗೂ ಕೊಡಗಿನ ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ಈ ಬಾರಿ ಸರಳ ರೀತಿಯಲ್ಲಿ ಸಾಂಪ್ರದಾಯಿಕ ಕರಗ ಪೂಜೆಯೊಂದಿಗೆ ದಸರಾ ಆರಂಭಗೊಳ್ಳಲಿದೆ ಎಂದರು.
ಅ.17 ರಂದು ಸಂಜೆ 5 ಗಂಟೆಗೆ ಸರಿಯಾಗಿ ಪಂಪಿನ ಕೆರೆಯಿಂದ ನಗರದ ನಾಲ್ಕು ಶಕ್ತಿ ದೇವತೆಗಳಾದ ಕುಂದುರು ಮೊಟ್ಟೆ ಶ್ರೀಚೌಟಿ ಮಾರಿಯಮ್ಮ, ಶ್ರೀಕಂಚಿ ಕಾಮಾಕ್ಷಿಯಮ್ಮ, ಶ್ರೀದಂಡಿನ ಮಾರಿಯಮ್ಮ ಹಾಗೂ ಶ್ರೀಕೋಟೆ ಮಾರಿಯಮ್ಮ ದೇವಾಲಯಗಳ ಕರಗ ಹೊರಡಲಿವೆ ಎಂದರು.
ಕರಗಗಳು ಪಂಪಿನಕೆರೆಯಿಂದ ಬನ್ನಿ ಮಂಟಪಕ್ಕೆ ಬಂದ ನಂತರ ಪೂಜಾ ವಿಧಿವಿಧಾನಗಳು ನೆರವೇರಲಿದ್ದು, ಬಳಿಕ ಶ್ರೀಕೋದಂಡರಾಮ ದೇವಾಲಯ, ಶ್ರೀಚೌಡೇಶ್ವರಿ ದೇವಾಲಯ, ಶ್ರೀಕನ್ನಿಕಾ ಪರಮೇಶ್ವರಿ ದೇವಾಲಯ ಹಾಗೂ ಇತಿಹಾಸ ಪ್ರಸಿದ್ಧ ಪೇಟೆ ಶ್ರೀರಾಮಮಂದಿರ ದೇವಾಲಯಗಳಲ್ಲಿ ಪೂಜೆಯನ್ನು ಸ್ವೀಕರಿಸುತ್ತವೆ. ನಂತರ ತಮ್ಮ ತಮ್ಮ ದೇವಾಲಯಗಳಿಗೆ ತೆರಳಲಿವೆ ಎಂದು ತಿಳಿಸಿದರು.
ನವರಾತ್ರಿಯ ಒಂಭತ್ತು ದಿನಗಳಲ್ಲಿ ನಾಲ್ಕು ಶಕ್ತಿ ದೇವಾಲಯಗಳಲ್ಲಿ ಕರಗಗಳಿಗೆ ವಿಶೇಷ ಪೂಜೆಗಳು ಎಂದಿನಂತೆ ನಡೆಯಲಿದ್ದು, ಸಾರ್ವಜನಿಕರು ಬಂದು ಪೂಜೆ ಸಲ್ಲಿಸುವ ಅವಕಾಶ ಕಲ್ಪಿಸಲಾಗಿದೆ ಎಂದರು.
ಕರಗೋತ್ಸವದ ಆರಂಭದ ಪೂಜಾ ಕೈಂಕರ್ಯ ಸಂದರ್ಭ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಲ್ಲಾಡಳಿತ, ದಸರಾ ಸಮಿತಿ ಪದಾಧಿಕಾರಿಗಳು ಮಾತ್ರ ಸಿಮೀತ ಸಂಖ್ಯೆಯಲ್ಲಿ ಸೇರಲಿದ್ದಾರೆ.
::: ಮನೆಯಿಂದಲೇ ಕೈಮುಗಿಯಿರಿ :::
ಒಂದು ಕರಗದ ನಂತರ ಮತ್ತೊಂದು ಕರಗ ಅರ್ಧ ಗಂಟೆಗಳ ಅಂತರದಲ್ಲಿ ಹೊರ ಬರಲಿದ್ದು, ಕರಗ ಬರುವ ದಾರಿಯಲ್ಲಿ ಯಾವುದೇ ಪೂಜೆಯನ್ನು ಸ್ವೀಕಾರ ಮಾಡುವುದಿಲ್ಲ. ಸಾರ್ವಜನಿಕರು ಮನೆಯಿಂದಲೇ ದೇವರಿಗೆ ನಮಸ್ಕರಿಸುವಂತೆ ತಿಳಿಸಿದ ಅವರು, ಶಿಸ್ತಿಗೆ ಹೆಸರುವಾಸಿಯಾಗಿರುವ ಕೊಡಗು ಜಿಲ್ಲೆಯ ಜನತೆ ಕರಗ ಮೆರವಣಿಗೆ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ಜನ ಸಂದಣಿ ಆಗದ ರೀತಿಯಲ್ಲಿ ಸಹಕರಿಸುವಂತೆ ರಾಬಿನ್ ದೇವಯ್ಯ ಮನವಿ ಮಾಡಿದರು.
