ಅತ್ಯಾಚಾರ ಪ್ರಕರಣ : ಮಹಿಳೋದಯ ಮಹಿಳಾ ಒಕ್ಕೂಟದಿಂದ ಮಡಿಕೇರಿಯಲ್ಲಿ ಪ್ರತಿಭಟನೆ

ಮಡಿಕೇರಿ ಅ. 14 : ಉತ್ತರ ಪ್ರದೇಶದ ಹಥಾರಸ್ ನಲ್ಲಿ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಮಹಿಳೋದಯ ಮಹಿಳಾ ಒಕ್ಕೂಟ ಒಡಿಪಿ ಸಂಸ್ಥೆಯ ಕೊಡಗು ಜಿಲ್ಲಾ ಘಟಕ ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಸಮಿತಿಯ ಪ್ರಮುಖರು ಹಾಗೂ ಪದಾಧಿಕಾರಿಗಳು ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಒಡಿಪಿ ಸಂಸ್ಥೆಯ ಜಿಲ್ಲಾ ವಲಯ ಸಂಯೋಜಕಿ ಜಾಯ್ಸ್ ಮ್ಯಾನೆಜಸ್ ಮಾತನಾಡಿ, ನಾಯಕತ್ವದ ಕೊರತೆ, ತೀರ್ಮಾನ ತೆಗೆದುಕೊಳ್ಳುವಿಕೆಯಲ್ಲಿ ಹಿಂಜರಿಕೆ ಮತ್ತು ಆರ್ಥಿಕ ದುರ್ಬಲತೆ, ಶಿಕ್ಷಣ, ಜ್ಞಾನದ ಕೊರತೆ ಮಹಿಳೆಯರನ್ನು ಅಬಲೆಯರ ನ್ನಾಗಿಸುತ್ತಿದ್ದು, ಇದು ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರನ್ನು ಹಿಂದೆ ಉಳಿಯುವಂತೆ ಮಾಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಹಿಳೆಯರ ಮೇಲೆ ನಡೆಯುವ ಮಾನಸಿಕ ಹಾಗೂ ದೈಹಿಕ ಹಿಂಸೆ, ಅತ್ಯಾಚಾರ, ಮಹಿಳಾ ಸಾಗಾಣಿಕೆ, ಕೌಟುಂಬಿಕ ಹಿಂಸೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದು ಮಹಿಳೆಯರನ್ನು ಅಬಲೆಯರನ್ನಾಗಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನಾದರೂ ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡು ದೇಶದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು, ಅತ್ಯಾಚಾರ ಮತ್ತು ಹತ್ಯೆ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಶೀಘ್ರವಾಗಿ ಇತ್ಯಾರ್ಥ ಪಡಿಸಬೇಕು ಹಾಗೂ ಹತ್ಯೆ ಪ್ರಕರಣ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಪುನರಾವರ್ತನೆಗೊಳ್ಳದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
:: ಬೇಡಿಕೆಗಳು ::
ಆರೋಪಿಗಳು ಯಾವುದೇ ಜಾತಿ ಧರ್ಮಕ್ಕೆ ಸೇರಿದ್ದರೂ ಕಠಿಣ ಶಿಕ್ಷೆಗೆ ಒಳಪಡಿಸಬೇಕು, ಮೃತರ ಮನೆಯವರ ಒಪ್ಪಿಗೆ ಇಲ್ಲದೆ ಶವ ಸಂಸ್ಕಾರ ಮಾಡಿದ ಪೊಲೀಸರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು, ಆರೋಪಿಗಳ ಪರವಾಗಿ ವಾದ ಮಾಡುವ ವಕೀಲರನ್ನು ತಡೆಹಿಡಿಯಬೇಕು, ಪೊಲೀಸ್ ವರದಿಗಳು ಹಾಗೂ ವೈದ್ಯಕೀಯ ವರದಿಗಳನ್ನು ಆತ್ಮ ಸಾಕ್ಷಿಯಾಗಿ ಪರಿಶೀಲಿಸಬೇಕು. ಅನ್ಯಾಯಕ್ಕೊಳಗಾದ ಕುಟುಂಬಕ್ಕೆ ಕೂಡಲೇ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಒತ್ತಾಯಿಸಿದರು.
ಮನವಿಯನ್ನು ಜಿಲ್ಲಾಡಳಿತ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದರು.
ಒಕ್ಕೂಟ ಕಾರ್ಯಕರ್ತರಾದ ವಿಜಯ, ನಾರಾಯಣ ಸದಸ್ಯರಾದ ಫಿಲೋಮಿನಾ, ಮೇರಿ, ಜುಲೇಕಾಬಿ, ಫಿಲೋಮಿನಾ ದೇವದಾಸ್, ನಾಗವೇಣಿ, ನೇತ್ರಾ, ಸುಕನ್ಯ, ಜಯಲಕ್ಷ್ಮಿ, ತಾರಾ, ಕಲಾವತಿ, ಲೀಲಾವತಿ. ಪಂಕಜ, ಭಾಗ್ಯ ಮತ್ತಿತರರು ಇದ್ದರು.