::: ಜೀಪ್ ನಲ್ಲಿ ಕಳಶ :::
ಅ.26 ವಿಜಯದಶಮಿಯ ದಿನದಂದು 10 ದಶಮಂಟಪಗಳು ಪಿಕ್ ಅಪ್ ಜೀಪ್ ಬಳಸಿ ಕಳಶ ಹಾಗೂ ಒಂದು ದೇವಿಯ ಸಣ್ಣ ಮೂರ್ತಿಯೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ರಾತ್ರಿ ಬನ್ನಿ ಮಂಟಪಕ್ಕೆ ತೆರಳಿ ಬನ್ನಿ ಕಡೆಯುವ ಮೂಲಕ ಸಾಂಪ್ರದಾಯಿಕ ಆಚರಣೆಯೊಂದಿಗೆ ದಸರಾ ಕಾರ್ಯಕ್ರಮವನ್ನು ಸಮಾಪ್ತಿಗೊಳಿಸಲಾಗುವುದು ಎಂದರು.
ಕೋವಿಡ್ ಹಿನ್ನೆಲೆ ಸರ್ಕಾರದ ಮಾರ್ಗಸೂಚಿಯಂತೆ ಸಾಂಸ್ಕೃತಿಕ ಚಟುವಟಿಕೆಗಳು, ಕ್ರೀಡಾ ಚಟುವಟಿಕೆಗಳು, ಕವಿಗೋಷ್ಠಿ, ಯುವ ದಸರಾ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಪ್ರತಿಯೊಬ್ಬರು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ಸಲಹೆ ನೀಡಿದ ರಾಬಿನ್ ದೇವಯ್ಯ, ನೆಂಟರಿಷ್ಟರು ನಗರಕ್ಕೆ ಬರುವುದನ್ನು ನಿಯಂತ್ರಿಸುವಂತೆ ಮನವಿ ಮಾಡಿದರು.
ದಸರಾ ಸಮಿತಿ ಪೋಷಕರು ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನೀಲ್ ಸುಬ್ರಮಣಿ ಅವರು ಮಾತನಾಡಿ, ಕೊಡಗಿನ ಇತಿಹಾಸದಲ್ಲಿ ಮಡಿಕೇರಿ ದಸರಾ ಹೆಚ್ಚು ಪ್ರಖ್ಯಾತಿ ಪಡೆದಿದ್ದು, ಇತರ ಜಿಲ್ಲೆಗಳಿಂದಲೂ ಜಾತಿ, ಧರ್ಮ ಭೇದವಿಲ್ಲದೇ ಎಲ್ಲರೂ ಆಗಮಿಸುತ್ತಾರೆ. ಆದರೆ ಈ ಬಾರಿ ಪರಿಸ್ಥಿತಿ ಭಿನ್ನವಾಗಿರುವುದರಿಂದ ಜಿಲ್ಲಾಧಿಕಾರಿ, ದಸರಾ ಸಮಿತಿ, ಉಸ್ತುವಾರಿ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಎಲ್ಲರೂ ಸೇರಿ ಮೂರು ಬಾರಿ ಸಭೆ ನಡೆಸಿ, ಸಾರ್ವಜನಿಕರ ಸಲಹೆ ಸೂಚನೆಗನ್ನು ಪಡೆದುಕೊಂಡು ದೇವತಾ ಕಾರ್ಯಕ್ಕೆ ದಕ್ಕೆ ಬಾರದ ರೀತಿಯಲ್ಲಿ ದಸರಾವನ್ನು ಸರಳ ಮತ್ತು ಸಾಂಪ್ರದಾಯಿಕ ರೀತಿಯಲ್ಲಿ ಆಚರಿಸಲು ನಿರ್ಧರಿಸಲಾಗಿದೆ ಎಂದರು.
ಕರಗ ಸಂದರ್ಭ ಜನಪ್ರತಿನಿಧಿಗಳು ಸೇರಿದಂತೆ ಕರಗ ಹೊರುವವರಿಗೂ ಕೋವಿಡ್ ಪರೀಕ್ಷೆ ನಡೆಸಾಗುವುದು ಎಂದರು. ಅಲ್ಲದೆ ಕರಗದ ಜೊತೆಗೆ ಸಾಗುವವರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ನಡೆಸಿದ ಪತ್ರವನ್ನು ಹೊಂದಿರಬೇಕು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು, ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು, ಸರ್ಕಾರದ ನಿಯಮಾವಳಿಯನ್ನು ಪಾಲಿಸಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ಸಮಿತಿಯ ಉಪಾಧ್ಯಕ್ಷರುಗಳಾದ ನೆರವಂಡ ಜೀವನ್, ಬಿ.ಎಂ.ರಾಜೇಶ್, ಪ್ರಧಾನ ಕಾರ್ಯದರ್ಶಿ ಬಿ.ಕೆ.ಜಗದೀಶ್ ಹಾಗೂ ಖಜಾಂಚಿ ಉಮೇಶ್ ಸುಬ್ರಮಣಿ ಉಪಸ್ಥಿತರಿದ್ದರು.
